'ಪುರಷರಿಗೂ ಉಚಿತ ಪ್ರಯಾಣ ಕೊಡಿ ಎಂದ ಬಿಜೆಪಿಗೆ ಖಡಕ್ ಆಗಿ ತಿರುಗೇಟು ಕೊಟ್ಟ ಸಚಿವರು'
ಬೆಂಗಳೂರು, ಆಗಸ್ಟ್ 22: ಸಾರಿಗೆ ಇಲಾಖೆಗಳು ನಿಜಕ್ಕೂ ಲಾಭದಲ್ಲೇ ಇದ್ದರೆ, ಮಿನಿಸ್ಟರ್ ರಾಮಲಿಂಗ ರೆಡ್ಡಿ ಅವರೇ, ಜನ ಸಾಮಾನ್ಯರ ಮೇಲೆ ಬಸ್ ಪ್ರಯಾಣ ದರ ಏರಿಕೆ ಏಕೆ? ಸಾಮಾನ್ಯ ಬಸ್‌ಗಳಿಂದಲೇ ಇಷ್ಟೊಂದು ಲಾಭ ಬರುತ್ತಿದೆ ಎಂದಾದರೆ, ಎಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಸೌಲಭ್ಯ ಕೊಡುಬಹುದು ಅಲ್ಲವೇ? ರಾಜ್ಯದಲ್ಲಿರುವ ಪುರಷರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ. ಸಾರಿಗೆ ನಿಗಮಗಳೆಲ್ಲವೂ ಭರಪೂರ ಲಾಭ ಗಳಿಸಲಿ ಎನ್ನುವ ಬಿಜೆಪಿ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ತಿರುಗೇಟು ನೀಡಿದ್ದಾರೆ.
ಸಾಮಾನ್ಯ ಜ್ಞಾನವೇ ಇಲ್ಲದವರೊಂದಿಗೆ ಪ್ರತಿದಿನ ಅವರು ಮಾಡುವ ಟ್ಟೀಟ್ ಗಳಿಗೆ ಉತ್ತರ ಕೊಡಬೇಕಾಗಿದೆಯಲ್ಲ ಎನ್ನುವುದು ದುರಂತವೆನಿಸಿದರೂ, ನಮ್ಮ ಜವಾಬ್ದಾರಿಯಿಂದ ನಾವು ನುಳುಚಿಕೊಳ್ಳುವುದಿಲ್ಲ ಎಂಬುದಕ್ಕಾಗಿ ಈ ಪ್ರತಿಕ್ರಿಯೆ ನೀಡುತ್ತಿದ್ದೇವೆ ಎಂದು ಸಂಪುರ್ಣ ವಿವರಣೆ ನೀಡಿದ್ದಾರೆ.

ಕರ್ನಾಟಕ ಸರ್ಕಾರವು ದಿನಾಂಕ 30.09.2000ರಂದು ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ ಹೆಚ್‌ಟಿಡಿ/85/ಟಿಆರ್ಎ/2000 ರ ಅನ್ವಯ ಕರಾರಸಾ ನಿಗಮ ಹಾಗೂ ಇತರೆ ರಾಜ್ಯ ರಸ್ತೆ ಸಾರಿಗೆ ನಿಗಮಗಳು ಡೀಸೆಲ್ ತೈಲದ ಬೆಲೆಯಲ್ಲಿ ಹೆಚ್ಚಳವಾದಾಗ ಮತ್ತು ನೌಕರರಿಗೆ ನೀಡುವ ತುಟ್ಟಿಭತ್ಯೆ ದರಗಳಲ್ಲಿ ಹೆಚ್ಚಳವಾದಾಗ ಪ್ರಯಾಣ ದರಗಳನ್ನು ಸ್ವಯಂಚಾಲಿತ ದರ ಹೊಂದಾಣಿಕೆ ನೀತಿಯಂತೆ ಪರಿಷ್ಕರಿಸಲು ಅನುಮತಿ ನೀಡಿರುತ್ತದೆ ಎಂಬ ಅರಿವು ಕೂಡ ಇವರಿಗೆ ಇಲ್ಲವಲ್ಲ ? ಸಾರಿಗೆ ಸಂಸ್ಥೆಗಳ ಅಭಿವೃದ್ಧಿಯ ಎರಡು ಪ್ರಮುಖ ಅಂಗಗಳು ಕಾರ್ಮಿಕರು ಹಾಗೂ ಬಸ್ಸುಗಳು.
*ದುರಾದೃಷ್ಟವೆಂದರೆ, ಕಳೆದ 5 ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳಲ್ಲಿ 13888 ಹುದ್ದೆಗಳು ಖಾಲಿ ಇದ್ದರೂ ( ನಿವೃತ್ತಿ ಇನ್ನಿತರೆ ಕಾರಣಗಳಿಂದ ) ಒಂದೇ ಒಂದು ನೇಮಕಾತಿ ಆಗಿಲ್ಲ. ನಮ್ಮ ಸರ್ಕಾರ ಸಾರಿಗೆ ಸಂಸ್ಥೆಗಳಲ್ಲಿ 8900 ಖಾಯಂ ನೇಮಕಾತಿಗೆ ಚಾಲನೆ ನೀಡಿ, ಈಗಾಗಲೇ 1883 ಚಾಲಕ/ ನಿರ್ವಾಹಕ/ತಾಂತ್ರಿಕ ಸಿಬ್ಬಂದಿಗಳ ಹುದ್ದೆ ಭರ್ತಿ ಮಾಡಿದೆ.
* ಸಂಸ್ಥೆಗಳಿಗೆ ಡಕೋಟಾ ಬಸ್ಸುಗಳನ್ನು ಕಲ್ಪಿಸಿದ ಕೀರ್ತಿ ಬಿ.ಜೆ.ಪಿ ಅವರಿಗೆ ಸಲ್ಲಬೇಕು. ಕಳೆದ 5 ವರ್ಷಗಳಲ್ಲಿ ಬಿ.ಎಂ.ಟಿ ಸಿ ಹೊರತುಪಡಿಸಿ ಬೇರೆಲ್ಲೂ ಬಸ್‌ಗಳ ಸೇರ್ಪಡೆ ಆಗಿಲ್ಲ, ಕಳೆಪ ಸ್ಥಿತಿಯ ಬಸ್ಸುಗಳನ್ನು ಕಾರ್ಯಾಚರಣೆ ಮಾಡುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಸಾಧುವಲ್ಲದ ಕಾರಣ, ನಿಷ್ಕ್ರಿಯಗೊಳಿಸುವ ಕಾರ್ಯ ಒಂದೆಡೆಯಾದರೆ, 1300 ಬಸ್ಸುಗಳನ್ನು ಪುನಶ್ಚೇತನಗೊಳಿಸುವ ಕಾರ್ಯ ಕೂಡ ನಡೆದಿದೆ.

*ಸಾರಿಗೆ ಸಂಸ್ಥೆಗಳಲ್ಲಿ 5900 ಹೊಸ ಬಸ್ಸುಗಳ ಸೇರ್ಪಡೆಗೊಳಿಸುವ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ . ಕಳೆದ 1 ವರ್ಷದಲ್ಲಿ ನಾಲ್ಕು ನಿಗಮಗಳಲ್ಲಿ 3000 ಹೊಸ ಬಸ್ಸುಗಳ ಸೇರ್ಪಡೆಯಾಗಿದೆ.
*ಡೀಸೆಲ್ ತೈಲದ ಬೆಲೆ ಹೆಚ್ಚಳದಿಂದ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ₹473.28 ಕೋಟಿ ಮತ್ತು ಸಿಬ್ಬಂದಿ ವೆಚ್ಚದಲ್ಲಿ ಹೆಚ್ಚಳ ₹556.59 ಕೋಟಿ ಸೇರಿ ಒಟ್ಟಾರೆ ಕಾರ್ಯಾಚರಣೆ ವೆಚ್ಚದಲ್ಲಿ ವರ್ಷಕ್ಕೆ ಹೆಚ್ಚಳವಾಗಿರುವ ಅಂದಾಜು ಮೊತ್ತ ರೂ.1029.87 ಕೋಟಿಗಳಾಗುತ್ತದೆ.
*ತೈಲದ ಪ್ರತಿ ಲೀಟರ್‌ಗೆ ಸರಾಸರಿ ₹62.44 ರಷ್ಟು ಇದ್ದಾಗ 2020 ರಲ್ಲಿ ಬಸ್ ದರ ಏರಿಕೆಯಾಗಿತ್ತು. ಹಾಲಿ ಕರಾರಸಾ ನಿಗಮಕ್ಕೆ ₹ 85.80 ಡೀಸೆಲ್ ದರವಿದೆ. ಬಿ.ಎಂ.ಟಿ.ಸಿಯಲ್ಲಿ 2015 ರಲ್ಲಿ ಬಸ್ ದರ ಏರಿಕೆಯಾಗಿದ್ದಾಗ ಡೀಸೆಲ್ ದರ ₹53.35 ಆಗಿತ್ತು. ಡೀಸೆಲ್ ದರ ಏರಿಸಿದ ಕೀರ್ತಿ ಕೂಡ ಬಿ.ಜೆ.ಪಿ ಅವರಿಗೆ ಸಲ್ಲಬೇಕು.
*2023 ರಲ್ಲಿ ಸಿಬ್ಬಂದಿಗಳ ವೇತನ ಪರಿಷ್ಕರಣೆ ಮಾಡಿದ ಬಿ.ಜೆ.ಪಿ ಸರ್ಕಾರ ವೇತನ ಹೆಚ್ಚಳ ಪಾವತಿಗಾಗಿ ಅಥವಾ ಬಾಕಿ ವೇತನ ಪಾವತಿಸಲು ಯಾವುದೇ ಅನುದಾನವನ್ನು ನೀಡದೆ ಸಿಬ್ಬಂದಿಗಳನ್ನು ಅಡಕತ್ತರಿಯಲ್ಲಿ ಸಿಲುಕಿಸಿ ಹೋಗಿದ್ದಾರೆ. ವೇತನ ಪಾವತಿಗೂ ಹಣವಿಲ್ಲದೆ ಸಾರಿಗೆ ಸಂಸ್ಥೆಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ.
*ನಾವು ಎಂದು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ ಎಂದು ಹೇಳಿಲ್ಲ, ಸಾರಿಗೆ ಸಂಸ್ಥೆಗಳ ಆದಾಯ ವೃದ್ದಿಯಾಗಿದೆ ಎಂದಷ್ಟೇ ಹೇಳಿರುವುದು.
ಕೆ ಎಸ್ ಆರ್ ಟಿ ಸಿ ಆದಾಯ:
2020 - ₹1569 ಕೋಟಿ
2021 - ₹2037 ಕೋಟಿ
2022 - ₹3349 ಕೋಟಿ
2023 - ₹3930 ಕೋಟಿ
ಲಾಭಕ್ಕೂ ಆದಾಯಗಳಿಕೆಗೂ ವ್ಯತ್ಯಾಸವೇ ತಿಳಿಯದ ಅಧಮರು ಇವರು.
ಸಾರಿಗೆ ಸಂಸ್ಥೆಗಳನ್ನು ₹5900 ಕೋಟಿ ನಷ್ಟದಲ್ಲಿಟ್ಟು ಹೋಗಿರುವ ಇವರಿಗೆ, ಸಾರಿಗೆ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂಬುದೇ ತಿಳಿಯದಾಗಿದೆ. ಇವರಿಗೆ ಆತ್ಮ ಸಾಕ್ಷಿಯೇ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications