• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್, ಜೆಡಿಎಸ್‌ನಲ್ಲಿ ಹಾಲಿಗಳಿಗೆ ಕೈತಪ್ಪಿದ ಟಿಕೆಟ್, ಬಿಜೆಪಿಯಲ್ಲೂ ಇದೆ ಅಸಮಾಧಾನ

|
Google Oneindia Kannada News

ಬೆಂಗಳೂರು, ನ.23: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಸಲು ಮಂಗಳವಾರ (ನ.23) ಕೊನೆಯ ದಿನ. ಆದರೆ, ಹಾಲಿ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಜೆಡಿಎಸ್‌ನ ಸಂದೇಶ ನಾಗರಾಜ್ ಸಹಿತ ಹಲವರು ಹಾಲಿಗಳಿಗೆ ಟಿಕೆಟ್ ಕೈತಪ್ಪಿರುವುದು ಆಯಾ ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದೆ.

ನಾಮಪತ್ರ ಸಲ್ಲಿಕೆಯ ಕೊನೆಯ ದಿನದಂದು ಬೆಳಗ್ಗೆ ಜೆಡಿಎಸ್‌ ಏಳು ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಹಿಂದಿನ ದಿನವಷ್ಟೇ ಅಂದರೆ ನ.22ರಂದು ಕಾಂಗ್ರೆಸ್ 25 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಬಿಜೆಪಿ 20 ಕ್ಷೇತ್ರಗಳಿಗೆ ಈಗಾಗಲೇ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ. ನ.24ರಂದು ನಾಮಪತ್ರಗಳ ಪರಿಶೀಲನೆ, ಡಿ.10ರಂದು ಮತದಾನ ನಡೆಯಲಿದೆ. ಈ ಮಧ್ಯೆ ಕಾಂಗ್ರೆಸ್, ಜೆಡಿಎಸ್‌ನಲ್ಲಿ ಕೆಲವು ಹಾಲಿಗಳಿಗೆ ಟಿಕೆಟ್ ಕೈತಪ್ಪಿದೆ. ಇದು ಆಯಾ ಪಕ್ಷಗಳಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.

ಕಾಂಗ್ರೆಸ್‌ನಲ್ಲಿ ಭುಗೆಲೆದ್ದ ಅಸಮಾಧಾನ:

ವಿಜಯಪುರ- ಬಾಗಲಕೋಟೆ ಕ್ಷೇತ್ರದಿಂದ ಹಾಲಿ ವಿಧಾನ ಪರಿಷತ್ತು ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ನಾಲ್ಕು ಬಾರಿ ಆಯ್ಕೆ ಯಾಗಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಐಟಿಬಿಟಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ವಿಧಾನ ಪರಿಷತ್ತಿನಲ್ಲಿ ಸರ್ಕಾರದ ನೀತಿ ನಿರ್ಧಾರಗಳನ್ನು ಸಮರ್ಥವಾಗಿ ಪ್ರಸ್ತಾಪಿಸಿ, ಪ್ರತಿಪಕ್ಷಗಳ ಟೀಕೆಗಳನ್ನು ನಿಭಾಯಿಸುತ್ತಿದ್ದರು. ಈ ಬಾರಿಯೂ ಸಹ ತಮಗೆ ಸುಲಭವಾಗಿ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ, ಸೋಮವಾರ ಬಿಡುಗಡೆಯಾದ ಕಾಂಗ್ರೆಸ್ ಪಟ್ಟಿ ಅವರಿಗೆ ಆಘಾತ ತಂದಿದ್ದು, ವಿಜಯಪುರ- ಬಾಗಲಕೋಟೆ ಕ್ಷೇತ್ರದಿಂದ ಮಾಜಿ ಸಚಿವ ಎಂ.ಬಿ.ಪಾಟೀಲ ಅವರ ಸಹೋದರ ಸುನೀಲ್ ಗೌಡ ಪಾಟೀಲ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

Karnataka MLC Elections; Several Leaders Disappointed after Missing Ticket to MLC Election

ಇದರಿಂದ ಎಸ್.ಆರ್. ಪಾಟೀಲ್ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮಗೆ ಟಿಕೆಟ್ ಕೈತಪ್ಪಿರುವುದರ ಹಿಂದೆ ದೊಡ್ಡ ಮಟ್ಟದಲ್ಲಿ ಷ್ಯಡ್ಯಂತ ನಡೆದಿದೆ ಎಂದು ಆರೋಪಿಸಿದ್ದಾರೆ. ಎಸ್.ಆರ್. ಪಾಟಿಲ್ ಅವರಿಗೆ ಟಿಕೆಟ್ ನೀಡದಿರುವುದನ್ನು ವಿರೋಧಿಸಿ ಅವರ ಕ್ಷೇತ್ರದ ಕೆಲ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಅದೇ ರೀತಿ ಕಾಂಗ್ರೆಸ್‌ನಲ್ಲಿ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಧರ್ಮಸೇನ ಅವರ ಬದಲಿಗೆ ಚಾಮರಾಜನಗರದಲ್ಲಿ ಆರೋಗ್ಯ ಇಲಾಖೆ ನಿವೃತ್ತ ನಿರ್ದೇಶಕ ಡಾ.ಡಿ. ತಿಮ್ಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಕಾರವಾರ ಕ್ಷೇತ್ರದಲ್ಲಿ ಶ್ರೀಕಾಂತ ಘೊಟ್ನೇಕರ್ ಬದಲಿಗೆ ಹೊಸ ಮುಖ ಭೀಮಣ್ಣ ನಾಯಕ್ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಹಾಲಿ ಸದಸ್ಯರಾಗಿದ್ದ ರಾಯಚೂರಿನ ಬಸವರಾಜ ಪಾಟೀಲ ಇಟಗಿ, ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರ ಪುತ್ರ ಬೀದರ್‌ನ ವಿಜಯಸಿಂಗ್, ಚಿತ್ರದುರ್ಗದ ರಘು ಆಚಾರ್, ಹಾಸನದ ಗೋಪಾಲ ಸ್ವಾಮಿ ಅವರು ತಾವು ಮತ್ತೊಮ್ಮೆ ಸ್ಪರ್ಧೆಗೆ ನಿರಾಕರಸಿದ ಕಾರಣ ಅವರ ಬದಲಿಗೆ ಬೇರೆಯವರಿಗೆ ಟಿಕೆಟ್ ಘೋಷಣೆಯಾಗಿದೆ.

ಜೆಡಿಎಸ್ ಸಂದೇಶಕ್ಕೆ ಬೆಚ್ಚಿದ 'ಸಂದೇಶ್ ನಾಗರಾಜ್':

ಜೆಡಿಎಸ್ ಬಿಟ್ಟು ಬಿಜೆಪಿ ಸೇರುವುದಾಗಿ ಹಾಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದು ಜೆಡಿಎಸ್ ವರಿಷ್ಠರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕಾರಣದಿಂದ ಮೈಸೂರು ವಿಧಾನ ಪರಿಷತ್ತಿನ ಚುನಾವಣಾ ಟಿಕೆಟ್‌ ಅನ್ನು ಜೆಡಿಎಸ್ ಸಿ.ಎನ್. ಮಂಜೇಗೌಡ ಅವರಿಗೆ ನೀಡಿದೆ. ಮಂಜೇಗೌಡ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಸೋಮವಾರವಷ್ಟೇ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಪಕ್ಷ ಸೇರಿದ ಒಂದೇ ದಿನಕ್ಕೆ ಟಿಕೆಟ್ ಘೋಷಣೆ ಮಾಡಿರುವುದು ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸಿದೆ.

ಇನ್ನು ಬಿಜೆಪಿ ಸೇರುವುದಾಗಿ ಹೇಳಿದ್ದ ಸಂದೇಶ್ ನಾಗರಾಜ್ ಅವರಿಗೆ ವಯೋಮಿತಿ ಕಾರಣದಿಂದ ಬಿಜೆಪಿ ಟಿಕೆಟ್ ಸಹ ದಕ್ಕಿಲ್ಲ. ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಕೌಟಿಲ್ಯ ಅವರಿಗೆ ಬಿಜೆಪಿ ಈಗಾಗಲೇ ಟಿಕೆಟ್ ಘೋಷಣೆ ಮಾಡಿದೆ. ಸಂದೇಶ್ ನಾಗರಾಜ್ ಅವರು ಜೆಡಿಎಸ್ ಟಿಕೆಟ್ ಪಡೆಯಲು ಸೋಮವಾರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಕೊನೆಯ ಕ್ಷಣದ ಪ್ರಯತ್ನ ನಡೆಸಿದರೂ ಸಹ ಯಾವುದೇ ಫಲ ನೀಡಿಲ್ಲ. ಇತ್ತ ಜೆಡಿಎಸ್, ಅತ್ತ ಬಿಜೆಪಿ ಟಿಕೆಟ್ ಇಲ್ಲದೆ ಕಂಗಾಲಾಗಿದ್ದಾರೆ ಸಂದೇಶ್ ನಾಗರಾಜ್.

ಈ ಮಧ್ಯೆ ಸಂದೇಶ್ ನಾಗರಾಜ್ ಮೈಸೂರಿನಲ್ಲಿ ಜಾಹೀರಾತು ಬಿಡುಗಡೆ ಮಾಡಿದ್ದಾರೆ. ಈ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. 12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯನಾಗಿ ಜನಪರ ಕೆಲಸ ಮಾಡಿದ ತೃಪ್ತಿ ಇದೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆ ಇತ್ತು. ಆದರೆ, ವಯೋಮಿತಿ ಕಾರಣ ಟಿಕೆಟ್ ಕೈತಪ್ಪಿದೆ. ಬಿಜೆಪಿ ಎಲ್ಲ ನಾಯಕರಿಗೂ ಧನ್ಯವಾದಗಳು ತಿಳಿಸಿರುವ ಅವರು, ಜೆಡಿಎಸ್ ವರಿಷ್ಠರಿಗೂ ತಮ್ಮ ಧನ್ಯವಾದ ತಿಳಿಸಿದ್ದಾರೆ.

ಬಿಜೆಪಿಯಲ್ಲೂ ಇದೆ ಅಸಮಾಧಾನ:

ಕಾಂಗ್ರೆಸ್‌ನಿಂದ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣವಾಗಿದ್ದವರ ಪೈಕಿ ಪ್ರಮುಖರಾದ ರಮೇಶ್ ಜಾರಕಿಹೊಳಿ ತಮ್ಮ ಸಹೋದರ ಲಖನ್‌ ಜಾರಕಿಹೊಳಿಗೆ ಬೆಳಗಾವಿಯಿಂದ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಕೊಡುವ ನಿರೀಕ್ಷೆಯಲ್ಲಿದ್ದರು. ಆದರೆ, ಪಕ್ಷದಿಂದ ಟಿಕೆಟ್ ಖಾತ್ರಿಯಾಗಿಲ್ಲ. ಇದು ಬೆಳಗಾವಿ ರಾಜಕೀಯದಲ್ಲಿ ಅಸಮಾಧಾನ ಉಂಟು ಮಾಡಿದೆ. ಲಖನ್ ಇಂದು ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇನ್ನು ಜೆಡಿಎಸ್ ಕುಟುಂಬ ರಾಜಕಾರಣದ ಭಾಗವಾಗಿ ಎಚ್.ಡಿ. ರೇವಣ್ಣ ಅವರ ಪುತ್ರ ಸೂರಜ್ ರೇವಣ್ಣ ಅವರಿಗೆ ಹಾಸನ ಟಿಕೆಟ್ ಖಾತ್ರಿಯಾಗಿದೆ. ಬಿಜೆಪಿಯಲ್ಲಿ ಕೊಡಗು ಕ್ಷೇತ್ರದಿಂದ ಹಾಲಿ ಸದಸ್ಯ ಸುನೀಲ್ ಸುಬ್ರಮಣಿ ಬದಲಿಗೆ ಸಹೋದರ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಜಾ ಕುಶಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

   ಹಾರ್ದಿಕ್ ಪಾಂಡ್ಯ ಅವರ ಕ್ರಿಕೆಟ್ ಭವಿಷ್ಯ ಈಗ ಕೆತ್ತಲಾಗಿದೆ | Oneindia Kannada
   English summary
   Karnataka Legislative Council Elections; Several Leaders of Congress, BJP and JDS Disappointed after Missing Ticket to MLC Election. Mainly S R Patil, Lakhan Jarkiholi, Sandesh Nagaraj and others. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X