ಆಗಸ್ಟ್‌ನಲ್ಲಿಯೂ ಮುಂಗಾರು ದುರ್ಬಲ; ಜನರಲ್ಲಿ ಆತಂಕ

ಬೆಂಗಳೂರು, ಆಗಸ್ಟ್ 07; ಈಗಾಗಲೇ ನೈಋತ್ಯ ಮುಂಗಾರು ಮಳೆ ನಿರೀಕ್ಷೆಯಂತೆ ಸುರಿದಿಲ್ಲ. ಮಳೆಯ ಕೊರತೆಯ ಕಾರಣ ಜನರು ಆತಂಕಗೊಂಡಿದ್ದಾರೆ. ಆಗಸ್ಟ್‌ ತಿಂಗಳಿನಲ್ಲಿಯೂ ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಜೂನ್‌ನಲ್ಲಿ ಆರಂಭವಾಗಬೇಕಿದ್ದ ಮುಂಗಾರು ಕೈ ಕೊಟ್ಟಿತ್ತು. ಜುಲೈ ಮೊದಲ ವಾರದಲ್ಲಿ ಮುಂಗಾರು ಅಬ್ಬರಿಸಲು ಶುರು ಮಾಡಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಜುಲೈ 15ರ ಬಳಿಕ ಮಳೆ ಮಾಯವಾಗಿದೆ. ಕೆಲವು ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆಯಾಗುತ್ತಿದೆ.

monsoon-rain-shortage-in-karnataka

ಈಗಾಗಲೇ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಉಂಟಾಗಿದೆ. ಕೃಷಿ ಚಟುವಟಿಕೆ ಮಾಡಬೇಕಿದ್ದ ರೈತರು, ಮಳೆ ಇಲ್ಲದೇ ಕೆಲಸ ಅರಸಿ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಆಗಸ್ಟ್‌ನಲ್ಲಿಯೂ ಮಳೆಯಾಗದಿದ್ದರೆ ಕುಡಿಯುವ ನೀರಿನ ಕೊರತೆ ರಾಜ್ಯವನ್ನು ಕಾಡಲಿದೆ.

ಆಗಸ್ಟ್‌ನಲ್ಲಿ ಬಿಸಿಲು; ಆಗಸ್ಟ್ ತಿಂಗಳ ಆರಂಭದಿಂದಲೇ ರಾಜ್ಯದಲ್ಲಿ ಬಿಸಿಲಿನ ವಾತಾವರಣವಿದೆ. ಕರಾವಳಿ, ಮಲೆನಾಡು ಭಾಗದ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ. ನದಿಗಳ ನೀರಿನ ಮಟ್ಟ ಇಳಿಕೆಯಾಗಿದ್ದು, ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ.

ಜುಲೈನಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಕಳೆದ ಒಂದು ವಾರದಿಂದ ಕರಾವಳಿ ಭಾಗದಲ್ಲಿಯೂ ಮಳೆ ಕಡಿಮೆಯಾಗಿದೆ. ಬೆಂಗಳೂರು ನಗರದಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ ಸಾಧಾರಣ ಮಳೆ ಕೆಲವು ಪ್ರದೇಶಗಳಲ್ಲಿ ಸುರಿದಿದೆ.

ಜೂನ್‌ನಂತೆ ಆಗಸ್ಟ್‌ ತಿಂಗಳಿನಲ್ಲಿಯೂ ಸಹ ಮಳೆ ಕೊರತೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದ ಯಾವುದೇ ಜಲಾಶಯಗಳು ಭರ್ತಿಯಾಗಿಲ್ಲ. ಈ ತಿಂಗಳಿನಲ್ಲಿಯೂ ಮಳೆಯಾಗದಿದ್ದರೆ ಕೃಷಿ ಚಟುವಟಿಕೆಗೆ ಅಡ್ಡಿಯಾಗಲಿದೆ, ಅಲ್ಲದೇ ನವೆಂಬರ್, ಡಿಸೆಂಬರ್ ವೇಳೆಗೆ ಕುಡಿಯವ ನೀರಿಗಾಗಿ ಜನರು ಪರದಾಡಬೇಕಿದೆ.

ಮಲೆನಾಡು, ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣವಿದೆ. ಆಗಸ್ಟ್‌ ಆರಂಭದಿಂದ ಇಲ್ಲಿಯ ತನಕ ಶೇ 63ರಷ್ಟು ಮಳೆ ಕೊರತೆಯಾಗಿದೆ. ಮೋಡ ಕವಿದ ವಾತಾವರಣ ಕಂಡು ಬರುತ್ತಿದೆಯಾದರೂ ಮಳೆ ಸುರಿಯುತ್ತಿಲ್ಲ. ಮಳೆ ಬಂದರೂ ಸಾಧಾರಣ ಮಳೆಯಾಗುತ್ತಿರುವುದು ಆತಂಕ ಮೂಡಿಸಿದೆ.

ಆಗಸ್ಟ್ ಮೊದಲ ವಾರದಲ್ಲಿ ವಾಡಿಕೆಯಂತೆ 66 ಮಿ. ಮೀ. ಮಳೆಯಾಗಬೇಕಿದೆ. ಆದರೆ ಇದುವರೆಗೂ ಕೇವಲ 22.3 ಮಿ. ಮೀ. ಮಳೆಯಾಗಿದೆ. ಆರಂಭದಿಂದಲೂ ಮುಂಗಾರು ಮಳೆಯ ಅನಿಶ್ಚಿತತೆ ರೈತರನ್ನು ಕಾಡುತ್ತಿದೆ. ಜೂನ್ 1 ರಿಂದ ಆಗಸ್ಟ್‌ 5ರ ತನಕ ವಾಡಿಕೆ ಮಳೆ ಪ್ರಮಾಣ 514 ಮಿ. ಮೀ. ಆಗಿತ್ತು. ಆದರೆ ಸುರಿದ ಮಳೆ 452 ಮಿ. ಮೀ. ಮಾತ್ರ.

ಜುಲೈ ತಿಂಗಳಿನಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ 13 ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇ 5ರಷ್ಟು ಮಳೆಯಾಗಿತ್ತು. ಆದರೆ ಆಗಸ್ಟ್‌ನಲ್ಲಿ ಮಳೆ ಸುರಿಯುತ್ತಿಲ್ಲ.

ತಮಿಳುನಾಡಿಗೆ ನೀರು ಬಿಡುಗಡೆ; ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಡ್ಯಾಂನಲ್ಲಿ 113 ಅಡಿ ನೀರಿನ ಸಂಗ್ರಹವಿದೆ. ಡ್ಯಾಂ ಪೂರ್ಣ ಮಟ್ಟ 124 ಅಡಿಗಳು. ಶನಿವಾರ ನಾಲೆಗಳಿಗೆ ಹರಿಸುತ್ತಿದ್ದ ನೀರನ್ನು ಬಂದ್ ಮಾಡಲಾಗಿದ್ದು, ತಮಿಳುನಾಡಿಗೆ ನೀರು ಹರಿಸಲಾಗಿದೆ. ಕೆಆರ್‌ಎಸ್‌ನಿಂದ 5,300 ಮತ್ತು ಕಬಿನಿಯಿಂದ 5 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಬಿಡಲಾಗಿದೆ.

ಜೂನ್ 1 ರಿಂದ ಸೆಪ್ಟೆಂಬರ್ 30ರ ಅವಧಿಯನ್ನು ನೈಋತ್ಯ ಮುಂಗಾರು ಮಳೆಯ ಅವಧ ಎಂದು ಪರಿಗಣಿಸಲಾಗುತ್ತದೆ. ದೇಶದ ಕೃಷಿ ಚಟುವಟಿಕೆಗಳಿಗೆ ಮುಂಗಾರು ಮಳೆಯೇ ಮುಖ್ಯ ಆಧಾರವಾಗಿದೆ. ಆದರೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿಯೂ ನಿರೀಕ್ಷಿತ ಮಳೆ ಸುರಿಯುವ ಸಾಧ್ಯತೆ ಕಡಿಮೆ ಇದೆ.

ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ 895.45 ಟಿಎಂಸಿ ಅಡಿಯಾಗಿದೆ. ಪ್ರಸ್ತುತ ಜಲಾಶಯಗಳಲ್ಲಿ 622.08 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 693.73 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು. ಈಗಾಗಲೇ ನೀರಾವರಿ ತಜ್ಞರು ಜಲಾಶಯಗಳಲ್ಲಿ ನಿರೀಕ್ಷಿತ ಮಟ್ಟದ ನೀರಿನ ಸಂಗ್ರಹವಿಲ್ಲ. ನೀರು ಬಳಕೆ ಮಾಡುವಾಗ ಎಚ್ಚರ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+