ಪಕ್ಷದ ಶೇ.75ರಷ್ಟು ಮಂದಿಗೆ ಇದು ಇಷ್ಟವಿಲ್ಲ: ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ದ ಸಿಡಿದೆದ್ದ ಬಿಜೆಪಿಯ ಹಿರಿಯ ಸಂಸದ
ಬೆಂಗಳೂರು, ಅಕ್ಟೋಬರ್ 08: ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿ ಹೋರಾಟಕ್ಕಿಳಿದಿರುವುದು ಬಹಿರಂಗವಾದ ವಿಚಾರ. ಆದರೆ ಈ ಮೈತ್ರಿ ಕಾಂಗ್ರೆಸ್ ಪಕ್ಷವನ್ನು ಎದುರಿಸುವ ಬದಲು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಲ್ಲೇ ಆಂತರಿಕ ಬಿರುಕು ಮೂಡಿಸುವ ಸಾಧ್ಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಬಿಜೆಪಿಯೊಂದಿಗೆ ಮೈತ್ರಿ ವಿರೋಧಿಸಿ ಜೆಡಿಎಸ್‌ನ ಅನೇಕ ಮುಖಂಡರು ಈಗಾಗಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಸದ್ಯ ಪಕ್ಷಾಂತರಕ್ಕೂ ಸಜ್ಜಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಬಿಜೆಪಿ ನಾಯಕರು ಕೂಡ ಈ ಮೈತ್ರಿಯನ್ನು ವಿರೋಧಿಸುತ್ತಿರುವುದು ಕಂಡು ಬರುತ್ತಿದ್ದು, ಮಾಜಿ ಸಿಎಂ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದರ ಜೊತೆ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಶೇಕಡ 75ರಷ್ಟು ಮಂದಿಗೆ ಈ ಮೈತ್ರಿ ಇಷ್ಟವಿಲ್ಲ ಎಂದು ನೇರವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಎನ್‌ಡಿಎ ಮೈತ್ರಿಕೂಟವನ್ನು ಬಲಪಡಿಸಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ರಾಜ್ಯದ ನಾಯಕರ ಜೊತೆ ಚರ್ಚೆಯನ್ನೇ ನಡೆಸಿದೆ ಏಕಪಕ್ಷೀಯವಾಗಿ ಮೈತ್ರಿ ಮಾಡಿಕೊಂಡರೆ ಯಾವ ರೀತಿಯ ಅನುಕೂಲ ಆಗಲು ಸಾಧ್ಯ ಎಂದು ಡಿ.ವಿ ಸದಾನಂದ ಗೌಡ ಪ್ರಶ್ನಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತು ಸುಣ್ಣವಾಗಿದ್ದೇವೆ. ಚುನಾವಣೆ ಮುಗಿದು ನಾಲ್ಕು ತಿಂಗಳು ಕಳೆದರೂ ಪರಿಸ್ಥಿತಿ ಬದಲಾಗಿಲ್ಲ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲವಾಗಿ ಬೆಳೆಯುತ್ತಿತ್ತು. ಈಗ ಜೆಡಿಎಸ್ ಜೊತೆ ಮೈತ್ರಿಯಿಂದಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಎರಡನೇ ದರ್ಜೆ ನಾಗರಿಕರಂತೆ ಆಗುತ್ತಾರೆ. ಪಕ್ಷದಲ್ಲಿ ಒಕ್ಕಲಿಗ ನಾಯಕರ ಮಾತುಗಳಿಗೆ ಬೆಲೆಯೇ ಇಲ್ಲದ ಸ್ಥಿತಿ ನಿರ್ಮಾಣ ಆಗಲಿದೆ ಎಂದು ಹೇಳಿದರು.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 25 ಸ್ಥಾನ ಗಳಿಸಿತ್ತು. ಆಗ ಒಂದು ಸ್ಥಾನ ಪಡೆದಿದ್ದ ಜೆಡಿಎಸ್ ಜೊತೆಗಿನ ಮೈತ್ರಿಯೇ ಬಿಜೆಪಿ ದುರ್ಬಲವಾಗಿದೆ ಎನ್ನುವುದನ್ನು ಸೂಚಿಸುವಂತೆ ಮಾಡಿದೆ. ಕಾರ್ಯಕರ್ತರ ಹಂತದಲ್ಲೂ ಈ ಚರ್ಚೆ ಆರಂಭವಾಗಿದೆ. ಇಂತಹದ್ದಕ್ಕೆ ಅವಕಾಶ ಕೊಡಬಾರದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ವಿಧಾನಸಭಾ ಚುನಾವಣೆಯಷ್ಟೂ ಕ್ಷೇತ್ರಗಳ ಅವಕಾಶವಿರದ ಕಾರಣ ಪಕ್ಷದ ಸೀಮಿತ ಮುಖಂಡರಿಗಷ್ಟೇ ಟಿಕೆಟ್ ಸಿಗಲಿದೆ. ಇದೀಗ ಜೆಡಿಎಸ್-ಬಿಜೆಪಿ ಮೈತ್ರಿಯಾದರೆ ಬಿಜೆಪಿ ಸ್ಪರ್ಧೆಗೆ ಅವಕಾಶ ಮತ್ತಷ್ಟು ಕನಿಷ್ಠವಾಗಲಿದೆ. ಹೀಗಾಗಿ ಬಿಜೆಪಿ ಪಕ್ಷದ ಅನೇಕ ಹಿರಿಯ ಮುಖಂಡರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ. ಈ ಕಾರಣದಿಂದ ಬಿಜೆಪಿ ನಾಯಕರು ಚುನಾವಣಾ ಪ್ರಕ್ರಿಯೆ ಆರಂಭದಲ್ಲೇ ಜಾಗ್ರತರಾಗುತ್ತಿದ್ದು, ತಮ್ಮ ಕ್ಷೇತ್ರದ ಟಿಕೆಟ್ ಕೈ ತಪ್ಪದಂತೆ ಎಚ್ಚರ ವಹಿಸುತ್ತಿದ್ದಾರೆ.
ಜೆಡಿಎಸ್‌ನೊಂದಿಗಿನ ಮೈತ್ರಿಗೆ ಮಾಜಿ ಸಚಿವ, ಶಾಸಕ ಎಸ್.ಟಿ ಸೋಮಶೇಖರ್, ಡಿ.ವಿ ಸದಾನಂದ ಗೌಡ ಸೇರಿದಂತೆ ಪಕ್ಷದ ಹಿರಿಯ ನಾಯಕರೇ ಅಸಮಾಧಾನಗೊಳ್ಳುತ್ತಿದ್ದು, ಇದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಬಿಜೆಪಿ ವರಿಷ್ಠರು ಯಾವ ರೀತಿಯ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications