ಬಾಗಲಕೋಟೆಯಲ್ಲಿ ಅಬ್ಬರಿಸಿದ ಮೋದಿ; ಲೂಟಿಕೋರ ಕಾಂಗ್ರೆಸ್ಸಿಗರ ಕೈಯಲ್ಲಿ ದೇಶ ಕೊಡಲು ಸಾಧ್ಯವೇ: ನರೇಂದ್ರ ಮೋದಿ
ಬೆಂಗಳೂರು: ಕಾಂಗ್ರೆಸ್‍ನ ಇತಿಹಾಸ ದೇಶದ ಲೂಟಿ ಮಾಡುವುದೇ ಆಗಿದೆ. ಅಂಥ ಪಕ್ಷದವರ ಕೈಯಲ್ಲಿ ದೇಶ ಕೊಡಲು ಸಾಧ್ಯವೇ? ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನೂ ತಮ್ಮ ಲೂಟಿಯ ಎಟಿಎಂ ಮಾಡಿದೆ. ಇಷ್ಟು ಕಡಿಮೆ ಸಮಯದಲ್ಲೇ ಕರ್ನಾಟಕದ ಸರಕಾರಿ ಖಜಾನೆ ಖಾಲಿಯಾಗಿದೆ ಎಂದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನರನ್ನು ಪ್ರಶ್ನಿಸಿದರು.
ಬಾಗಲಕೋಟೆಯಲ್ಲಿ ಇಂದು ಬೆಳಿಗ್ಗೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದ ಮೋದಿ, ರಾಜ್ಯ ಸರಕಾರಿ ನೌಕರರಿಗೆ ವೇತನ ಕೊಡಲೂ ಸಾಧ್ಯವಾಗದ ಸ್ಥಿತಿ ಬರಲಿದೆ. ನಿಮ್ಮ ಮಕ್ಕಳೂ ಹಸಿವಿನಿಂದ ಒದ್ದಾಡುವ ಸ್ಥಿತಿ ಬಂದೀತು ಎಂದು ಎಚ್ಚರಿಸಿದರು.

ನಮ್ಮ ಸರಕಾರವು ಕರ್ನಾಟಕದಲ್ಲಿ ವಿಜಯಪುರ ಸೇರಿ ಹಲವಾರು ವಿಮಾನನಿಲ್ದಾಣ ನಿರ್ಮಿಸುತ್ತಿದೆ. ಬಾಗಲಕೋಟೆಯಲ್ಲಿ ಆಧುನಿಕ ರೈಲು ನಿಲ್ದಾಣ ಬರಲಿದೆ. ರಾಷ್ಟ್ರೀಯ ಹೆದ್ದಾರಿ ಕೂಡ ಮಾಡಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಮೋದಿಯು ಮೂಲಸೌಕರ್ಯಕ್ಕೆ ಒತ್ತು ಕೊಟ್ಟಿದ್ದಾನೆ. ವಂಚಿತ ವರ್ಗಕ್ಕೆ ನಾವು ಆದ್ಯತೆ ಕೊಟ್ಟಿದ್ದೇವೆ. ಮೋದಿ ಅಧಿಕಾರಕ್ಕೆ ಬರುವ ಮೊದಲೇ 18 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಆ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೊಡಲಾಗಿದೆ.
ನೀರಿನ ಸಮಸ್ಯೆ ಪರಿಹಾರಕ್ಕೆ ಜಲಜೀವನ್ ಮಿಷನ್ ಅನುಷ್ಠಾನ ಮಾಡಿದ್ದು, ಶೇ 75ಕ್ಕೂ ಹೆಚ್ಚು (11 ಕೋಟಿ ಮನೆ) ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕೊಟ್ಟಿದ್ದೇವೆ. ಹಿಂದೆ ಅದು ಕೇವಲ ಶೇ 16ರಷ್ಟಿತ್ತು. ಇದನ್ನು ಇವರು ಯಾಕೆ ಮಾಡಿಲ್ಲ ಎಂದು ಕೇಳಿದರು. ಕಾಂಗ್ರೆಸ್ಸಿಗೆ ಬಡವರ, ದಲಿತರ, ವಂಚಿತರ ಕಡೆ ಗಮನ ಕೊಡಲು ಪುರುಸೊತ್ತಿಲ್ಲ ಎಂದು ಟೀಕಿಸಿದರು.

ಈಗ ಅಭಿವೃದ್ಧಿ ಎಂಬುದು ದೇಶದ ಎಲ್ಲ ಗ್ರಾಮಗಳನ್ನು ತಲುಪುತ್ತಿದೆ. ಎಸ್‍ಸಿ, ಎಸ್‍ಟಿ ಸಮುದಾಯ ಅಭಿವೃದ್ಧಿ ವಂಚಿತವಾಗಿತ್ತು. ಗ್ಯಾಸ್ ಸಿಲಿಂಡರ್‍ಗಳನ್ನು ನೀಡಿದ್ದು, ಎಸ್‍ಸಿ, ಎಸ್‍ಟಿ ಒಬಿಸಿ ಸಮುದಾಯದವರಿಗೆ ಗರಿಷ್ಠ ಪ್ರಯೋಜನ ಲಭಿಸಿದೆ. ಯಡಿಯೂರಪ್ಪ ಅವರು ರೈತರಿಗೆ ನೆರವಾದವರು. ನಾವು ಇಥೇನಾಲ್ ಮೂಲಕ ರೈತರಿಗೆ ನೆರವಾಗಿದ್ದೇವೆ ಎಂದು ಹೇಳಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ವಸೂಲಿ ಗ್ಯಾಂಗ್ ನಡೆಸುತ್ತಿದೆ. ಭ್ರಷ್ಟಾಚಾರದ ಮೂಲಕ ವಸೂಲಿ ಮಾಡುವುದೇ ಇವರ ದಂಧೆ. ಬೆಂಗಳೂರು ಟೆಕ್ ಹಬ್ ಎಂದೇ ಗುರುತಿಸಿಕೊಂಡಿದೆ. ಇದನ್ನು ಟ್ಯಾಂಕರ್ ಹಬ್ ಮಾಡಿದ್ದಾರೆ. ನೀರಿಗಾಗಿ ಟ್ಯಾಂಕರ್ ಮಾಫಿಯದ ಮೂಲಕ ಕಾಂಗ್ರೆಸ್ ಕಮಿಷನ್ ಪಡೆಯುತ್ತಿದೆ. ಕಾಂಗ್ರೆಸ್ಸಿಗರು 2 ಜಿ ಹಗರಣದಂಥ ಭ್ರಷ್ಟಾಚಾರದ ದೊಡ್ಡ ಹಗರಣ ಮಾಡಲು ಕಾಯುತ್ತಿದ್ದಾರೆ. ಭ್ರಷ್ಟಾಚಾರಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಿ ಎಂದು ಮೋದಿಯವರು ಮನವಿ ಮಾಡಿದರು.
ಕಾಂಗ್ರೆಸ್ಸಿಗರು ಮುಸ್ಲಿಮರಿಗೆ ಒಬಿಸಿ ಮೀಸಲಾತಿಯಡಿ ಅವಕಾಶ ಕೊಟ್ಟಿದ್ದಾರೆ. ದಲಿತರನ್ನು ವಂಚಿಸುವ ಹುನ್ನಾರವಿದು. ಧರ್ಮದ ಆಧಾರದಲ್ಲಿ ತಮ್ಮ ಮತಬ್ಯಾಂಕ್ ರಕ್ಷಿಸಲು ಇವರು ಮುಂದಾಗಿದ್ದಾರೆ. ಎಸ್‍ಸಿ, ಎಸ್‍ಟಿ, ಒಬಿಸಿ ಸಂಸದರು ಬಿಜೆಪಿಯಲ್ಲಿದ್ದಾರೆ. ಆದ್ದರಿಂದ ಅಲ್ಪಸಂಖ್ಯಾತರನ್ನು ಪ್ರೋತ್ಸಾಹಿಸಲು ಕಾಂಗ್ರೆಸ್ಸಿಗರು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಕಾಂಗ್ರೆಸ್‍ನ ಇಂಥ ಹುನ್ನಾರ ಅನುಷ್ಠಾನಕ್ಕೆ ಮೋದಿ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ವಿರೋಧ ಪಕ್ಷದವÀರು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ನನ್ನ ಧ್ವನಿಯಲ್ಲಿ ನಕಲಿ ವಿಡಿಯೋ ಮಾಡುತ್ತಿದ್ದಾರೆ. ಇಂಥ ವಿಡಿಯೋ ಕಂಡರೆ ನಮ್ಮ ಪಕ್ಷದವರ ಗಮನಕ್ಕೆ ತನ್ನಿ. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ನಾವು ಕದ್ದುಮುಚ್ಚಿ ಬಾಲಕೋಟ್ ದಾಳಿ ಮಾಡಿಲ್ಲ ಎಂದು ವಿವರಿಸಿದರು.
ಹುಬ್ಬಳ್ಳಿಯ ಘಟನೆ ಆತಂಕಕಾರಿ. ನಮ್ಮ ಮಗಳಂಥ ಯುವತಿಯ ಸ್ಥಿತಿ ಏನಾಗಿದೆ ಎಂದು ಪ್ರಶ್ನಿಸಿದ ಅವರು, ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ. ಮತಬ್ಯಾಂಕಿಗಾಗಿ, ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಅದನ್ನು ಪ್ರಮುಖ ವಿಚಾರವಾಗಿ ಪರಿಗಣಿಸಿಲ್ಲ. ಹನುಮಾನ್ ಚಾಲೀಸವನ್ನು ಕೇಳುವ ಅಂಗಡಿ ಮಾಲೀಕನ ಮೇಲೆ ಹಲ್ಲೆ ಆಗುತ್ತದೆ. ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದರೆ ಸಿಲಿಂಡರ್ ಸ್ಫೋಟ ಎಂದು ಸರಕಾರದ ಪ್ರತಿನಿಧಿ ಹೇಳುತ್ತಾರೆ. ಇವೆಲ್ಲವೂ ಆತಂಕವಾದ, ಭಯೋತ್ಪಾದನೆಯ ಮಾನಸಿಕವಾದದ ಪ್ರತಿಬಿಂಬ. ಕಾಂಗ್ರೆಸ್ ಪಕ್ಷ ಮತಕ್ಕಾಗಿ ಇಂಥವರನ್ನು ಬೆಂಬಲಿಸುತ್ತದೆ ಎಂದು ಮೋದಿಯವರು ಟೀಕಿಸಿದರು.












Click it and Unblock the Notifications