E-Khata: ಇ-ಖಾತಾ ಸಮಸ್ಯೆಗಳ ಪರಿಹಾರ, ಅಪ್‌ಡೇಟ್
ಬೆಂಗಳೂರು, ನವೆಂಬರ್ 14: ಕರ್ನಾಟಕ ಸರ್ಕಾರ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಯಾವುದೇ ಆಸ್ತಿ ವಹಿವಾಟು ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿದೆ. ಇದರಿಂದಾಗಿ ಹಲವು ಸಮಸ್ಯೆಗಳು ಉಂಟಾಗಿವೆ. ಇ-ಖಾತಾ, ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಇರುವ ಸಮಸ್ಯೆಗಳು ಶೀಘ್ರವೇ ಬಗೆಹರಿಯಲಿವೆ. ಸಚಿವರು ಈ ಕುರಿತು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಇಲಾಖೆಗಳ ನಡುವಿನ ಸಮನ್ವಯತೆಯೇ ಉತ್ತಮ, ಜನಪರ ಆಡಳಿತಕ್ಕೆ ದಾರಿ, ಜನರ ಸಮಸ್ಯೆಗಳನ್ನು ಬಗೆಹರಿಸುವುದೇ ನಮ್ಮ ಅಂತಿಮ ಗುರಿಯಾದ್ದರಿಂದ ಸಮನ್ವಯತೆ ಅತ್ಯಗತ್ಯವಾಗಿದೆ ಎಂದರು.

ಇ-ಖಾತಾ ಪ್ರಕ್ರಿಯೆಯ ಕುರಿತು ಚರ್ಚೆ ನಡೆಸಲಾಗಿದೆ. ಇ-ಖಾತಾ ಪ್ರಕ್ರಿಯೆಯನ್ನು ಸುಧಾರಿಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೂ ಸಭೆ ನಡೆಸಿ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಎಲ್ಲಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ-ಖಾತಾ ಸೌಲಭ್ಯ ಲಭ್ಯವಾಗುವಂತೆ ಮಾಡಲಾಗಿದೆ. ಇ-ಖಾತಾ ಅಗತ್ಯವಿರುವವರಿಗೆ ಸಹಾಯ ಮಾಡಲು ಬಿಬಿಎಂಪಿಯ 11 ಸಿಬ್ಬಂದಿಗಳನ್ನು ತಕ್ಷಣದ ವಹಿವಾಟು/ ನೋಂದಣಿಗಾಗಿ ಪ್ರತ್ಯೇಕವಾಗಿ ನಿಯೋಜಿಸಲಾಗಿದೆ.
ಇ-ಖಾತಾ ಪಡೆಯುವ ಸುಲಭ ಮಾಹಿತಿ ನೀಡಲು ಕನ್ನಡ ಮತ್ತು ಇಂಗ್ಲಿಷ್ ವೀಡಿಯೋಗಳನ್ನು ಯೂ ಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಕರಡು ಇ- ಖಾತಾದಲ್ಲಿನ ದೋಷಗಳಿಗಾಗಿ ತಿದ್ದುಪಡಿಗಳನ್ನು ಮಾಡಲು ಅನುಮತಿ ನೀಡಲಾಗಿದೆ. ಮೊದಲ ಬಾರಿಗೆ ಖಾತಾ ಪಡೆಯುತ್ತಿರುವ ಅಪಾರ್ಟ್‌ಮೆಂಟ್‌ಗಳು, ಪಾರ್ಕ್‌ಗಳು, ಸಿಎ ಸೈಟ್‌ಗಳು, ಹೊಸ ಲೇಔಟ್‌ಗಳಲ್ಲಿನ ರಸ್ತೆಗಳು ಇತ್ಯಾದಿಗಳಿಗೆ ಪರಿಹಾರಗಳನ್ನು ಒದಗಿಸಲು ಸೂಚಿಸಲಾಗಿದೆ.
ಸಚಿವರ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಿದ ವಿಷಯಗಳು
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ, ನಗರಾಭಿವೃದ್ಧಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಗಳ ನಡುವೆ ಸಮನ್ವಯದಿಂದ ಇ-ಸ್ವತ್ತು, ಇ-ಆಸ್ತಿ ಮತ್ತು ಇ-ವಿನ್ಯಾಸ ಸುಗಮವಾಗಿ ವಿತರಿಸಲು ಅನುಕೂಲವಾಗುವಂತೆ ವರದಿ ನೀಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಮೂರೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ಜಂಟಿ ಕಾರ್ಯಪಡೆ ರಚನೆ .
* ಖಾತಾ ರಹಿತ ಆಸ್ತಿಗಳ ನೋಂದಣಿ ಸ್ಥಗಿತಗೊಳಿಸಿರಿವುದರಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ದೀರ್ಘವಾಗಿ ಚರ್ಚಿಸಲಾಯಿತು. ಜಂಟಿ ಕಾರ್ಯಪಡೆಯ ಅಧ್ಯಕ್ಷತೆ ವಹಿಸಿರುವ ಅಭಿವೃದ್ಧಿ ಆಯುಕ್ತರು ಖಾತಾ ವಿತರಿಸುವ ಸಂಬಂಧ ತಕ್ಷಣದ ಪರಿಹಾರೋಪಾಯಗಳನ್ನು ಸೂಚಿಸುವುದು ಸೇರಿದಂತೆ ಎರಡು ತಿಂಗಳ ಒಳಗೆ ಅಂತಿಮ ವರದಿಯನ್ನು ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ.
* ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖಾತಾ ವಿತರಿಸುವಲ್ಲಿ ಎದುರಾಗಿರುವ ಸಮಸ್ಯೆಗಳಿಗೆ ಪರಿಹಾರ, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಠಾಣ ವ್ಯಾಪ್ತಿಯ ವಿಸ್ತರಣೆ ಮುಂತಾದ ಸಮಸ್ಯೆಗಳಿಗೂ ಪರಿಹಾರೋಪಾಯಗಳನ್ನು ಶಿಫಾರಸು ಮಾಡುವಂತೆ ಕಾರ್ಯಪಡೆ ಅಧ್ಯಕ್ಷರಿಗೆ ಸೂಚನೆ ನೀಡಲಾಗಿದೆ.
* ಖಾತಾ ವಿತರಿಸುವಲ್ಲಿ ಭವಿಷ್ಯದಲ್ಲಿ ಎದರಾಗುವ ಸಮಸ್ಯೆಗಳೂ ಸೇರಿದಂತೆ ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆಡಳಿತ ಸೇವೆಗಳನ್ನು ಸುಗಮಗೊಳಿಸುವುದಕ್ಕೆ, ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕೆ, ಅಕ್ರಮಗಳಿಗೆ ಕಡಿವಾಣ ಹಾಕುವುದಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ.












Click it and Unblock the Notifications