Jagdish Shettar: ಸಿಎಂ ವಿರುದ್ದ ಪ್ರಾಸಿಕ್ಯೂಷನ್ ನೀಡಿರುವುದು ಕೆಲ ಕಾಂಗ್ರೆಸ್ ನಾಯಕರಿಗೆ ಖುಷಿ ತಂದಿದೆ- ಜಗದೀಶ್ ಶೆಟ್ಟರ್
ಹುಬ್ಬಳ್ಳಿ ಆಗಸ್ಟ್ 17: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ವಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರನ್ನು ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಸಿಎಂ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಅವರು, 'ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ನೇರವಾಗಿ ಭಾಗಿಯಾಗಿದ್ದಾರೆ. ಅದು ಸ್ಪಷ್ಟವಾಗಿದೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕು. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿರುವುದು ಕೆಲ ಕಾಂಗ್ರೆಸ್ ನಾಯಕರಿಗೆ ಖುಷಿ ಇದೆ' ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ನೀಡಿದ ವಿಚಾರವಾಗಿ ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಕಾನೂನಿಗೆ ಗೌರವ ಕೊಡಬೇಕು. ನನ್ನ ಮೇಲೆ ಆಪಾದನೆ ಬಂದಾಗ ನಾನು ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಟ್ಟೆ. ಅವರು ಸಹ ರಾಜೀನಾಮೆ ಕೊಟ್ಟು ತನಿಖೆಗೆ ಸಹಕಾರ ಕೊಡ್ತಾರೆ ಅಂತಾ ನನಗೆ ವಿಶ್ವಾಸ ಇದೆ ಎಂದಿದ್ದಾರೆ.
ಆದರೆ ನನಗೆ ಒಂದು ಅನುಮಾನ ಅಂದರೆ ಎಲ್ಲಿ ಅವರ ಶ್ರೀಮತಿ ಅವರನ್ನು ಎಲ್ಲಿ ಸೇರಿಸಿಬಿಡ್ತಾರೋ ಅಂತಾ ಅನುಮಾನ. ಪಾಪ ಅವರು ಗೌರಮ್ಮ ರೀತಿ ಇದ್ದವರು. ಅವರ ಮೇಲೆ ಅಂತಹ ಆಪಾದನೆ ಬರದೇ ಇರಲಿ ಅಂತಾ ಬೇಡಿಕೊಳ್ಳುತ್ತೇನೆ. ಸಿದ್ದರಾಮಯ್ಯ ಕಾನೂನು ಬದ್ದವಾಗಿ ಹೋರಾಟ ಮಾಡಿ ಕ್ಲೀನ್ ಚಿಟ್ ಸಿಕ್ಕಿ ಯಶಸ್ವಿಯಾಗಿ ಹೊರಗೆ ಬರಲಿ ಎಂದು ಕೆ.ಎಸ್.ಈಶ್ವರಪ್ಪ ಕೆಣಕಿದ್ದಾರೆ.

ಶಾಸಕ ಚನ್ನಬಸಪ್ಪ ಹೇಳಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರ ಅನುಮತಿ ವಿಚಾರವಾಗಿ ಶಿವಮೊಗ್ಗದಲ್ಲಿ ಶಾಸಕ ಚನ್ನಬಸಪ್ಪ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯ ಹೋರಾಟ ಬೆಂಗಳೂರು ಮೈಸೂರು ಪಾದಯಾತ್ರೆಗೆ ಯಶಸ್ಸು ಸಿಕ್ಕಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಕೊಟ್ಟಿರುವ ಅನುಮತಿ ಸ್ವಾಗತಾರ್ಹ. ಇದು ನಮ್ಮ ಹೋರಾಟಕ್ಕೆ ಸಿಕ್ಕಿರುವ ಜಯ' ಎಂದರು.
'ಲಕ್ಷಾಂತರ ಜನ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಯ ವೇಳೆ ಅಲ್ಲಲ್ಲಿ ಬಹಿರಂಗ ಸಭೆ ಮಾಡಿದ್ದೇವು. ರಾಜಕಾರಣಕ್ಕೋಸ್ಕರ ಹೋರಾಟ ಮಾಡಿರಲಿಲ್ಲ. ಯಾವುದೇ ಚುನಾವಣೆ ಇಲ್ಲದ ಸಂದರ್ಭದಲ್ಲಿ ಹೋರಾಟ ಮಾಡಿದ್ದೇವು. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದಿದೆ. ಅದನ್ನು ಸ್ವತಃ ಮುಖ್ಯಮಂತ್ರಿ ಒಪ್ಪಿಕೊಂಡರು. ಆದರೆ ಮುಡಾ ಹಗರಣದ ಬಗ್ಗೆ ಸದನದಲ್ಲಿ ಚರ್ಚೆ ಮಾಡಲಿಲ್ಲ' ಎಂದು ದೂರಿದ್ದಾರೆ.












Click it and Unblock the Notifications