ಮೋದಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೆಚ್ ಡಿ ದೇವೇಗೌಡ್ರು ಗೈರು: ಹೇಳಿದ್ದೇನು?
ಬೆಂಗಳೂರು, ಜೂನ್ 10: ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಜವಾಹರಲಾಲ್ ನೆಹರು ಅವರ ದಾಖಲೆಯನ್ನ ಬ್ರೇಕ್ ಮಾಡಿದ್ದು, ಭಾನುವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭಕ್ಕೆ ಹಲವು ಮಿತ್ರ ರಾಷ್ಟ್ರಗಳ ನಾಯಕರು ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ.
ಭಾನುವಾರ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಸಂಜೆ ಸರಿಯಾಗಿ 7.15ಕ್ಕೆ ಈಶ್ವರನ ಹೆಸರಲ್ಲಿ ನರೇಂದ್ರ ದಾಮೋದರ್ ದಾಸ್ ಮೋದಿ ಪ್ರಮಾಣ ವಚನ ಸ್ವೀಕರಿಸಿದರು. ಕೇಂದ್ರ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ್ರು ಗೈರಾಗಿದ್ದಾರೆ. ಮೋದಿ ಪ್ರಮಾಣ ವಚನಕ್ಕೆ ಭಾಗವಹಿಸದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು, ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ಧಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರಕ್ಕೆ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಈ ಲೋಕಸಭಾ ಚುನಾವಣೆಯು ಕುತೂಹಲಕಾರಿ ಫಲಿತಾಂಶ ನೀಡಿದ್ದು, ದೇಶದ ಪ್ರಜಾಪ್ರಭುತ್ವದ ಕಂಪನ್ನು ಸಾಬೀತುಪಡಿಸಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಅಪಖ್ಯಾತಿಗೊಳಿಸಲು ಕಾಂಗ್ರೆಸ್‍ನ ಕೊಳಕು ಪ್ರಚಾರವನ್ನು ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಬಹಿರಂಗಪಡಿಸುತ್ತದೆ. ದೇಶದ ಜನರು ಅವರ ದುರಹಂಕಾರಕ್ಕೆ ಪಾಠ ಕಲಿಸಿದ್ದಾರೆಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಟೀಕಿಸಿದ್ದಾರೆ.
ಇಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದ ಭಾಗವಾಗಲು ನಾನು ಇಷ್ಟಪಡುತ್ತಿದ್ದೇನೆ. ಆದರೆ, ನನ್ನ ಆರೋಗ್ಯವು ದೆಹಲಿ ಪ್ರಯಾಣಿಸಲು ನನಗೆ ಅವಕಾಶ ನೀಡುತ್ತಿಲ್ಲ. ಆದರೂ, ನಿಮ್ಮ ಆತ್ಮೀಯ ಆಹ್ವಾನಕ್ಕಾಗಿ ತುಂಬಾ ಧನ್ಯವಾದಗಳು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರಕಾರಕ್ಕೆ ನನ್ನ ಪಕ್ಷವಾದ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಲಿದೆ.
ಇನ್ನೂ ಸಂಪುಟದಲ್ಲಿ ಜೆಡಿಎಸ್ ಗೆ ಕೇಂದ್ರ ಸಚಿವ ಸಂಪುಟ ದರ್ಜೆ ಸ್ಥಾನ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ದೇವೇಗೌಡ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಂತೆ ನಿಮ್ಮ ಕಾರ್ಯಸೂಚಿಯನ್ನು ಜನತೆಗೆ ತಲುಪಿಸಲು ಸಹಾಯ ಮಾಡುತ್ತೇವೆ. ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮೋದಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಈ ಬಾರಿಯ ಚುನಾವಣೆಯನ್ನು ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಭಾವಿಸುತ್ತಿದೆ. ಆದರೆ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಂತಹ ಅವರೇ ನಡೆಸುತ್ತಿರುವ ರಾಜ್ಯಗಳಲ್ಲಿ ಅವರು ಸೋತಿದ್ದಾರೆ. ಅವರು ಇತರ ಕೆಲವು ರಾಜ್ಯಗಳಲ್ಲಿ ತುಲನಾತ್ಮಕವಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಅವರ ಮಿತ್ರರು ಎಷ್ಟು ದಿನ ಸಹಿಸಿಕೊಳ್ಳುತ್ತಾರೆಂದು ನೋಡೋಣ ಎಂದು 'ಇಂಡಿಯಾ ಕೂಟ'ದ ವಿರುದ್ಧ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ್ರು ಕಿಡಿಕಾರಿದರು.












Click it and Unblock the Notifications