2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ ಎಂದ ಶಿವಕುಮಾರ್ ಉದಾಸಿ
ಹಾವೇರಿ, ಜೂನ್ 6: ಹಾವೇರಿ ಲೋಕಸಭಾ ಸದಸ್ಯರಾಗಿರುವ ಶಿವಕುಮಾರ್ ಉದಾಸಿ ಅವರ ಚುನಾವಣಾ ರಾಜಕೀಯ ತ್ಯಜಿಸುವ ನಿರ್ಧಾರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಉದಾಸಿ ಅವರು 2009ರಲ್ಲಿ ಗದಗ ಹಾವೇರಿ ಕ್ಷೇತ್ರದಿಂದ ಲೋಕಸಭೆಗೆ ಪಾದಾರ್ಪಣೆ ಮಾಡಿದ್ದರು. ಅವರು 2014 ಮತ್ತು 2019 ರ ಚುನಾವಣೆಗಳಲ್ಲಿ ಮರು ಆಯ್ಕೆಯೂ ಆಗಿದ್ದವರು. ಈಗ ಸಂಸತ್ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳುವ ಉದಾಸಿ ನಿರ್ಧಾರ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಆಘಾತ ಮೂಡಿಸಿದೆ.

2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರಲು ಒಂದು ವರ್ಷದ ಹಿಂದೆಯೇ ನಿರ್ಧರಿಸಿದ್ದೆ. ಪಕ್ಷದ ಮುಖಂಡರಿಗೆ ಇದೇ ವಿಷಯವನ್ನು ತಿಳಿಸಿದ್ದೇನೆ. ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಕೈಗೊಂಡಿದ್ದೇನೆ. ಹೀಗಾಗಿ ಮುಂಬರುವ ಲೋಕಸಭೆಗೆ ನಾನು ಟಿಕೆಟ್ ಆಕಾಂಕ್ಷಿಯಲ್ಲ ಎಂದು ಮಾಜಿ ರಾಜ್ಯ ಸಚಿವ ದಿವಂಗತ ಸಿ ಎಂ ಉದಾಸಿ ಅವರ ಪುತ್ರ ಉದಾಸಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಬಿಇ ಪದವೀಧರರಾಗಿರುವ ಶಿವಕುಮಾರ್ ಉದಾಸಿ ಅವರು ಮೂರು ಬಾರಿ ಸಂಸದರಾಗಿ, ಹಣಕಾಸು ಮತ್ತು ಬಾಹ್ಯ ವ್ಯವಹಾರಗಳ ಸಂಸದೀಯ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪ್ರಸ್ತುತ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇಷ್ಟು ವರ್ಷ ನಮ್ಮ ಉದ್ಯಮ ಸಂಸ್ಥೆಯ ವ್ಯಾವಹಾರಿಕ ಪಾಲುದಾರರು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಇದರಿಂದ ನನಗೆ ಅನುಕೂಲವಾಗಿತ್ತು. ಆದರೆ ಇತ್ತೀಚೆಗೆ ನಮ್ಮ ಪಾಲುದಾರ ಅನಾರೋಗ್ಯಕ್ಕೀಡಾಗಿದ್ದಾರೆ. ಸಂಸ್ಥೆಯಲ್ಲಿ ಸುಮಾರು 250 ಮಂದಿ ಉದ್ಯೋಗಿಗಳಿದ್ದಾರೆ. ಹೀಗಾಗಿ ನಾನೇ ಸಂಪೂರ್ಣ ವ್ಯವಹಾರದ ಜವಾಬ್ದಾರಿ ನೋಡಿಕೊಳ್ಳಬೇಕಾಗಿರುವುದರಿಂದ ಮುಂದಿನ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ 2022 ಡಿಸೆಂಬರ್ 4ರಂದು ಕೂಡ ಶಿವಕುಮಾರ್ ಉದಾಸಿ ಅವರು ನಾನು ಇನ್ನು ಒಂದೂವರೆ ವರ್ಷಕ್ಕೆ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದರು.












Click it and Unblock the Notifications