ಮಂಕಿಪಾಕ್ಸ್; ಕರ್ನಾಟಕದ ಜಿಲ್ಲಾ ಆಸ್ಪತ್ರೆಗಳಲ್ಲಿ 2 ಬೆಡ್ ಮೀಸಲು
ಬೆಂಗಳೂರು,ಜುಲೈ. 22: ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ವರದಿಯಾಗಿದೆ. ಕರ್ನಾಟಕವು ಸಹ ಸೋಂಕು ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ರಾಜ್ಯದ ಕೋವಿಡ್- 19 ತಾಂತ್ರಿಕ ಸಲಹಾ ಸಮಿತಿಯ (ಟಿಎಸಿ) ಶಿಫಾರಸು ಬಳಿಕ ಆರೋಗ್ಯ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಮಂಕಿಪಾಕ್ಸ್ ಶಂಕಿತ, ದೃಢೀಕರಿಸಲ್ಪಟ್ಟ ಪ್ರಕರಣಗಳ ಪ್ರತ್ಯೇಕತೆಗಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೆ ತಲಾ ಎರಡು ಹಾಸಿಗೆಗಳನ್ನು ಮೀಸಲಿಡುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಅಂತಹ ಪ್ರಕರಣಗಳನ್ನು ನಿರ್ವಹಿಸಲು ಸಾಕಷ್ಟು ಮಾನವ ಸಂಪನ್ಮೂಲ ಮತ್ತು ದಾಖಲು ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರು ಎಲ್ಲಾ ಹಂತಗಳಲ್ಲಿ ಆರೋಗ್ಯ ತಪಾಸಣೆ ತಂಡಗಳು, ರೋಗ ಕಣ್ಗಾವಲು ತಂಡಗಳು ಮತ್ತು ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಸಾಮಾನ್ಯ ಲಕ್ಷಣಗಳು ಮತ್ತು ರೋಗ ಗುಣಲಕ್ಷಣಗಳು, ರೋಗನಿರ್ಣಯ, ಪ್ರಕರಣದ ವಿಶ್ಲೇಷಣೆ ಇತ್ಯಾದಿಗಳ ಮೇಲೆ ಗಮನವಿಡಲು ತಿಳಿಸಲಾಗಿದೆ.
ಶಂಕಿತ, ಸಂಭವನೀಯ, ದೃಢೀಕರಿಸಿದ ಪ್ರಕರಣಗಳಲ್ಲಿ ಸಂಪರ್ಕ ಪತ್ತೆಹಚ್ಚುವಿಕೆ ಮೇಲೆ ನಿಗ ಇಡಬೇಕು. ಇತರೆಯಾಗಿ ಪರೀಕ್ಷೆ ಮತ್ತು ಇತರ ಸಂಬಂಧಿತ ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಪ್ರೋಟೋಕಾಲ್‌ಗಳನ್ನು ಪಾಲಿಸಬೇಕು. ಸಂಭವನೀಯ ಪ್ರಕರಣವನ್ನು ಪತ್ತೆಹಚ್ಚಿದ ನಂತರ ಕೈಗೊಳ್ಳಬೇಕಾದ ಕ್ಲಿನಿಕಲ್ ನಿರ್ವಹಣೆಯ ಬಗ್ಗೆ ತರಬೇತಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

21 ದಿನಗಳವರೆಗೆ ಪ್ರತ್ಯೇಕ ವಾಸ
ಸಮುದಾಯದಲ್ಲಿ ಎಲ್ಲಾ ಶಂಕಿತ ಪ್ರಕರಣಗಳನ್ನು ಆಸ್ಪತ್ರೆ ಆಧಾರಿತ ಕಣ್ಗಾವಲು ಮತ್ತು ಉದ್ದೇಶಿತ ಕಣ್ಗಾವಲುಗಳ ಮೂಲಕ ಪರೀಕ್ಷಿಸಬೇಕು. ದೃಢಪಡಿಸಿದ ಪ್ರಕರಣವನ್ನು ಕನಿಷ್ಠ 21 ದಿನಗಳವರೆಗೆ ಪ್ರತ್ಯೇಕಿಸಬೇಕು. ಎಲ್ಲಾ ಗಾಯಗಳು ಪರಿಹಾರವಾಗುವವರೆಗೆ ಮತ್ತು ಚರ್ಮವು ಸಂಪೂರ್ಣವಾಗಿ ಬೀಳುವವರೆಗೆ ಕಾಯಬೇಕು ಎಂದು ತಿಳಿಸಿದೆ.

ಎಲ್ಲ ಜಿಲ್ಲೆಗಳಲ್ಲಿ ಆಸ್ಪತ್ರೆಗಳಲ್ಲಿ ಬೆಡ್
ವಿಶ್ವದ ಹಲವೆಡೆ ಮಂಕಿಪಾಕ್ಸ್ ಸೋಂಕು ವೇಗವಾಗಿ ಹರಡುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ, ಕರ್ನಾಟಕದಲ್ಲಿ ಕಾಯಿಲೆಯ ಮುನ್ಸೂಚನೆ ಕಂಡ ಕೂಡಲೇ ಸ್ಕ್ರೀನಿಂಗ್, ಎಲ್ಲ ಜಿಲ್ಲೆಗಳಲ್ಲಿ ಆಸ್ಪತ್ರೆ ಬೆಡ್ ಗಳನ್ನು ಕಾಯ್ದಿರಿಸುವುದು, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಸೇರಿದಂತೆ ಹಲವು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದರು. ಈಗ ಮುಂದುವರಿದ ಕ್ರಮವಾಗಿ ಆರೋಗ್ಯ ಇಲಾಖೆ ಕಾರ್ಯದರ್ಶಿ ರಂದೀಪ್ ಅವರು ಸುತ್ತೋಲೆ ಹೊರಡಿಸಿ ಕ್ರಮಕ್ಕೆ ಮುಂದಾಗಿದ್ದಾರೆ.

ಮುನ್ನೆಚರಿಕೆ ತೆಗೆದುಕೊಳ್ಳುವುದು ಅಗತ್ಯ
ಕರ್ನಾಟಕದಲ್ಲಿ ಈವರೆಗೂ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿಲ್ಲ. ಆದರೂ ಇದು ಹರಡುವ ಖಾಯಿಲೆ ಆಗಿರುವುದರಿಂದ ಮುನ್ನೆಚರಿಕೆ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸಾಂಕ್ರಾಮಿಕ ರೋಗಶಾಸ್ತ್ರ, ಪ್ರಕರಣ ಮತ್ತು ಸೋಂಕಿನ ಸಂಪರ್ಕದ ವಿಶ್ಲೇಷಣೆ, ವೈದ್ಯಕೀಯ ಲಕ್ಷಣಗಳು ಮತ್ತು ಸಮಸ್ಯೆಗಳು ರೋಗನಿರ್ಣಯ, ಪ್ರಕರಣದ ನಿರ್ವಹಣೆ, ಅಪಾಯದ ಬಗ್ಗೆ ತಿಳಿಸುವುದು ಮತ್ತು ಸೋಂಕು ತಡೆಗಟ್ಟುವಿಕೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ಮಾರ್ಗದರ್ಶನವನ್ನು ಮಾರ್ಗಸೂಚಿಗಳಲ್ಲಿ ನೀಡಿದೆ.

ಪ್ರತ್ಯೇಕ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ
ಈಗಾಗಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರದ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣ ಮತ್ತು ಮಂಗಳೂರಿನ ಡಿಎಸ್ಓಗಳ ಸರ್ವೆಲೈನ್ಸ್ ಭಾಗವಾಗಿ ವಿಮಾನ ನಿಲ್ದಾಣ ಅಧಿಕಾರಿಯೊಂದಿಗೆ ಸಮನ್ವಯ ಸಾಧಿಸಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಮಾಡಲು ತಿಳಿಸಲಾಗಿತ್ತು. ಒಂದು ವೇಳೆ ಪ್ರಯಾಣಿಕರಲ್ಲಿ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಬೆಂಗಳೂರಿನ ಇಂದಿರಾ ನಗರ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.












Click it and Unblock the Notifications