ಡಿಕೆಶಿ ಹೇಳಿದಂತೆ ಅಧಿಕಾರ ಹಂಚಿಕೆ ಒಪ್ಪಂದ ನಿಜ: ಸಚಿವ ಹೊಸ ಬಾಂಬ್
ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಅಧಿಕಾರ ಹಂಚಿಕೆಯ ವಿಚಾರವು ಬೂದಿ ಮುಚ್ಚಿದ ಕೆಂಡದಂತಿದೆ. ಸಂದರ್ಶನವೊಂದರಲ್ಲಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ಹಂಚಿಕೆಯ ಒಪ್ಪಂದವನ್ನು ಬಹಿರಂಗಪಡಿಸಿದ್ದರು. ಆದರೆ, ಇದನ್ನು ಸಿಎಂ ಸಿದ್ದರಾಮಯ್ಯ ಅವರು ಅಲ್ಲಗಳೆದಿದ್ದರು. ಬಳಿಕ ಈ ವಿಚಾರ ತಣ್ಣಗಾಗಿತ್ತು. ಈಗ ಕಾಂಗ್ರೆಸ್ ಸಚಿವ ಕೆ.ಎಚ್.ಮುನಿಯಪ್ಪ ಕೂಡ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೌದು, ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಸಂಬಂಧ ಒಪ್ಪಂದ ಆಗಿದೆ. ಈ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದು ಸರಿಯಾಗಿದೆ. ಈ ಬಗ್ಗೆ ನನ್ನನ್ನು ಬೇರೇ ಏನೂ ಕೇಳಬೇಡಿ ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.

ಸಿಎಂ ಹುದ್ದೆ ವಿಚಾರವಾಗಿ ಈಗಾಗಲೇ ನಮ್ಮ ನಡುವೆ ಒಪ್ಪಂದವಾಗಿದೆ. ಅದನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ. ಸಮಯ ಬಂದಾಗ ಹೇಳುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಬಳಿಕ ಈ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಕೋಲಾಹಲವೇ ಎದ್ದಿತ್ತು. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಖಡಕ್ ಆಗಿ ಹೇಳಿದ್ದರು.
ಈ ಹೇಳಿಕೆಯು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ನಡುವೆ ಭಾರಿ ಗೊಂದಲ ಮೂಡಿಸಿತ್ತು.ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸಂಬಂಧ ನಮ್ಮ ನಡುವೆ ಒಪ್ಪಂದವಾಗಿರುವುದು ಸತ್ಯ. ಆದರೆ ಅದರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸದ್ಯಕ್ಕೆ ಖಾಲಿಯಿಲ್ಲ ಎಂದು ಡಿ.ಕೆ.ಶಿವಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಮುನ್ನೆಲೆಗೆ ಬಂದಿತ್ತು.
ಸಿಎಂ ಹುದ್ದೆ ಬಗ್ಗೆ ಸದ್ಯಕ್ಕೆ ಚರ್ಚೆ ಬೇಡ. ನಾನು ಈಗ ಡಿಸಿಎಂ ಆಗಿ ಕೆಲಸದಲ್ಲಿ ತೊಡಗಿದ್ದು, ನಮ್ಮ ಸಿದ್ದರಾಮಯ್ಯನವ್ರು ಮುಖ್ಯಮಂತ್ರಿ ಆಗಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಇಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದ್ರೆ ಅಧಿಕಾರ ಹಂಚಿಕೆ ಸಂಬಂಧ ನಮ್ಮಿಬ್ಬರ ನಡುವೆ ಒಪ್ಪಂದ ಆಗಿರುವುದು ನಿಜ. ಅದನ್ನು ಸಮಯ ಬಂದಾಗ ಹೇಳುತ್ತೇನೆ ಎಂದಿದ್ದರು.
ಹೈಕಮಾಂಡ್‌ಗೆ ನಾನು ಬ್ಲ್ಯಾಕ್‌ಮೇಲ್ ಮಾಡಿಲ್ಲ, ಇದೇ ನನ್ನ ವೀಕ್‌ನೆಸ್. ಕಾಂಗ್ರೆಸ್ ಪಕ್ಷದ ನಿರ್ಧಾರಕ್ಕೆ ನಾನು ಸದಾ ಬದ್ಧನಾಗಿರುತ್ತೇನೆ, ಹೈಕಮಾಂಡ್‌ಗೆ ವಿರೋಧವಾಗಿ ನಾನು ನಡೆದುಕೊಳ್ಳುವುದಿಲ್ಲ. ಗಾಂಧಿ ಕುಟುಂಬದ ಮೇಲೆ ನನಗೆ ಬಹಳ ಪ್ರೀತಿ ಇದ್ದು, ಅವರಿಗೆ ನಾನು ನ್ಯಾಯಯುತವಾಗಿದ್ದೇನೆ. ಇದಕ್ಕೆ ಮುಂದೊಂದು ದಿನ ಫಲ ಸಿಗುತ್ತೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು.
ಬಳಿಕ ಸಿಎಂ ಸಿದ್ದರಾಮಯ್ಯ ಅವರು ಈ ಹೇಳಿಕೆಯನ್ನು ನಿರಾಕರಿಸಿದ್ದರು. ಇನ್ನು ನಿನ್ನೆ ನಡೆದ ಹಾಸನ ಸಮಾವೇಶದಲ್ಲಿ ಮಾತನಾಡಿದ್ದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇದು ಈ ಕನಕಪುರದ ಬಂಡೆಯ ಇತಿಹಾಸ, ನಾನು ಕೆಲಸ ಮಾಡುವ ಕಡೆ ಪ್ರಾಮಾಣಿಕವಾಗಿ ಇರುವುದು ನನ್ನ ಕರ್ತವ್ಯ ಎಂದು ಯೂಟರ್ನ್ ಹೊಡೆದಿದ್ದರು. ಈಗ ಸಚಿವ ಮುನಿಯಪ್ಪ ಅವರ ಹೇಳಿಕೆ ಸಂಚಲನ ಮೂಡಿಸಿದೆ.












Click it and Unblock the Notifications