ಕಾಂಗ್ರೆಸ್ ಟಿಕೆಟ್‌ಗೆ ಮಾಜಿ ಡಿಸಿಎಂ ಇಬ್ಬರು ಪುತ್ರಿಯರ ಪೈಪೋಟಿ!
ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು ಡಿಸಿಎಂ ಆಗಿದ್ದ ಎಂ. ಪಿ. ಪ್ರಕಾಶ್ ಪುತ್ರಿಯರಿಬ್ಬರು ಪೈಪೋಟಿ ನಡೆಸುತ್ತಿದ್ದಾರೆ.
ಬೆಂಗಳೂರು, ಫೆಬ್ರವರಿ 06; ಕರ್ನಾಟಕದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ವಿವಿಧ ಪಕ್ಷಗಳ ಟಿಕೆಟ್‌ಗಾಗಿ ಪೈಪೋಟಿ ಜೋರಾಗಿದೆ. ಕಾಂಗ್ರೆಸ್ ಟಿಕೆಟ್ ಪಡೆಯಲು ಒಂದೇ ಕ್ಷೇತ್ರಕ್ಕೆ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಕ್ಷೇತ್ರವೊಂದರ ಕಾಂಗ್ರೆಸ್ ಟಿಕೆಟ್‌ಗೆ ಇಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಪಕ್ಷದ ನಾಯಕರ ತಲೆ ನೋವಿಗೂ ಕಾರಣವಾಗಿದೆ. ಆ ಕ್ಷೇತ್ರವೇ ಹರಪನಹಳ್ಳಿ.
ಮಾಜಿ ಉಪಮುಖ್ಯಮಂತ್ರಿ ದಿ. ಎಂ. ಪಿ. ಪ್ರಕಾಶ್ ಪುತ್ರಿಯರಾದ ವೀಣಾ ಮತ್ತು ಲತಾ ಹರಪನಹಳ್ಳಿ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಇಬ್ಬರೂ ಸಹ ಹರಪನಹಳ್ಳಿ ಕ್ಷೇತ್ರದಿಂದ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ.

ಎಂ. ಪಿ. ಪ್ರಕಾಶ್ ಪುತ್ರ ಎಂ. ಪಿ. ರವೀಂದ್ರ ಮೊದಲು ಕ್ಷೇತ್ರದ ಶಾಸಕರಾಗಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯ ಕರುಣಾಕರ ರೆಡ್ಡಿ ವಿರುದ್ಧ ಅವರು ಸೋಲು ಕಂಡಿದ್ದರು. ಬಳಿಕ ಅವರ ಅಕಾಲಿಕ ಮರಣದ ಬಳಿಕ ಈಗ ಸಹೋದರಿಯರು ಟಿಕೆಟ್ ಬಯಸಿದ್ದಾರೆ.
ಇಬ್ಬರೂ ಒಗ್ಗಟ್ಟಾಗಿ ಚುನಾವಣೆಯನ್ನು ಎದುರಿಸಿ ಎಂದು ರಾಜ್ಯದ ಕಾಂಗ್ರೆಸ್ ನಾಯಕರು ಕಿವಿಮಾತು ಹೇಳಿದ್ದರು. ಆದರೆ ಇದಕ್ಕೆ ಇಬ್ಬರೂ ಸಹ ಒಪ್ಪಿಲ್ಲ. ಟಿಕೆಟ್ ಪಡೆಯಲು ಇಬ್ಬರೂ ಸಹ ಪಟ್ಟು ಹಿಡಿದಿದ್ದಾರೆ.
ಕಳೆದ ಚುನಾವಣೆ ಫಲಿತಾಂಶ; 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಜಿ. ಕುರುಣಾಕರ ರೆಡ್ಡಿ 67,603 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎಂ. ಪಿ. ರವೀಂದ್ರ 57,956 ಮತಗಳನ್ನು ಪಡೆದಿದ್ದರು. ಜೆಡಿಎಸ್‌ನ ಅರಸೀಕೆರೆ ಎನ್. ಕೊಟ್ರೇಶ್ 22,783 ಮತಗಳನ್ನು ಪಡೆದಿದ್ದರು.

ಹರಪನಹಳ್ಳಿ ಕ್ಷೇತ್ರದಲ್ಲಿ ಎಂ. ಪಿ. ರವೀಂದ್ರ 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ರಾಜಕೀಯ, ಸಹಕಾರಿ, ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಕೆಎಂಎಫ್ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದ್ದರು.
ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡಿದ್ದರು. ಸಂವಿಧಾನದ 371ಜೆ ಪಡೆಯುವ ನಿಟ್ಟಿನಲ್ಲಿ ಪಕ್ಷಾತೀತ ಹೋರಾಟ ನಡೆಸಿದ್ದರು. ಸರ್ಕಾರ ಒಪ್ಪದಿದ್ದಾಗ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿ, ಕ್ಷೇತ್ರದ ಜನರ ಜೊತೆ ನಿಂತಿದ್ದರು.
ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಅವರು 2018ರ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ನಿಧನ ಹೊಂದಿದರು. ಈಗ ಮತ್ತೆ ವಿಧಾನಸಭೆ ಚುನಾವಣೆ ಎದುರಾಗಿದೆ. ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಹಲವು ಟಿಕೆಟ್ ಆಕಾಂಕ್ಷಿಗಳು; ದಿ. ಎಂ. ಪಿ. ಪ್ರಕಾಶ್ ಪುತ್ರಿಯರಾದ ವೀಣಾ ಮತ್ತು ಲತಾ ಹರಪನಹಳ್ಳಿ ಮಾತ್ರವಲ್ಲ ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಹಲವು ಆಕಾಂಕ್ಷಿಗಳಿದ್ದಾರೆ.
ಇಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ ಸಹ ಟಿಕೆಟ್ ಆಕಾಂಕ್ಷಿ. ಕೆಲವು ದಿನಗಳ ಹಿಂದೆ ಮಾತನಾಡಿದ್ದ ಅವರು, "ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದು, ಅವಕಾಶ ನೀಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ" ಎಂದು ಹೇಳಿದ್ದರು.
"25 ವರ್ಷಗಳಿಂದ ಹೂವಿನಹಡಗಲಿ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ರಾಜಕೀಯದ ಜೊತೆ ಶೈಕ್ಷಣಿಕ, ಸಹಕಾರ ಕ್ಷೇತ್ರದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ" ಎಂದು ತಿಳಿಸಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ದಿ. ಎಂ. ಪಿ. ಪ್ರಕಾಶ್ ಕುಟುಂಬದವರಿಗೆ ಟಿಕೆಟ್ ನೀಡುವ ಮೂಲಕ ಮತ್ತೆ ಹರಪನಹಳ್ಳಿಯನ್ನು ತನ್ನ ವಶಕ್ಕೆ ಪಡೆಯಲು ಕಾಂಗ್ರೆಸ್ ತಂತ್ರ ರೂಪಿಸಲಿದೆಯೇ? ಕಾದು ನೋಡಬೇಕು.
ಹೊಸ ಪಕ್ಷ ಸ್ಥಾಪನೆ ಮಾಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಸಹ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪೈಪೋಟಿ ನೀಡುವ ನಿರೀಕ್ಷೆ ಇದೆ.












Click it and Unblock the Notifications