ವಾದ ಮಂಡಿಸಲು ಆನಂದ್ ಸಿಂಗ್ ಅರ್ಜಿ: ಮಾರ್ಚ್ 19ರಂದು ತೀರ್ಪು
ಬೆಂಗಳೂರು, ಮಾರ್ಚ್ 16: ತಮ್ಮ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಾದ ಪರಿಗಣಿಸುವಂತೆ ಶಾಸಕ ಆನಂದ್ ಸಿಂಗ್ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಅರ್ಜಿಯ ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದ್ದು, ಮಾರ್ಚ್ 19ರಂದು ತೀರ್ಪು ನೀಡುವ ಸಾಧ್ಯತೆಯಿದೆ.
ರೆಸಾರ್ಟ್‌ನಲ್ಲಿ ಕಂಪ್ಲಿ ಗಣೇಶ್ ಅವರಿಂದ ಹಲ್ಲೆಗೆ ಒಳಗಾಗಿದ್ದ ಆನಂದ್ ಸಿಂಗ್, ಪ್ರಕರಣದಲ್ಲಿ ತಮ್ಮ ಕಡೆಯ ವಾದ ಮಂಡನೆಗೂ ಅವಕಾಶ ನೀಡುವಂತೆ ಕೋರಿದ್ದಾರೆ.

ಹಲ್ಲೆ ನಡೆಸಿದ ಆರೋಪಿ ಶಾಸಕ ಕಂಪ್ಲಿ ಗಣೇಶ್, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಆನಂದ್ ಸಿಂಗ್ ಪರ ವಕೀಲರ ಕೋರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆನಂದ್ ಸಿಂಗ್ ನ್ಯಾಯಾಲಯದಲ್ಲಿ ವಾದ ಮಂಡಿಸುವಂತೆ ಇಲ್ಲ. ಸರ್ಕಾರಿ ವಕೀಲರು ಮಾತ್ರ ಪ್ರಕರಣದಲ್ಲಿ ವಾದ ಮಂಡನೆ ಮಾಡಬಹುದು. ಹೀಗಾಗಿ ಆನಂದ್ ಸಿಂಗ್ ವಕೀಲರು ಸರ್ಕಾರಿ ವಕೀಲರಿಗೆ ಸಹಾಯ ಮಾಡಬಹುದು. ಅವರ ಮೂಲಕ ಕೋರ್ಟ್ ಗಮನಕ್ಕೆ ಮಾಹಿತಿ ತರಬಹುದು ಎಂದು ಆಕ್ಷೇಪ ಸಲ್ಲಿಸಿದರು.
ಆನಂದ್ ಸಿಂಗ್ ಅವರ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಕಂಪ್ಲಿ ಗಣೇಶ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಜಾಮೀನಿಗಾಗಿ ಅವರು ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications