ಮಣಿಪುರದ ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು, ಶಿಕ್ಷಣ ವೆಚ್ಚ ಭರಿಸುವ ಭರವಸೆ ನೀಡಿದ ಜಮೀರ್ ಅಹಮದ್ ಖಾನ್
ಬೆಂಗಳೂರು, ಆಗಸ್ಟ್ 1: ಕರ್ನಾಟಕ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಮಂಗಳವಾರ ತಮ್ಮ ಜನ್ಮದಿನವನ್ನು ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯ ನಂತರ ಆಶ್ರಯ ಪಡೆದಿರುವ ಮಣಿಪುರದ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡು ಸರಳತೆ ಮೆರೆದಿದ್ದಾರೆ.
ಜಮೀರ್ ಅಹ್ಮದ್ ಖಾನ್ ಅವರ ವಿಧಾನಸಭಾ ಕ್ಷೇತ್ರ ಚಾಮರಾಜಪೇಟೆಯಲ್ಲಿರುವ ಸೇಂಟ್ ತೆರೇಸಾ ಶಿಕ್ಷಣ ಸಂಸ್ಥೆಗಳಲ್ಲಿ ಮಣಿಪುರದ 29 ವಿದ್ಯಾರ್ಥಿನಿಯರು ಆಶ್ರಯ ಪಡೆದಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಣಿಪುರದ ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡ ಜಮೀರ್ ಅವರು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಯೋಗಕ್ಷೇಮವನ್ನು ಭರಿಸುವುದಾಗಿ ಸಚಿವರು ಘೋಷಿಸಿದರು. ಈ ಸಂದರ್ಭದಲ್ಲಿ ಅವರು 2 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದರು. ಬಳಿಕ ಜಮೀರ್ ಅಹಮದ್ ಖಾನ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಮಣಿಪುರದ ಚಾಲ್ತಿಯಲ್ಲಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸಿದರು.
ಈ ವೇಳೆ ವಿದ್ಯಾರ್ಥಿಗಳು ತಮ್ಮ ತವರು ರಾಜ್ಯದಲ್ಲಿನ ಅಪಾಯಕಾರಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಬಂದಿರುವುದಾಗಿ ವಿವರಿಸಿದರು ಮತ್ತು ಆಶ್ರಯ ನೀಡಿದ ಸೇಂಟ್ ತೆರೇಸಾ ಶಿಕ್ಷಣ ಸಂಸ್ಥೆಗಳಿಗೆ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಕನಿಷ್ಠ ಏಳು ವರ್ಷಗಳ ಕಾಲ ಇಲ್ಲಿಯೇ ಇರಬೇಕಾಗುತ್ತದೆ ಹೀಗಾಗಿ ಇಡೀ ಅವಧಿಗೆ ಶಿಕ್ಷಣದ ವೆಚ್ಚ ಮತ್ತು ಅವರ ಕಲ್ಯಾಣವನ್ನು ಭರಿಸುವುದಾಗಿ ಸಚಿವರು ಭರವಸೆ ನೀಡಿದರು.
ವಿದ್ಯಾರ್ಥಿಗಳು ಇಲ್ಲಿ ಅತ್ಯಂತ ಸುರಕ್ಷಿತವಾಗಿದ್ದು, ಅವರಿಗೆ ಏನು ಬೇಕಾದರೂ ವ್ಯವಸ್ಥೆ ಮಾಡುವುದಾಗಿ ಸಚಿವರು ಹೇಳಿದರು. ಮಣಿಪುರದಿಂದ ಬೆಂಗಳೂರಿಗೆ ಸುಮಾರು 200 ವಿದ್ಯಾರ್ಥಿಗಳು ಬಂದಿದ್ದು, ಅದರಲ್ಲಿ 29 ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ ಮತ್ತು ಇತರರಿಗೆ ಇತರ ಸಂಸ್ಥೆಗಳಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications