Basavaraj Bommai: ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋದ ಬಸವರಾಜ ಬೊಮ್ಮಾಯಿ
ಹಾವೇರಿ ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ವಿರುದ್ಧದ ಯಾವುದೇ ಮಾನ ಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡದಂತೆ ಪ್ರತಿಬಂಧಕಾದೇಶ ಕೋರಿ ಬೆಂಗಳೂರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರತಿಬಂಧಕಾದೇಶ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿರುವ ಬೆಂಗಳೂರಿನ ಸತ್ರ ನ್ಯಾಯಾಲಯವು ಬುಧವಾರಕ್ಕೆ ಆದೇಶ ಕಾಯ್ದಿರಿಸಿದೆ.
ಬಸವರಾಜ ಬೊಮ್ಮಾಯಿ ಸಲ್ಲಿಸಿರುವ ಮೂಲ ದಾವೆಯ ಭಾಗವಾಗಿ ಮಧ್ಯಂತರ ಅರ್ಜಿಯ ವಿಚಾರಣೆಯನ್ನು 8ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶರಾದ ವಾಣಿ ಎ. ಶೆಟ್ಟಿ ನಡೆಸಿದರು.

ವಕೀಲ ಕೆ.ಎನ್. ಜಗದೀಶ್ ಮತ್ತು ಮಾಧ್ಯಮಗಳು ತಮ್ಮ ವಿರುದ್ಧದ ಆಕ್ಷೇಪಾರ್ಹ ಹೇಳಿಕೆ ಮತ್ತು ಸುದ್ದಿಗಳನ್ನು ಪ್ರಕಟಿಸದಂತೆ ಪ್ರತಿಬಂಧಕಾದೇಶ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಲಾಗಿದ್ದು, ಬುಧವಾರ ಆದೇಶ ನೀಡುವ ಸಾಧ್ಯತೆ ಇದೆ.
ಸಂಸದ ಬಸವರಾಜ ಬೊಮ್ಮಾಯಿ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ವಾದ ಮಾಡಿದ್ದಾರೆ. ಅವರು ನ್ಯಾಯಾಲಯಕ್ಕೆ ಸಂಬಂಧಿತ ದಾಖಲೆಗಳ ಮೆಮೊವನ್ನು ಸಲ್ಲಿಸಿದ್ದು, ಆಗಸ್ಟ್ 28ರಂದು ಆದೇಶ ಕೊಡುವುದಾಗಿ ನ್ಯಾಯಾಲಯ ಹೇಳಿದೆ.
ವಕೀಲ ಜಗದೀಶ್ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ಆಪ್ತ ಸಹಾಯಕ ಪೊಲೀಸರಿಗೆ ದೂರು ಕೊಟ್ಟಿದ್ದು, ನಾನು ವಿಚಾರಣೆಗೆ ಹಾಜರಾಗುತ್ತೇನೆ ಎಂದು ವಕೀಲ ಜಗದೀಶ್ ಹೇಳಿದ್ದಾರೆ.












Click it and Unblock the Notifications