ಚಾಮರಾಜನಗರ ಡಿಸಿ ಮೇಲೆ ಹಲ್ಲೆ, 4 ಪ್ರಕರಣ ದಾಖಲು
ಚಾಮರಾಜನಗರ, ನವೆಂಬರ್ 03 : ಕನ್ನಡ ರಾಜ್ಯೋತ್ಸವದ ದಿನ ಚಾಮರಾಜನಗರ ಜಿಲ್ಲಾಧಿಕಾರಿಗಳ ಕಾರಿನ ಮೇಲೆ ಕರಿಕಲ್ಲು ಹಾಗೂ ಮರಳು ಮಾಫಿಯಾದವರು ಕಲ್ಲು ತೂರಾಟ ಮಾಡಿರುವ ಮತ್ತು ಜಿಲ್ಲಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಚಾಮರಾಜನಗರದ ಗುಂಡ್ಲುಪೇಟೆ ವೃತ್ತದ ಬಳಿ ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಅವರ ಕಾರಿನ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಕಾರನ್ನು ಜಖಂಗೊಳಿಸಿದ್ದರು. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಜಿಲ್ಲಾಧಿಕಾರಿಗಳಿಗೆ ಗಾಯವಾಗಿತ್ತು. [ಹಾಸನ : ಮರಳು ಮಾಫಿಯಾದಿಂದ ಪೊಲೀಸರ ಮೇಲೆ ಹಲ್ಲೆ]

ಸಿಸಿ ಕ್ಯಾಮರಾಗೆ ಹಾನಿ : ಕಲ್ಲು ತೂರಾಟ ಮಾಡಿರುವ ದುಷ್ಕರ್ಮಿಗಳು ಗುಂಡ್ಲುಪೇಟೆ ವೃತ್ತದಲ್ಲಿರುವ ಸಿಸಿ ಕ್ಯಾಮರಾವನ್ನು ಜಖಂಗೊಳಿಸಿದ್ದಾರೆ. ಸಿಸಿ ಕ್ಯಾಮರಾ ಜಖಂಗೊಳ್ಳುವ ತನಕ ರೆಕಾರ್ಡ್ ಆಗಿರುವ ದೃಶ್ಯಗಳನ್ನು ಪೊಲೀಸರು ಪಡೆದಿದ್ದು, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. [ಮರಳು ಮಾಫಿಯಾ ಎಂದರೇನು, ಏನಿದರ ಮರ್ಮ]
'ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈ ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೂ ಗಾಯಗಳಾಗಿದ್ದು, ಇಲಾಖೆಗೆ ಸೇರಿದ ವ್ಯಾನ್ ಕೂಡ ಜಖಂ ಆಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಮೌನ ಪ್ರತಿಭಟನೆ : ಜಿಲ್ಲಾಧಿಕಾರಿಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಚಾಮರಾಜನಗರ ಜಿಲ್ಲಾಡಳಿತ ಭವನದ ಕಂದಾಯ ಇಲಾಖೆಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಮೌನವಾಗಿ ಪ್ರತಿಭಟನೆ ನಡೆಸಿದರು. ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಮಂಗಳವಾರವೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.












Click it and Unblock the Notifications