ಹೊಸ ಪಕ್ಷ ಕಟ್ಟುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಏನಂದ್ರು?
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಸೂಚನೆ ನೀಡಿದ್ದರು. ಇದೀಗ ಮತ್ತೆ ಯತ್ನಾಳ್ ಅವರು ಇದೇ ವಿಚಾರವಾಗಿ ಮಾತನಾಡಿದ್ದಾರೆ. ಸದ್ಯ ಇಡೀ ರಾಜ್ಯ ಪ್ರವಾಸ ಮಾಡುತ್ತಿರುವ ಅವರು ಹೊಸ ಪಕ್ಷ ಕಟ್ಟುವುದು ಯಾವಾಗ? ಎಂಬ ಬಗ್ಗೆ ಮಹತ್ವದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ರಾಜ್ಯ ಪ್ರವಾಸ ಮಾಡುತ್ತಿರುವ ಅವರ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದು, ಎಲ್ಲರ ಅಭಿಪ್ರಾಯ ಪಡೆದು ಹೊಸ ಪಕ್ಷ ಕಟ್ಟುವ ಚಿಂತನೆಯಲ್ಲಿದ್ದಾರೆ.
ನಾನು ಕರ್ನಾಟಕದಾದ್ಯಂತ ಪ್ರವಾಸ ಮಾಡುತ್ತಿದ್ದೆ. ಜನರಿಂದ ಒಳ್ಳೆಯ ಸ್ಪಂದನೆ ಸಿಗುತ್ತಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಅದ್ಭುತವಾದ ರೆಸ್ಪಾನ್ಸ್ ಸಿಗುತ್ತಿದೆ. ನಾನು ಹೋದ ಕಡೆಯೆಲ್ಲ ಸಾವಿರಾರು ಜನ ಬಂದು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದಾರೆ. ನೀವು ಏನೇ ನಿರ್ಣಯ ತೆಗೆದುಕೊಂಡರೂ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಬೆನ್ನುತಟ್ಟುತ್ತಿದ್ದಾರೆ. ಒಟ್ಟಾರೆ ಹಿಂದುತ್ವ ಉಳಿಯುವಂತೆ ನಿರ್ಧಾರ ತೆಗೆದುಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಾನು ಮೊದಲೇ ಹೇಳಿದಂತೆ ಇನ್ನೂ ವಿಜಯದಶಮಿವರೆಗೆ ನಾನು ರಾಜ್ಯದಲ್ಲಿ ಅಡ್ಡಾಡುತ್ತೇನೆ. ಆ ಬಳಿಕ ನಮ್ಮ ನಿರ್ಧಾರ ತಿಳಿಸುತ್ತೇವೆ. ನಾವು ಈಶ್ವರಪ್ಪ ಅವರೊಂದಿಗೆ ಸೇರಿಕೊಂಡು ಹಾವೇರಿಯಲ್ಲೂ ದೊಡ್ಡ ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ. ವಿಜಯೇಂದ್ರ ಅವರು ನನ್ನ ಉಚ್ಚಾಟನೆಯ ಬಳಿಕ ಬಿಜೆಪಿ ಒಗ್ಗಟ್ಟಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಅದು ಸುಳ್ಳು, ವಿಜಯೇಂದ್ರ ವಿಜಯಪುರಲ್ಲಿ ಭಾಷಣ ಮಾಡುವಾಗ ಬಹಳ ಕಡಿಮೆ ಜನ ಇದ್ದರು. ಜನಾಕ್ರೋಶ ಯಾತ್ರೆ ವಿಜಯಪುರ, ದಾವಣಗೆರೆ, ಹಾವೇರಿ ಮೊದಲಾದ ಕಡೆಗಳಲೆಲ್ಲ ವಿಫಲವಾಗಿದೆ. ಹಾವೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದ ಬಸವರಾಜ ಬೊಮ್ಮಾಯಿಯವರು ಭಾಗಿಯಾಗಿರಲಿಲ್ಲ ಎಂದು ಯತ್ನಾಳ್ ತಿರುಗೇಟು ನೀಡಿದ್ದಾರೆ.
ನಂದಿ ಮೂರ್ತಿ ವಿರೂಪಕ್ಕೆ ಖಂಡನೆ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಂದಿ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳನ್ನು ಪೊಲೀಸರು ಆದಷ್ಟು ಬೇಗ ಬಂಧಿಸಿ ಅವರನ್ನು ಕೃಷ್ಣ ಪರಮಾತ್ಮನ ಜನ್ಮಸ್ಥಳಕ್ಕೆ ಕಳುಹಿಸಬೇಕು ಎಂದು ಶಾಸಕ ಯತ್ನಾಳ್ ಒತ್ತಾಯಿಸಿದ್ದಾರೆ. ಹಿಂದೂ ದೇವಸ್ಥಾನಗಳನ್ನು ವಿರೂಪಗೊಳಿಸುವುದು, ಮೂರ್ತಿಗಳನ್ನು ಭಗ್ನಗೊಳಿಸುವ ರೋಗಗ್ರಸ್ಥ ಮನಃಸ್ಥಿತಿ ಇರುವವರನ್ನು ಹಿಡಿದು ಸರಿಯಾದ 'ಪೊಲೀಸ್ ಆತಿಥ್ಯ' ನೀಡಿದ್ದಲ್ಲಿ ಮುಂದೆಂದೂ ಬೇರೆಯವರು ಈ ರೀತಿಯಾದ ದುಷ್ಟ ಕೆಲಸ ಮಾಡಲು ಯೋಚಿಸುವುದಿಲ್ಲ. ಹಾಗೆಯೇ ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ, ದೇವಸ್ಥಾನಗಳಿಗೆ ಸೂಕ್ತ ಭದ್ರತೆ, ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಲಿ ಎಂದು ಒತ್ತಾಯಿಸಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರರಾಗಿದ್ದ ವಿಜಯನಗರದ ಶ್ರೀಕೃಷ್ಣದೇವರಾಯರ ಸಮಾಧಿಯ ಜಾಗವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಕೆಲ ಸ್ಥಳೀಯರು ಪರಿವರ್ತಿಸಿರುವುದು ಕನ್ನಡ ನಾಡಿನ ಹೆಮ್ಮೆಯ ಅರಸರಾದ ಅಸಾಮಾನ್ಯ ಆಡಳಿತಗಾರ, ಅಪ್ರತಿಮ ದಂಡನಾಯಕ ಕೃಷ್ಣದೇವರಾಯರಿಗೆ ಮಾಡಿದ ಅವಮಾನ ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಹಿಂದೂ ದೇವಾಲಯಗಳನ್ನ ಕೆಡವಿ, ದೇಶದ ಸಂಪತ್ತನ್ನು ದೋಚಿ, ಸಾವಿರಾರು ಹಿಂದೂಗಳನ್ನು ಅಮಾನವೀಯವಾಗಿ ಕೊಂದ ಔರಂಗಜೇಬನ ಸಮಾಧಿಗೆ ಪುರಾತತ್ವ ಸರ್ವೇಕ್ಷಣಾ ಇಲಾಖೆ ತೆರಿಗೆದಾರರ ಹಣದಿಂದ ಸಂರಕ್ಷಣೆ ಮಾಡುತ್ತಿದೆ. ಆದರೆ, ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದ ಪರಾಕ್ರಮಿ, ಕಲೆ,ಸಾಹಿತ್ಯ ರಂಗಗಳ ಪೋಷಕ ಶ್ರೀಕೃಷ್ಣದೇವರಾಯರ ಸಮಾಧಿಗೆ ಏಕೆ ಈ ರೀತಿಯಾದ ದಿವ್ಯ ನಿರ್ಲಕ್ಷ್ಯ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದು ಕನ್ನಡಿಗರಿಗಷ್ಟೇ ಅಲ್ಲ ರಾಷ್ಟ್ರಕ್ಕೆ ಮಾಡಿದ ಅವಮಾನ, ಮಾಂಸವನ್ನು ಮಾರುತ್ತ ಸ್ಥಳದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿರುವ ಇಂತವರನ್ನು ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ ಎಂದು ಒತ್ತಾಯಿಸಿದ್ದರು. ಈ ಸಂಬಂಧ ಸ್ಥಳೀಯ ಆಡಳಿತ ಈಗಾಗಲೇ ಕ್ರಮ ತೆಗೆದುಕೊಂಡಿದೆ.












Click it and Unblock the Notifications