HD ಕುಮಾರಸ್ವಾಮಿ ಮೇಲೆ ಜಮೀರ್ ಅಹ್ಮದ್ ಖಾನ್ ಟೀಕೆಗೆ ಟಿಎ ಶರವಣ ತಿರುಗೇಟು
ಬೆಂಗಳೂರು, ಅಕ್ಟೋಬರ್ 03: ಮಾನ್ಯ ವಸತಿ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಖಾತೆ ಮಂತ್ರಿ ಗಳಾದ ಜಮೀರ್ ಅಹಮದ್ ಖಾನ್ ಅವರು ಪಕ್ಷದ ಮುಖ್ಯಸ್ಥ ಮಾಜಿ ಸಿಎಂ ಕುಮಾರಸ್ವಾಮಿ ಅವರ ಕುರಿತು ಕ್ಷುಲ್ಲಕವಾಗಿ ಮಾತನಾಡಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲ ಎಂದು ಜೆಡಿಎಸ್ ಹಿರಿಯ ನಾಯಕ ವಿಧಾನಪರಿಷತ್ ಹಿರಿಯ ಸದಸ್ಯ ಟಿಎ ಶರವಣ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಂಗಳವಾರ ಪ್ರತಿಕ್ರಿಯಿಸಿರುವ ಟಿಎ ಶರವಣ ಅವರು ಜಮೀರ್ ಅಹ್ಮದ್ ಖಾನ್ ಮೇಲೆ ಕಿಡಿ ಕಾರಿದ್ದಾರೆ. ತಮ್ಮ ರಾಜಕೀಯ ಬದುಕಿನ ಆರಂಭದ ಕಾಲದಲ್ಲಿ ಕುಮಾರಸ್ವಾಮಿ ಅವರ ಜೊತೆಗಿದ್ದವರು ಅವರು. ಅವರಿಂದ ರಾಜಕೀಯ ಲಾಭ ಪಡೆದು, ಏಳಿಗೆಯಾಗಿ ಈಗ ವ್ಯಕ್ತಿಗತವಾಗಿ ನಿಂದಿಸುವ ಮಟ್ಟಕ್ಕೆ ಜಮೀರ್ ಅಹಮದ್ ಹೋಗಿರುವುದು ಅವರ ಮಟ್ಟವನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜಕಾರಣ ನಿಂತ ನೀರಲ್ಲ. ಕಾಲಾಂತರದಲ್ಲಿ ಬದಲಾಗುತ್ತದೆ. ಆದರೆ ಹತ್ತಿದ ಏಣಿಯನ್ನೆ ಕಾಲಲ್ಲಿ ಒದೆಯುವ ಜಮೀರ್ ಅಹ್ಮದ್ ಮನಸ್ಥಿತಿ ಸರಿಯಲ್ಲ. ಇದು ರಾಜಕೀಯ ದ್ರೋಹದ ಮನೋಭಾವ ಎನ್ನದೆ ವಿಧಿಯಿಲ್ಲ ಎಂದ ಅವರು ಹೇಳಿದ್ದಾರೆ.
ಜಮೀರ್ ಕಣ್ಣು ಬಿಡುವಾಗ ಇದ್ದ ಕುಮಾರಸ್ವಾಮಿ ಬದಲಾಗಿಲ್ಲ
ಈ ಹಿಂದೆ ಜಮೀರ್ ರಾಜಕೀಯವಾಗಿ ಇನ್ನೂ ಕಣ್ಣು ಬಿಡುತ್ತಿದ್ದಾಗ, ಯಾವ ಕುಮಾರಸ್ವಾಮಿಯವರು ಅವರನ್ನು ತಮ್ಮದೇ ಬಸ್ ನಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೋದಾಗ ಯಾವ ಚಡ್ಡಿ ಹಾಕಿದ್ದರೋ, ಈಗಲೂ ಅಂಥದ್ದೇ ಚಡ್ಡಿ ಹಾಕಿದ್ದಾರೆ. ಆಗ ಜಮೀರ್ ಅಹಮದ್ ಅವರಿಗೆ ಪರಿವೆ ಇರಲಿಲ್ಲವೇ? ಕುಮಾರಣ್ಣ ಯಾವತ್ತೂ ಬದಲಾಗಿಲ್ಲ. ನಂಬಿದ ತತ್ವ ಸಿದ್ಧಾಂತದಲ್ಲಿ ರಾಜಿ ಮಾಡಿಕೊಂಡು ಅಧಿಕಾರಕ್ಕಾಗಿ ರಾಜಕಾರಣ ಮಾಡಿದವರಲ್ಲ ಎಂದರು.

ರಾಜಕೀಯವಾಗಿ ಅನಾಮಿಕರಾಗಿದ್ದ ಜಮೀರ್ ರನ್ನು ಗುರುತಿಸಿ, ಮಂತ್ರಿ ಸ್ಥಾನ ಕೊಟ್ಟು ಅವರಿಗೆ ಅಸ್ತಿತ್ವವನ್ನು ತಂದು ಕೊಟ್ಟವರು ಎಚ್‌ಡಿ ಕುಮಾರಸ್ವಾಮಿಯವರು. ಅವರಿಗೆ ರಾಜಕೀಯ ಬದುಕು ಕೊಟ್ಟಿದ್ದೇ ಜೆಡಿಎಸ್. ಅದನ್ನೇ ಮರೆತು, ಬದುಕು ಕೊಟ್ಟ ಪಕ್ಷ, ನಾಯಕರ ಬಗ್ಗೆ ವಿದ್ರೋಹಿ ಮಾತುಗಳನ್ನು ಆಡುತ್ತಿರುವ ಜಮೀರ್ ಅಹಮದ್ ಅವರ ನಡೆ ಖಂಡನಾರ್ಹ ಎಂದು ಅವರು ಗುಡುಗಿದರು.
ಹೇಳಿಕೆ ತಿರುಚಬೇಡಿ
ಅಲ್ಪ ಸಂಖ್ಯಾತರ ಬಗ್ಗೆ ಕುಮಾರಸ್ವಾಮಿ ಅವರು ಯಾವತ್ತೂ ಆಗೌರವದ ಮಾತಾಡಿಲ್ಲ. ಚನ್ನಪಟ್ಟಣದಲ್ಲಿ ತಾವು ಗೆಲ್ಲಲು ಅಲ್ಪಸಂಖ್ಯಾತರೂ ಕಾರಣ ಎಂದು ಹೇಳಿದ್ದಾರೆ. ಅನಗತ್ಯವಾಗಿ ಅವರ ಹೇಳಿಕೆಯನ್ನು ತಿರುಚುವುದು ಬೇಡ ಎಂದು ಅವರು ಎಚ್ಚರಿಸಿದ್ದಾರೆ.
ಅಲ್ಪ ಸಂಖ್ಯಾತರು ತಮ್ಮ ಸ್ವತ್ತು ಎಂದು ತಿಳಿದು, ಅವರನ್ನು ಗುತ್ತಿಗೆ ಪಡೆದವರಂತೆ ವರ್ತಿಸುವುದು ಜಮೀರ್ ಅಹಮದ್ ಅವರಿಗೆ ಘನತೆ ತರುವುದಿಲ್ಲ. ಸರಿಯಲ್ಲ ಎಂದು ಅವರಿಗೆ ನಾನು ತಿಳಿ ಹೇಳುತ್ತೇನೆ ಎಂದು ಶರವಣ ತಿರುಗೇಟು ನೀಡಿದರು.
ಜಮೀರ್ ಅಹ್ಮದ್ ಖಾನ್ ಹೇಳಿದ್ದೇನು?
ಮುಂಬರಲಿರುವ ಲೋಕಸಭಾ ಚುನಾವಣೆ ಸಂಬಂಧ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಲೇವಡಿ ಮಾಡಿದ್ದರು. ಕುಮಾರಸ್ವಾಮಿ ಪ್ಯಾಂಟ್ ಒಳಗಡೆ ಚಡ್ಡಿ ಇದೆ ಅನ್ನೋದನ್ನು ಅವರು ರುಜುವಾತು ಮಾಡಿದ್ದಾರೆ. ಮೊದಲಿನಿಂದಲೂ ಕುಮಾರಸ್ವಾಮಿ ಅವರಿಗೆ ಮುಸಲ್ಮಾನರನ್ನು ಕಂಡರೇ ದ್ವೇಷ ಎಂದು ವೈಯಕ್ತಿವಾಗಿ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಕಿಸಿದ ಟಿಎ ಶರವಣ ಅವರು ಜಮೀರ್ ಹೇಳಿಕೆ ಖಂಡಿಸಿದ್ದಾರೆ.












Click it and Unblock the Notifications