ಹೊಸ ತಾಲೂಕುಗಳಿಗೆ ಮೂಲಸೌಕರ್ಯ ಕಲ್ಪಿಸಲು ಬದ್ಧ: ಸಚಿವ ಕೃಷ್ಣ ಬೈರೇಗೌಡ
ಕಲಬುರಗಿ: ಅಂದಹಾಗೆ ರಾಜ್ಯದಲ್ಲಿ ಹೊಸದಾಗಿ ರಚಿಸಲಾದ 63 ತಾಲೂಕುಗಳಲ್ಲಿ ತಾಲೂಕು ಮಟ್ಟದ ಕಚೇರಿ ಪೈಕಿ 20 ತಾಲೂಕುಗಳಲ್ಲಿ ಮೂಲಸೌಕರ್ಯ ಕಲ್ಪಿಸಿದ್ದು, ಹಾಗೇ ಉಳಿದ ತಾಲೂಕುಗಳಲ್ಲಿ ಹಂತ-ಹಂತವಾಗಿ ಮೂಲಸೌಕರ್ಯ ಕಲ್ಪಿಸಲಾಗುತ್ತೆ ಅಂತಾ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಕಲಬುರಗಿಯ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ನೂತನ ತಾಲೂಕುಗಳಲ್ಲಿ ಆದ್ಯತೆ ಮೇಲೆ ಮೂಲಸೌಕರ್ಯ ನೀಡಲಾಗುವುದು. ಇಂದಿನ ಪ್ರಗತಿ ಪರಿಶೀಲನೆಯಲ್ಲಿ ನೆರೆ ಹಾವಳಿ ಸೇರಿ ಕಂದಾಯ ಇಲಾಖೆ ಕಾರ್ಯಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದೇನೆ. ಹೊಸ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜನರಿಗೆ ತ್ವರಿತವಾಗಿ ನ್ಯಾಯ ಒದಗಿಸಲು ಅಧಿಕಾರಿಗಳು ಇರುವ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಕ್ಕೆ ಸಲಹೆ ನೀಡಿದ್ದಾರೆ ಎಂದರು.

ಹಣಕ್ಕೆ ಕೊರತೆ ಇಲ್ಲ ಎಂದ ಸಚಿವರು
ನೆರೆ ಹಾವಳಿ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಪಿ.ಡಿ.ಖಾತೆಗೆ 141 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ದೀರ್ಘಾವಧಿ ಯೋಜನೆಗಳ ಸಾಕಾರಕ್ಕಾಗಿ 39 ಕೋಟಿ ರೂ. ಹಾಗೂ ಇನ್ನಿತರ ಕೆಲಸಗಳಿಗೆ 13 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ನೆರೆ ಹಾವಳಿ ಪರಿಹಾರ ಸೇರಿ ಮಳೆ ಹಾನಿಯಿಂದ ತ್ವರಿತ ರೀತಿಯಲ್ಲಿ ಕೆಲಸ ನಿರ್ವಹಿಸಲು ಅನುದಾನ ಕೊರತೆಯಿಲ್ಲ ಎಂದು ಮಾಹಿತಿ ನೀಡಿದರು. ಅವಶ್ಯಕತೆ ಇದ್ದಲ್ಲಿ ಇನ್ನೂ ಅನುದಾನ ನಿಡಲಾಗುವುದು ಎಂದು ಇದೇ ವೇಳೆ ಸಚಿವರು ತಿಳಿಸಿದ್ದಾರೆ.
ಬಾಕಿ ಕೇಸ್‌ಗಳ ವಿಲೇವಾರಿಗೆ ಕ್ರಮ
ಕಲಬುರಗಿ ವಿಭಾಗದಲ್ಲಿ ಪಹಣಿ ತಿದ್ದುಪಡಿ, ವರ್ಗಾವಣೆ ಮತ್ತು ಕಂದಾಯ ನ್ಯಾಯಲಯಗಳ ಪ್ರಕರಣಗಳು ಸೇರಿದಂತೆ ಒಟ್ಟು 1.50 ಲಕ್ಷ ಕೇಸ್ ಬಾಕಿ ಇವೆ. ಇದರಲ್ಲಿ ಶೇ.75ರಷ್ಟು ಕ್ಲಿಷ್ಟಕರ ಅಲ್ಲದ ಪ್ರಕರಣಗಳಿದ್ದು, ಮುಂದಿನ 3 ತಿಂಗಳಲ್ಲಿ ಅಭಿಯಾನದ ರೀತಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ವಿವರಣೆ ನೀಡಿದ್ರು. ಇದೇ ವೇಳೆ ರಾಜ್ಯದಲ್ಲಿ ಹೊಸ ಸಬ್ ರಿಜಿಸ್ಟಾರ್ ಕಚೇರಿ ಸ್ಥಾಪನೆ ಸಂಬಂಧ ಪ್ರಸ್ತುತ ಇರುವ ಎಸ್.ಆರ್.ಓ. ಕಚೇರಿಯಲ್ಲಿ ದೈನಂದಿನ ವ್ಯವಹಾರಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. 2 ತಿಂಗಳಲ್ಲಿ ಮಾಹಿತಿ ಸಿಗಲಿದ್ದು, ತದನಂತರ ಹೆಚ್ಚಿನ ಕಾರ್ಯದೊತ್ತಡ ಇರುವ ತಾಲೂಕಿನಲ್ಲಿ ಹೊಸದಾಗಿ ಎಸ್.ಆರ್.ಓ. ಕಚೇರಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ನೋಂದಣಿ ಸೋರಿಕೆ ತಡೆಗೆ ಕ್ರಮ
ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಆಸ್ತಿಗಳ ಮಾರಾಟ ಹಾಗೂ ಒಪ್ಪಂದ ಪ್ರಕರಣದಲ್ಲಿ ನಿಗದಿತ ಮೌಲ್ಯಕ್ಕಿಂತ ಕಡಿಮೆ ಮೌಲ್ಯ ದಾಖಲಿಸಿ ಸರ್ಕಾರಕ್ಕೆ ಬರಬೇಕಾದ ಕಂದಾಯ ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪರಿಶೀಲನೆಗೆ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳ ತಂಡ ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿ ತಪಾಸಣೆ ಮಾಡಲಾಗುತ್ತದೆ. ಈ ಮೂಲಕ ಸರ್ಕಾರಕ್ಕೆ ಆಗುತ್ತಿರುವ ನಷ್ಠ ತಪ್ಪಿಸಲಾಗುವುದು ಎಂದರು.
ಮೂರು ಮಸೂದೆಗೆ ತಿದ್ದುಪಡಿ
ಕಂದಾಯ ವ್ಯವಸ್ಥೆಯಲ್ಲಿ ಮತ್ತಷ್ಟು ಸರಳೀಕರಣಗೊಳಿಸಲು ಕಳೆದ ಅಧಿವೇಶನದಲ್ಲಿ ಮೂರು ಮಸೂದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಸುಳ್ಳು ಮಾಹಿತಿ ನೀಡಿ, ವಂಚಿಸಿ ಅಥವಾ ಕೊಟ್ಟಿ ದಾಖಲೆ ಸೃಷ್ಟಿಸಿ ದುರಪಯೋಗದ ಮೂಲಕ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿರುವುದು ಕಂಡುಬಂದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಅಂತಹ ಪ್ರಕರಣಗಳು ಕೈಗೆತ್ತಿಕೊಂಡು 3 ತಿಂಗಳ ಒಳಗಾಗಿ ಸದರಿ ದಸ್ತಾವೇಜನ್ನು ರದ್ದುಪಡಿಸುವ ಅಧಿಕಾರ ಹೊಂದಿದ್ದಾರೆ ಎಂದರು.
ಮಹಾ ಯೋಜನೆ (ಮಾಸ್ಟರ್ ಪ್ಲ್ಯಾನ್) ಅನುಮೋದಿತ ಪ್ರದೇಶದಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಬಳಿ ಹೋಗದೆ ನೇರವಾಗಿ ನಗರ ಯೋಜನಾ ಕಚೇರಿ/ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲಿಸಿ ಪರಿವರ್ತನೆಗೆ ನಿಗದಿತ ಶುಲ್ಕ ಪಾವತಿ ಮಾಡಿ ಎನ್.ಎ. ಆಗಿ ಬದಲಾಯಿಸುವ ಹಾಗೂ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಜಮೀನುಗಳ ವರ್ಗಾವಣೆ ನಿಷೇಧ) ಕಾಯ್ದೆ-1978ಕ್ಕೆ ತಿದ್ದುಪಡಿ ತಂದು ಎಸ್.ಸಿ.-ಎಸ್.ಟಿ ಜನಾಂಗದವರ ಹಕ್ಕು ರಕ್ಷಿಸಲಾಗಿದೆ. ಇದು ಜನಪರ ಸರ್ಕಾರದ ಜನಪರ ನಿರ್ಧಾರಗಳಾಗಿವೆ. ಇದು ಜನಪರ ಆಡಳಿತಕ್ಕೆ ಸರ್ಕಾರಕ್ಕಿರುವ ಬದ್ಧತೆ ಪ್ರದರ್ಶಿಸುತ್ತದೆ ಎಂದು ಸಚಿವರು ಇದೇ ವೇಳೆ ಅಭಿಪ್ರಾಯಪಟ್ಟರು.












Click it and Unblock the Notifications