50-60 ಮಂದಿ ಶಾಸಕರ ಜೊತೆ ಪ್ರಭಾವಿ ಸಚಿವ ಬಿಜೆಪಿ ಸೇರ್ಪಡೆ ಎಂದ ಹೆಚ್ಡಿಕೆ: ಜಾರಕಿಹೊಳಿ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 11: 50-60 ಮಂದಿ ಶಾಸಕರ ಜೊತೆ ಪ್ರಭಾವಿ ಸಚಿವ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ, ನಮ್ಮಲ್ಲಿ ಯಾರು ಏಕನಾಥ್ ಶಿಂಧೆ, ಪವಾರ್ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು, ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಸುವರ್ಣಸೌಧದಲ್ಲಿ ಮಾಧ್ಯಮಗಳ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ನಾನೇನ್ ಡೆಲ್ಲಿಗೆ ಹೋಗಿಲ್ವಲ್ಲ,ಡೆಲ್ಲಿಗೆ ಹೋದವ್ರನ್ನ ಕೇಳಬೇಕು. ಕುಮಾರಸ್ವಾಮಿ ಆ ಪ್ರಭಾವಿ ಸಚಿವ ಯಾರು ಅಂತ ಹೇಳಿದ್ರೆ ಮುಗಿದು ಹೋಗುತ್ತದೆ ಎಂದು ಹೇಳಿದರು.

ಕಿತ್ತೂರು ಗಲಾಟೆ ವಿಚಾರ ಗೊತ್ತಿದೆ. ಮುಷ್ಕರ ಮಾಡುವ ಅವಶ್ಯಕತೆ ಇರಲಿಲ್ಲ, ಅವರ ಎಲ್ಲ ಬೇಡಿಕೆ ಈಡೇರಿಸಿದ್ದೇವೆ. ಎಲ್ಲ ಸರ್ವೇ ಮಾಡಿಸಿದ್ದೇವೆ, ಪ್ರತಿಭಟನೆ ವೇಳೆ ಮಕ್ಕಳ ನುಗ್ಗಾಟ ಆಗಬಾರದಿತ್ತು. ದೊಡ್ಡವರು,ಸಣ್ಣವರು ಪ್ರತಿಭಟನೆ ಮಾಡುವವರ ಜೊತೆ ಬೇರೆ ರೀತಿ ವರ್ತನೆ ಮಾಡಬೇಕು ಎಂದು ತಿಳಿಸಿದರು.
50-60 ಶಾಸಕರೊಂದಿಗೆ ಬಿಜೆಪಿ ಸೇರಲು ಪ್ರಭಾವಿ ಸಚಿವರೊಬ್ಬರಿಂದ ಪ್ರಯತ್ನ ಎಂಬ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ,ಜೆಡಿಎಸ್ ನ್ನು ಜನ ಹೀನಾಯವಾಗಿ ಸೋಲಿಸಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದು ಗೌರವಯುತವಾಗಿ ಜನರ ಕೆಲಸ ಮಾಡಬೇಕು, ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ. ಅಧಿಕಾರ ಇಲ್ಲದೆ ಇರಕಾಗಲ್ಲ ಎಂದು ಈ ರೀತಿ ವರ್ತಿಸಿದರೆ ಶೋಭೆ ತರಲ್ಲ. ಸರ್ಕಾರ ಪತನ ಮಾಡಬೇಕು ಎಂಬುದು ಅವರ ರಾಜಕಾರಣ ಆದರೆ ಏನು ಹೇಳಬೇಕು. ಕಳೆದ ಚುನಾವಣೆಯಲ್ಲಿ ಏನಾಯ್ತು ಎಂದು ತಿಳಿದುಕೊಂಡು ಹೆಜ್ಜೆ ಇಡಲಿ
ನಮ್ಮ ಸರ್ಕಾರ ಐದು ವರ್ಷ ಪೂರೈಸಲಿದೆ. ಜನರ ತೀರ್ಪು ಗೌರವಿಸಬೇಕು, ಯಾವುದೇ ಸರ್ಕಾರದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇರುತ್ತದೆ. ಅದಕ್ಕೆ ಕಾದು, ಸರ್ಕಾರ ಬೀಳಿಸುವುದು ಒಂದೇ ಉದ್ದೇಶ ಕುಳಿತರೆ ರಾಜಕಾರಣ ಅಷ್ಟೇನಾ? ವಿರೋಧ ಪಕ್ಷದ ಜವಾಬ್ದಾರಿಯನ್ನು ಅವರು ನಿಭಾಯಿಸಲಿ, ಅದನ್ನು ಬಿಟ್ಟು ಈ ರೀತಿ ಮಾಡುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರಲ್ಲ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಎಚ್ ಡಿ ಕುಮಾರಸ್ವಾಮಿ ಹೊಗಳಿದ ವಿಚಾರವಾಗಿ ಮಾತನಾಡಿ, ಅವರ ವೈಯಕ್ತಿಕ ರಾಜಕಾರಣ, ಅವರಿಗೆ ಅನಿವಾರ್ಯ ಆಗಿರಬಹುದು. ಶಕ್ತಿ ಕಡಿಮೆಯಾಗಿದೆ, ಶಕ್ತಿ ವೃದ್ಧಿಗೊಳಿಸಲು ಹೀಗೆ ಮಾಡಿರಬಹುದು ಎಂದು ಹೇಳಿದರು.
ಈ ವೇಳೆ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಸತ್ಯಕ್ಕೆ ದೂರ. ಅತ್ಯಂತ ಸುಳ್ಳು ಹೇಳಿಕೆ. ಸರ್ಕಾರವನ್ನ ಅಭದ್ರ ಮಾಡೋ ಉದ್ದೇಶ, ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಕೊಡುವ ಪ್ರಯತ್ನ. ನಮ್ಮ ಕಾಂಗ್ರೆಸ್ ನಿಂದ 17 ಶಾಸಕರನ್ನ ಗೋವಾ, ಮುಂಬೈಗೆ ಕರೆದುಕೊಂಡು ಹೋದ್ರು, ಏನಾಯ್ತು ಅವರ ಪರಿಸ್ಥಿತಿ. ನಮ್ಮ ಸರ್ಕಾರಕ್ಕೆ ಯಾವುದೇ ಧಕ್ಕೆ ಆಗಲ್ಲ ಎಂದು ಹೇಳಿದರದು.












Click it and Unblock the Notifications