ಯಾವುದೇ ಪಕ್ಷದಲ್ಲಿ ಭ್ರಷ್ಟರಿದ್ದರೂ ಅವರೆಲ್ಲ ಜೈಲಿಗೆ ಹೋಗಲಿ: ಮತ್ತೆ ಸ್ವಪಕ್ಷದವರ ವಿರುದ್ಧ ಗುಡುಗಿದ ಯತ್ನಾಳ್
ಹುಬ್ಬಳ್ಳಿ, ಸೆಪ್ಟೆಂಬರ್ 27: ಯಾವುದೇ ಪಕ್ಷದಲ್ಲಿ ಭ್ರಷ್ಟರಿದ್ದರೂ ಅವರೆಲ್ಲ ಜೈಲಿಗೆ ಹೋಗಲಿ, ರಾಜ್ಯದಲ್ಲಿ ಹೊಸ ಯುಗ ಆರಂಭವಾಗಲಿ, ಹೊಂದಾಣಿಕೆ ರಾಜಕಾರಣ ಮುಕ್ತ ರಾಜ್ಯವಾಗಲಿ ಎಂದು ಸ್ವಪಕ್ಷದವರ ವಿರುದ್ಧವೂ ಬಿಜೆಪಿ ಶಾಸಕ ಬಸನಗೌಡಪಾಟೀಲ ಯತ್ನಾಳ ಕಿಡಿಕಾರಿದರು.
ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧವೂ ತನಿಖೆ ನಡೆಯಲಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮಗಳು ನಡೆದಿದ್ದರೆ ಅವುಗಳ ತನಿಖೆಯೂ ಆಗಲಿ. ಅದನ್ನು ಬಿಟ್ಟು, ಹೊಂದಾಣಿಕೆ ರಾಜಕೀಯ ಮಾಡಿಕೊಂಡು, ಅನವಶ್ಯಕ ಹೇಳಿಕೆ ನೀಡುವುದರಲ್ಲಿ ಪ್ರಯೋಜನವಿಲ್ಲ ಎಂದು ಯತ್ನಾಳ್ ಕಿಡಿಕಾರಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಮತ್ತು ವಿಧಾನಸಭೆಯನ್ನು ವಿಸರ್ಜನೆ ಮಾಡಬೇಕು' ಎಂದು ಶಾಸಕ ಬಸನಗೌಡಪಾಟೀಲ ಯತ್ನಾಳ ಆಗ್ರಹಿಸಿದರು. ಮುಖ್ಯಮಂತ್ರಿ ಹುದ್ದೆಯಲ್ಲಿ ಇದ್ದುಕೊಂಡು ತನಿಖೆ ಎದುರಿಸುವುದು ಸೂಕ್ತವಲ್ಲ. ಅಧಿಕಾರಿಗಳು ನಿರಾತಂಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ಸಮಾಜಕ್ಕೆ ದೊಡ್ಡ ಅನ್ಯಾಯವಾಗಿದೆ. ಹಿಂದುಳಿದವರು, ಪರಿಶಿಷ್ಟರ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆ. ಮೇಲ್ಜಾತಿಯವರನ್ನು ಕಂಡರೆ ಅವರಿಗೆ ಮೊದಲೇ ಆಗದು. ಅವರ ಸರ್ಕಾರದಲ್ಲಿ ಅನುಕೂಲ ಆಗಿದ್ದು ಒಂದೇ ಸಮುದಾಯಕ್ಕೆ ಎಂದು ಅವರು ಆರೋಪಿಸಿದರು.
ರಾಜ್ಯದ ರಾಜ್ಯಪಾಲರೂ ದಲಿತ. ಅವರಿಗೂ ರಾಜ್ಯ ಸರ್ಕಾರ ಅಪಮಾನ ಮಾಡುತ್ತಿದೆ. ಅಂದರೆ ದಲಿತರ ಬಗ್ಗೆ ಇವರಿಗೆ ಇರುವ ಕಾಳಜಿ ಎಷ್ಟು ಎಂಬುದು ತಿಳಿಯುತ್ತದೆ' ಎಂದು ಟೀಕಿಸಿದರು. ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಹೈಕೋರ್ಟ್ ಅನುಮತಿ ನಿಡಿರುವುದನ್ನು ರಾಜಕೀಯ ತೀರ್ಪು ಎಂದು ಜಮೀರ್‌ಅಹ್ಮದ್ ಖಾನ್ ಹೇಳುತ್ತಾರೆ. ಅವರ ತಲೆಯಲ್ಲಿ ಏನು ಕುರಿ ಮಾಂಸ ತುಂಬಿದೆಯೇ. ಅವರಿಗೆ ನ್ಯಾಯಾಂಗ ನಿಂದನೆ ಅಡಿಯಲ್ಲಿ ಶಿಕ್ಷೆ ಆಗಬೇಕು' ಎಂದು ಅವರು ಆಗ್ರಹಿಸಿದರು.
ಈಗಲೇ ನ್ಯಾಯಾಲಯದ ಬಗ್ಗೆ ಅವರು ಹೀಗೆ ಮಾತನಾಡುತ್ತಾರೆ. ಒಂದೊಮ್ಮೆ ಅವರ ಸಮುದಾಯದ ಜನಸಂಖ್ಯೆ ಶೇ 40-50ಕ್ಕೆ ಹೆಚ್ಚಿದರೆ ಬಾಂಗ್ಲಾದೇಶದ ಮಾದರಿಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನೇ ಓಡಿಸಿಬಿಡುತ್ತಾರೆ' ಎಂದು ಆರೋಪಿಸಿದರು.
ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಬಿಜೆಪಿ ಸೇರ್ಪಡೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಗೆ ತೆಗೆದುಕೊಳ್ಳುವುದು ನಮ್ಮ ಕೈಯಲ್ಲಿಲ್ಲ. ಹೈಕಮಾಂಡ್‌ನವರು ತೀರ್ಮಾನಿಸಿದರೆ ಈಶ್ವರಪ್ಪ ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ. ಅವರ ನಡೆ ಹಿಂದುತ್ವದ ಕಡೆ, ಅವರ ನಡೆ ಬಿಜೆಪಿ ಕಡೆ ಎಂದು ಅವರು ಹೇಳಿದರು.












Click it and Unblock the Notifications