ಡಾ.ಸುಧಾಕರ್ ಆಯೋಜಿಸಿದ್ದ ಭೋಜನಕೂಟಕ್ಕೆ ಬಿಜೆಪಿಯವರೇ ಗೈರು: ಕಮಲದಲ್ಲಿ ತಳಮಳ
ಬೆಂಗಳೂರು, ಮಾರ್ಚ್ 22: ಮೂಲ ಬಿಜೆಪಿಗರು ಮತ್ತು ವಲಸಿಗರು ಎನ್ನುವ ಚರ್ಚೆ ಪಕ್ಷದಲ್ಲಿ ಇದೇನು ಮೊದಲಲ್ಲ. ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹಲವು ಬಾರಿ ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡಿದ್ದರು.
ನಾವು ಬಂದಿದ್ದರಿಂದಲೇ ನೀವು ಸಚಿವರಾಗಿರುವುದು ಎಂದು ಬಾಂಬೆ ಫ್ರೆಂಡ್ಸ್ ಅದಕ್ಕೆ ಕೌಂಟರ್ ಅನ್ನೂ ಕೊಡುತ್ತಿದ್ದರು. ಈ ವಿಚಾರ ಇತ್ತೀಚಿನ ದಿನಗಳಲ್ಲಿ ಪಕ್ಷದೊಳಗೆ ಅಷ್ಟೇನೂ ಚರ್ಚೆಯಾಗುತ್ತಿರಲಿಲ್ಲ. ಕಾರಣ, ದೊಡ್ಡವರ ಖಡಕ್ ಎಚ್ಚರಿಕೆ.
ಯಡಿಯೂರಪ್ಪನವರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನಮಗೆ ಏನು ಬೇಕು ಅದನ್ನು ಸಾಧಿಸುತ್ತಿದ್ದವರು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಎನ್ನುವುದು ಬಿಜೆಪಿಯೊಳಗೆಯೇ ಆಡಿಕೊಳ್ಳಲಾಗುತ್ತಿರುವ ಮಾತುಗಳು. ಇವರಿಗೆ ಮತ್ತು ಕೆಲವೊಂದು ಮೂಲ ಬಿಜೆಪಿಯವರಿಗೆ ಅಷ್ಟಕಷ್ಟೇ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದವು.
ಈಗ ಆರೋಗ್ಯ ಸಚಿವರ ಮೇಲೆ ಮುನಿಸಿಕೊಂಡಿರುವ ಬಿಜೆಪಿ ಮುಖಂಡರು, ಅವರು ಆಯೋಜಿಸಿದ್ದ ಭೋಜನಕೂಟಕ್ಕೆ ಗೈರಾಗುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದು ಒಂದು ಕಡೆ. ಇನ್ನೊಂದು ಕಡೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿದೆ.

ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಭೋಜನಕೂಟ
ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಸಚಿವರು ಮತ್ತು ಶಾಸಕ ಮಿತ್ರರಿಗೆ ಬಾಳೆಎಲೆ ಭೋಜನಕೂಟ ಆಯೋಜಿಸಿದ್ದರು. ವೆಜ್ ಮತ್ತು ನಾನ್ ವೆಜ್ ಎರಡೂ ವ್ಯವಸ್ಥೆಗಳಿದ್ದವು. ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ಹೆಚ್ಚಿನ ಶಾಸಕರು ಇದರಲ್ಲಿ ಭಾಗವಹಿಸಿದ್ದರು. ಆದರೆ, ಬಿಜೆಪಿಯ ಸುಮಾರು ಮೂವತ್ತಕ್ಕೂ ಹೆಚ್ಚು ಶಾಸಕರು ಭೋಜನಕೂಟದಲ್ಲಿ ಗೈರಾಗಿ, ಸುಧಾಕರ್ ವಿರುದ್ದ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.

ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರು ಭೋಜನಕೂಟದಿಂದ ದೂರ
ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕರು ಭೋಜನಕೂಟದಿಂದ ದೂರ ಉಳಿದಿದ್ದಾರೆ. ಬಿ.ಸಿ.ನಾಗೇಶ್, ರಾಜೂಗೌಡ, ಸತೀಶ್ ರೆಡ್ಡಿ, ಸುರೇಶ್ ಕುಮಾರ್, ರವಿ ಸುಬ್ರಮಣ್ಯ, ಅರವಿಂದ್ ಲಿಂಬಾವಳಿ, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಬಿಜೆಪಿ ಶಾಸಕರು ಭೋಜನಕೂಟದಲ್ಲಿ ಭಾಗವಹಿಸಲಿಲ್ಲ. ಭೋಜನಕೂಟಕ್ಕೆ ಯಾರೂ ಹೋಗಬಾರದು ಎಂದು ರೇಣುಕಾಚಾರ್ಯ ಕ್ಯಾಂಪೇನ್ ಮಾಡಿದ್ದರು ಎಂದು ನ್ಯೂಸ್ ಫಸ್ಟ್ ಸುದ್ದಿವಾಹಿನಿ ಬಿತ್ತರಿಸಿದೆ.

ಯಡಿಯೂರಪ್ಪನವರಂತಹ ನಾಯಕರೇ ಖುದ್ದು ಆಹ್ವಾನಿಸುತ್ತಾರೆ
ಇದಕ್ಕೆ ಹಲವು ಕಾರಣಗಳಿವೆ, ಖುದ್ದು ಡಾ.ಸುಧಾಕರ್ ಆಹ್ವಾನಿಸಲಿಲ್ಲ. ಯಡಿಯೂರಪ್ಪನವರಂತಹ ನಾಯಕರೇ ಈ ರೀತಿಯ ಭೋಜನಕೂಟ ಆಯೋಜಿಸಿದಾಗ ದೂರವಾಣಿ ಮೂಲಕ ಆಹ್ವಾನಿಸುತ್ತಾರೆ. ಆಡಳಿತ ಪಕ್ಷದಲ್ಲಿ ಇದ್ದರೂ ದೂರವಾಣಿ ಕರೆಯಿನ್ನು ಸುಧಾಕರ್ ಅವರು ಸ್ವೀಕರಿಸುವುದಿಲ್ಲ, ನಾವು ಶಿಫಾರಸು ಮಾಡುವ ಯಾವ ಕೆಲಸವನ್ನೂ ಅವರು ಮಾಡಿಕೊಡುವುದಿಲ್ಲ.. ಈ ಮುಂತಾದ ಕಾರಣಗಳಿಂದ ಬಿಜೆಪಿ ಮುಖಂಡರು ಭೋಜನಕೂಟದಿಂದ ದೂರ ಉಳಿದರು ಎಂದು ಹೇಳಲಾಗುತ್ತಿದೆ.

ಬೊಮ್ಮಾಯಿ, ಯಡಿಯೂರಪ್ಪ, ಸಿದ್ದರಾಮಯ್ಯ ಜೊತೆಯಾಗಿ ಭೋಜನ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ, ಪಕ್ಷಾತೀತವಾಗಿ ಭೋಜನಕೂಟದಲ್ಲಿ ಮುಖಂಡರು ಭಾಗವಹಿಸಿದ್ದರು. ಬೊಮ್ಮಾಯಿ, ಯಡಿಯೂರಪ್ಪ, ಸಿದ್ದರಾಮಯ್ಯ, ಸ್ಪೀಕರ್ ಕಾಗೇರಿ, ಜಮೀರ್ ಅಹ್ಮದ್, ಡಾ.ಪರಮೇಶ್ವರ್ ಜೊತೆಯಾಗಿಯೇ ಭೋಜನವನ್ನು ಸವಿದಿದ್ದಾರೆ. ಒಟ್ಟಿನಲ್ಲಿ, ಮೂವತ್ತಕ್ಕೂ ಹೆಚ್ಚು ಬಿಜೆಪಿ ಶಾಸಕರು ಗೈರಾಗುವ ಮೂಲಕ, ಡಾ.ಸುಧಾಕರ್ ಅವರ ವಿರುದ್ದ ತಮ್ಮ ಸಿಟ್ಟನ್ನು ಮತ್ತೊಮ್ಮೆ ಈ ನಾಯಕರು ಹೊರಹಾಕಿದ್ದಾರೆ.












Click it and Unblock the Notifications