ಮೋದಿ 3.0 ಸಂಪುಟ: ಮಲೆನಾಡು, ಕರಾವಳಿ ಭಾಗಕ್ಕೆ ನಿರಾಸೆ
ಬೆಂಗಳೂರು, ಜೂನ್ 09; ಲೋಕಸಭೆ ಚುನಾವಣೆ 2024ರ ಫಲಿತಾಂಶದ ಬಳಿಕ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಮಾಡಲಿದೆ. ನರೇಂದ್ರ ಮೋದಿ ಭಾನುವಾರ ಸಂಜೆ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ 3.0 ಸರ್ಕಾರದಲ್ಲಿ ಕರ್ನಾಟಕದ ಐವರು ಸಚಿವರಾಗುತ್ತಿದ್ದಾರೆ.
ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ), ವಿ. ಸೋಮಣ್ಣ (ತುಮಕೂರು), ಪ್ರಹ್ಲಾದ್ ಜೋಶಿ (ಧಾರವಾಡ), ಎಚ್. ಡಿ. ಕುಮಾರಸ್ವಾಮಿ (ಮಂಡ್ಯ) ಭಾನುವಾರ ನರೇಂದ್ರ ಮೋದಿ ಜೊತೆಗೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ.

ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿ ಬಿಜೆಪಿಯ ಭದ್ರಕೋಟೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಇಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ ಈ ಬಾರಿ ಈ ಎರಡೂ ಪ್ರದೇಶಕ್ಕೆ ಕೇಂದ್ರದಲ್ಲಿ ಸಚಿವ ಸ್ಥಾನ ಸಿಗುತ್ತಿಲ್ಲ ಎಂಬುದು ಬೇಸರಕ್ಕೆ ಕಾರಣವಾಗಿದೆ.
ಮಲೆನಾಡು, ಕರಾವಳಿ: ನರೇಂದ್ರ ಮೋದಿ 3.0 ಸಂಪುಟದಲ್ಲಿ ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ), ವಿ. ಸೋಮಣ್ಣ (ತುಮಕೂರು), ಎಚ್. ಡಿ. ಕುಮಾರಸ್ವಾಮಿ (ಮಂಡ್ಯ) ಸಚಿವರಾಗುವ ಮೂಲಕ ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿದೆ.
ಈ ಹಿಂದೆ ಸಚಿವರಾಗಿದ್ದ ಪ್ರಹ್ಲಾದ್ ಜೋಶಿ (ಧಾರವಾಡ) ನರೇಂದ್ರ ಮೋದಿ ಜೊತೆಗೆ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಈ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ಸಚಿವ ಸ್ಥಾನ ಸಿಕ್ಕಿದೆ. ಆದರೆ ಮಲೆನಾಡು, ಕರಾವಳಿ ಭಾಗದ ಜನರಿಗೆ ನಿರಾಸೆಯಾಗಿದೆ.
ನರೇಂದ್ರ ಮೋದಿ 2.0 ಸಂಪುಟದಲ್ಲಿ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆಯಾಗಿದ್ದರು. ಅವರು ಆಗ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾಗಿದ್ದರು. ಆದ್ದರಿಂದ ಮಲೆನಾಡು-ಕರಾವಳಿ ಪ್ರತಿನಿಧಿಸುತ್ತಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರು ಉಡುಪಿ-ಚಿಕ್ಕಮಗಳೂರು ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಗಿ ಅಲ್ಲಿ ಕಣಕ್ಕಿಳಿದು ಗೆಲವು ಸಾಧಿಸಿದ್ದಾರೆ. ಈಗ ಅವರು ಸಚಿವರಾದರೂ ಅದು ಬೆಂಗಳೂರು ನಗರಕ್ಕೆ ಸಿಗುವ ಕೊಡುಗೆಯಾಗಿದೆ.
ಮಲೆನಾಡು ಭಾಗದಲ್ಲಿ ಶಿವಮೊಗ್ಗದಲ್ಲಿ ಬಿ. ವೈ. ರಾಘವೇಂದ್ರ 2024ರಲ್ಲಿ ಗೆಲ್ಲುವ ಮೂಲಕ 4ನೇ ಬಾರಿಗೆ ಸಂಸದರಾಗಿದ್ದಾರೆ. ಕರಾವಳಿ ಭಾಗದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮೊದಲ ಬಾರಿಗೆ. ದಕ್ಷಿಣ ಕನ್ನಡದಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಹ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ.
ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ತೀರ್ಮಾನ ಕೈಗೊಂಡಿತು. ದಕ್ಷಿಣ ಕನ್ನಡದಲ್ಲಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಟಿಕೆಟ್ ಕೈತಪ್ಪಿತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆ ಆಯಿತು.
ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ ಗೆದ್ದರೂ ಸಹ ಹಾಲಿ ಸಂಸದರು ಮೊದಲ ಬಾರಿಗೆ ಗೆದ್ದಿರುವುದರಿಂದ ಸಚಿವ ಸ್ಥಾನ ಸಿಕ್ಕಿಲ್ಲ. ಇನ್ನು ಉತ್ತರ ಕನ್ನಡದಲ್ಲಿ ಸಹ ಅನಂತ ಕುಮಾರ್ ಹೆಗಡೆ ಬದಲು ವಿಶ್ವೇಶ್ವರ ಹೆಗಡೆಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿತು. ಅವರು ಸಹ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರಿಂದ ಸಚಿವ ಸ್ಥಾನ ಸಿಕ್ಕಿಲ್ಲ.
ಹಿರಿತನ, ಬಿಜೆಪಿ-ಜೆಡಿಎಸ್ ಮೈತ್ರಿಯ ಹಿನ್ನಲೆಯಲ್ಲಿ ಸಚಿವ ಸ್ಥಾನ ಹಂಚಿಕೆಯಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ, ವರುಣ ಎರಡೂ ಕಡೆ ಸೋತಿದ್ದ ವಿ. ಸೋಮಣ್ಣ ಲೋಕಸಭೆ ಚುನಾವಣೆಯಲ್ಲಿ ತುಮಕೂರಿನಲ್ಲಿ ಟಿಕೆಟ್ ಪಡೆದು ಗೆದ್ದರು. ಮೋದಿ 3.0 ಸರ್ಕಾರದಲ್ಲಿ ಸಚಿವರಾಗುವ ಅದೃಷ್ಟವೂ ಅವರಿಗೆ ಸಿಕ್ಕಿದೆ.












Click it and Unblock the Notifications