Breaking; ಶಿವಾಜಿನಗರದ ಟಿಕೆಟ್‌ಗೆ ಮೊಹಮ್ಮದ್ ನಲಪಾಡ್ ಅರ್ಜಿ
ಬೆಂಗಳೂರು, ನವೆಂಬರ್ 15; ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದರು.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದರು. ಅರ್ಜಿ ಸಲ್ಲಿಕೆ ಮಾಡಲು ಮಂಗಳವಾರವೇ ಕೊನೆ ದಿನ.

ಮೊಹಮ್ಮದ್ ಹ್ಯಾರಿಸ್ ನಲಪಾಡ್ ಬೆಂಗಳೂರಿನ ಶಿವಾಜಿನಗರ ಕ್ಷೇತ್ರದಿಂದ ಟಿಕೆಟ್ ಬಯಸಿದ್ದಾರೆ. ಅಚ್ಚರಿಯ ವಿಷಯ ಎಂದರೆ ಕ್ಷೇತ್ರದ ಹಾಲಿ ಶಾಸಕ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್.
2018ರ ವಿಧಾನಸಭೆ ಚುನಾವಣೆಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ ಆರ್. ರೋಷನ್ ಬೇಗ್ ಜಯಗಳಿಸಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2019ರ ಡಿಸೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ರಿಜ್ವಾನ್ ಅರ್ಷದ್ ಕಣಕ್ಕಿಳಿಸಿತು. ಉಪ ಚುನಾವಣೆಯಲ್ಲಿ ರಿಜ್ವಾನ್ ಜಯಗಳಿಸಿದರು, ಕ್ಷೇತ್ರ ಕಾಂಗ್ರೆಸ್ ವಶದಲ್ಲಿಯೇ ಉಳಿಯಿತು.
ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಂದೆ ಎನ್. ಎ. ಹ್ಯಾರಿಸ್ ಶಾಂತಿನಗರ ಕ್ಷೇತ್ರದ ಶಾಸಕರು. ಆದರೆ ನಲಪಾಡ್ ಶಿವಾಜಿನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಂದೆ, ಮಗ ಇಬ್ಬರೂ ಟಿಕೆಟ್ ಪಡೆಯಲಿದ್ದಾರೆಯೇ? ಕಾದು ನೋಡಬೇಕಿದೆ.
ದಿನಾಂಕ ವಿಸ್ತರಣೆ ಸಾಧ್ಯತೆ; ಮುಂದಿನ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬೇಕು ಎಂದು ಕಾಂಗ್ರೆಸ್ ಹೇಳಿತ್ತು. ಅರ್ಜಿ ಸಲ್ಲಿಕೆ ಮಾಡಲು ಮಂಗಳವಾರವೇ ಕೊನೆ ದಿನವಾಗಿತ್ತು. ಆದರೆ ಇನ್ನು ಅರ್ಜಿಗಳು ಬರುತ್ತಿರುವ ಹಿನ್ನಲೆಯಲ್ಲಿ ದಿನಾಂಕ ವಿಸ್ತರಣೆಯಾಗುವ ನಿರೀಕ್ಷೆ ಇದೆ.
ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಲು ಅರ್ಜಿಗೆ 5 ಸಾವಿರ ರೂ. ಮತ್ತು ಅರ್ಜಿಯೊಂದಿಗೆ 2 ಲಕ್ಷ ರೂ. ಡಿಡಿ ಸಲ್ಲಿಕೆ ಮಾಡಬೇಕಿದೆ.












Click it and Unblock the Notifications