ದೂರು ಕೊಡದಿದ್ದರೆ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ: ಮುನಿರತ್ನ
ಬೆಂಗಳೂರು, ಆ. 25: ಬಿಜೆಪಿ ಸರ್ಕಾರದ ಕಮೀಷನ್ ದಂಧೆ ಬಗ್ಗೆ ಮಾತನಾಡಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ವಿರುದ್ಧ ಸಚಿವರು ಮುಗಿ ಬಿದ್ದಿದ್ದಾರೆ. ಕೆಂಪಣ್ಣ ಅವರ ಕಾನೂನು ಹೋರಾಟವನ್ನು ನಿಯಂತ್ರಿಸುವ ಬೆಳವಣಿಗೆ ಆಗುತ್ತಿವೆ.
ಕರ್ನಾಟಕ ರಾಜ್ಯ ಸರ್ಕಾರದ ಸಚಿವರು ಮತ್ತು ಶಾಸಕರ ಕಮೀಷನ್ ದಂಧೆಯ ಪರ್ಸೆಂಟೇಜ್ ಬಗ್ಗೆ ಪತ್ರಿಕಾಗೋಷ್ಠಿ ಕರೆದು ಕೆಂಪಣ್ಣ ಎರಡನೇ ಸಲ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಸರ್ಕಾರದ ಕಮೀಷನ್ ದಂಧೆಯ ಬಗ್ಗೆ ಬೇಸರ ತೋಡಿಕೊಂಡಿದ್ದರು. ಸಚಿವರ ಮತ್ತು ಶಾಸಕರ ಕಮೀಷನ್ ದಂಧೆ ಬಗ್ಗೆ ನ್ಯಾಯಾಂಗ ತನಿಖೆ ನಡೆದರೆ ದಾಖಲೆಗಳನ್ನು ಒದಗಿಸುವುದಾಗಿ ಕೆಂಪಣ್ಣ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಶಾಸಕರು ಮತ್ತು ಸಚಿವರು ಕೆಂಪಣ್ಣ ವಿರುದ್ಧ ಕಿಡಿ ಕಾರಿದ್ದಾರೆ.
ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ಧಮೆ: ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕೇವಲ ಮಾತನಾಡುವುದಲ್ಲ. ನಮ್ಮಗಳ ಕಮೀಷನ್ ದಂಧೆ ಬಗ್ಗೆ ಸಾಕ್ಷಿ ಇದ್ರೆ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ನೀಡಬೇಕು. ಇಲ್ಲವೇ ನ್ಯಾಯಾಲಯದಲ್ಲಿ ಕೇಸು ದಾಖಲಿಸಬೇಕು. ಸುಮ್ಮನೇ ಹೇಳಿಕೆ ನೀಡಿ ಮಾನ ಹಾನಿ ಮಾಡಿದರೆ ಸುಮ್ಮನೆ ಇರಲ್ಲ. ಮುಂದಿನ ಏಳು ದಿನದ ಒಳಗೆ ಕೆಂಪಣ್ಣ ಅರೋಪಿಸಿದಂತೆ ದೂರು ಕೊಡದೇ ಇದ್ದರೆ 50 ಕೋಟಿ ರೂ. ಮೊತ್ತಕ್ಕೆ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಸಚಿವ ಮುನಿರತ್ನ ಎಚ್ಚರಿಕೆ ನೀಡಿದ್ದಾರೆ.

ಕೆಂಪಣ್ಣ ಕಮೀಷನ್ ಸಿನಿಮಾ ಹಿಂದೆ ಯಾರಿದ್ದಾರೆ ಎಂಬುದು ಶೀಘ್ರ ಬಯಲು;ಸಿಟಿ ರವಿ: ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಸಿನಿಮಾದ ನಿರ್ದೇಶಕ, ನಿರ್ಮಾಪಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ. ಅವರ ಆರೋಪಗಳು ಟೂಲ್ ಕಿಟ್‍ನ ಮತ್ತೊಂದು ಭಾಗ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರೋಪ ಮಾಡಲಾಗುತ್ತಿದೆ. ದಾಖಲೆ ನೀಡಿ ಎಂದರೆ ನೀಡುವುದಿಲ್ಲ. ಆರೋಪ ಮಾಡುವುದು ಅತ್ಯಂತ ಸುಲಭ. ಕೆಂಪಣ್ಣಗೆ ಯಾರು, ಎಲ್ಲಿಂದ ಪ್ರಚೋದನೆ ನೀಡುತ್ತಿದ್ದಾರೆ ಎಂಬುದು ತಿಳಿಯಬೇಕಿದೆ. ಯಾವುದೇ ವಿಚಾರವನ್ನು ನ್ಯಾಯಾಂಗ ತನಿಖೆಗೆ ನೀಡಲು ಒಂದು ಮೂಲಭೂತ ಪ್ರಕರಣ ಇರಬೇಕು. ಒಂದು ನಿರ್ದಿಷ್ಟ ವಿಚಾರವೂ ಇರಬೇಕು. ಕೆಂಪಣ್ಣ ಆರೋಪದ ಹಿಂದಿನ ನಿರ್ದೇಶಕ ಯಾರೆಂಬುದು ಸದ್ಯದಲ್ಲೇ ಗೊತ್ತಾಗಲಿದೆ ಎಂದು ಅವರು ತಿಳಿಸಿದರು.
ಕೆಂಪಣ್ಣಗೆ ಹುಚ್ಚು ಹಿಡಿದಿದೆ: ಅಶ್ವತ್ಥ್ ನಾರಾಯಣ ಕಿಡಿ
ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುಖಾ ಸುಮ್ಮನೆ ಶಾಸಕರು ಮತ್ತು ಸಚಿವರ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಂಪಣ್ಣ ಅವರಿಗೆ ಹುಚ್ಚು ಹಿಡಿದಿದೆ. ಹೀಗಾಗಿ ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಮಾನಸಿಕ ಚಿಕಿತ್ಸೆ ಕೊಡಬೇಕಿದೆ. ಅವರ ಬಳಿ ದಾಖಲೆಗಳು ಇದ್ದರೆ ದೂರು ನೀಡಲಿ. ತನಿಖೆಯಾಗಲಿದೆ. ಯಾರು ಕಮೀಷನ್ ಕೊಡುತ್ತಿದ್ದಾರೆ. ಯಾರು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಎಚ್ಚರಿಕೆ ಕೊಟ್ಟಿದ್ದಾರೆ.

ನಳಿನ್ ಕುಮಾರ್ ಕಟೀಲ್ ಕಿಡಿ:
ಕೆಂಪಣ್ಣ ಆರೋಪದಲ್ಲಿ ಹುರಳಿಲ್ಲ. ಸುಮ್ಮನೆ ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ನವರ ಕೈವಾಡವಿದೆ. ಆರೋಪ ಮಾಡುವ ಬದಲಿಗೆ ದಾಖಲೆಗಳು ಇದ್ದರೆ ದೂರು ಕೊಡಬಹುದಲ್ಲವೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಅಬಕಾರಿ ಸಚಿವ ಕೆ.ಗೋಪಾಲಯ್ಯ ಟೀಕೆ
ಸಚಿವರಿಗೆ ಕಮಿಷನ್ ನೀಡಿಕೆ ವಿಚಾರದಲ್ಲಿ ಗುತ್ತಿಗೆದಾರ ಸಂಘದ ಕೆಂಪಣ್ಣ ಅವರು ನೀಡಿರುವ ಹೇಳಿಕೆ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಒತ್ತಾಯಿಸಿದ್ದಾರೆ. ವಿಧಾನಸೌದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೆಂಪಣ್ಣ ಅವರು ಒಂದಾದರೂ ದಾಖಲೆ ಇಟ್ಟುಕೊಂಡು ಮಾತನಾಡಲಿ. ವಿರೋಧ ಪಕ್ಷದವರ ಪ್ರಚೋದನೆಗೆ ಒಳಗಾಗಿ ಅವರು ಈ ರೀತಿಯ ಆರೋಪ ಮಾಡುವುದು ಸರಿಯಲ್ಲ ಎಂದರು.
ಪ್ರಚಾರದ ಗೀಳಿಗಾಗಿ ಈ ರೀತಿ ಮಾಡಬಾರದು. ಯಾವ ಗುತ್ತಿಗೆದಾರ ಕಮಿಷನ್ ನೀಡಿದ್ದಾನೆ ಮತ್ತು ಅವನಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು. ಆತ ಯಾವ ಕೆಲಸ ಮಾಡಿದ್ದಾನೆ. ಈ ಬಗ್ಗೆ ತನಿಖೆಯಾಗಬೇಕು ಎಂದರು.

ರಾಜಕಾರಣ ಮಾಡಲು ವಿರೋಧ ಪಕ್ಷದವರು ಕೆಂಪಣ್ಣ ಅವರನ್ನು ಬಳಕೆ ಮಾಡಿಕೊಳ್ಳುವುದನ್ನು ಬಿಡಬೇಕು. 224 ಶಾಸಕರ ಇದ್ದೇವೆ. ಅವರು ಯಾರಿಗೆಲ್ಲ ಕೊಟ್ಟಿದ್ದಾರೆ ಎನ್ನುವುದನ್ನು ಅವರು ಬಹಿರಂಗಪಡಿಸಬೇಕು ಇಲ್ಲಾ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.












Click it and Unblock the Notifications