ಅಕ್ಷರ ದಾಸೋಹದ ಹೊಣೆ ಬೋಧಕೇತರ ಸಿಬ್ಬಂದಿಗೆ, ವಿವರಗಳು
ಬೆಂಗಳೂರು, ಅಕ್ಟೋಬರ್ 10; ತಾಲ್ಲೂಕು ಅಕ್ಷರ ದಾಸೋಹ ಅಧಿಕಾರಿಗಳ ಹುದ್ದೆಗೆ ಶಿಕ್ಷಣ ಇಲಾಖೆಯ ಬೋಧಕೇತರ ಪತ್ರಾಂಕಿತ ವ್ಯವಸ್ಥಾಪಕರ ಸಿಬ್ಬಂದಿ ನೇಮಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಬೋಧಕ ಸಿಬ್ಬಂದಿ ನೇಮಕ ಮಾಡಿದರೆ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಲಿದೆ ಎಂದು ಚರ್ಚೆಗಳು ನಡೆದಿತ್ತು.
ಡಾ. ಆಕಾಶ್ ಎಸ್. ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ಈ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಸರ್ಕಾರದ ಪತ್ರ ದಿನಾಂಕ 11/07/2022 ಉಲ್ಲೇಖ ಮಾಡಿದ್ದಾರೆ. ತಾಲೂಕಾ ಅಕ್ಷರ ದಾಸೋಹ ಅಧಿಕಾರಿಗಳ ಹುದ್ದೆಗೆ ಶಿಕ್ಷಣ ಇಲಾಖೆಯ ಬೋಧಕೇತರ ಪತ್ರಾಂಕಿತ ವ್ಯವಸ್ಥಾಪಕರ ಸಿಬ್ಬಂದಿ ನೇಮಿಸುವ ಕುರಿತು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ 13/10/2011ರಂದು ನಡೆದ ಸಭಾ ನಡಾವಳಿಗಳ ಅನ್ವಯ ಮಧ್ಯಾಹ್ನ ಉಪಹಾರ ಯೋಜನೆಯ ಮೇಲ್ವಿಚಾರಣೆ ಬಗ್ಗೆ ಬೋಧಕ ಸಿಬ್ಬಂದಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮಕ್ಕಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿದ್ದು, ಈ ಹುದ್ದೆಯನ್ನು ಬೋಧಕೇತರ ಸಿಬ್ಬಂದಿಗೆ ವಹಿಸುವ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು.
ಅಕ್ಷರ ದಾಸೋಹ ಕೆಲಸವನ್ನು ಪ್ರತ್ಯೇಕವಾಗಿ ಬೋಧಕೇತರ ಸಿಬ್ಬಂದಿಗೆ ವಹಿಸಲು ಶಿಕ್ಷಣ ಸಚಿವರು ತಿಳಿಸಿರುವುದರಿಂದ, ಸರ್ಕಾರವು ಈ ಕುರಿತು ವರದಿ ಸಲ್ಲಿಸಲು ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಇವರಿಗೆ ತಿಳಿಸಿತ್ತು. ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ಮಧ್ಯಾಹ್ನ ಉಪಹಾರ ಯೋಜನೆಗೆ ಸಂಬಂಧಿಸಿದಂತೆ ಪ್ರತಿ ತಾಲೂಕಿನಲ್ಲಿ ಗ್ರೂಪ್-ಬಿ ವೃಂದದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಈ ಹುದ್ದೆಗಳಿಗೆ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಬದಲಾಗಿ ಗ್ರೂಪ್-ಬಿ ವೃಂದದ ಬೋಧಕೇತರರನ್ನು ನೇಮಿಸಿದರೆ ಬೋಧಕ ವೃಂದದ ಅಧಿಕಾರಿಗಳ ಸೇವೆಯನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಲ್ಲದೇ ಇಲಾಖೆಯಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದಂತಾಗುತ್ತದೆ ಎಂದು ಹೇಳಿದ್ದರು.
ಅಲ್ಲದೇ ಬೋಧಕೇತರ ವೃಂದದ ಅಧಿಕಾರಿಗಳ ಸೇವೆಯನ್ನು ಆಡಳಿತಾತ್ಮಕ ಕಾರ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಅವರಿಗೆ ಜವಾಬ್ದಾರಿಯನ್ನು ನಿಗದಿಪಡಿಸಬಹುದಾಗಿದೆ. ಈ ಕಾರ್ಯವು ಆಡಳಿತಾತ್ಮಕ ಕಾರ್ಯವಾಗಿದ್ದು, ಈ ಹುದ್ದೆಗಳಿಗೆ ಗ್ರೂಪ್-ಬಿ ವೃಂದದ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರನ್ನು ನೇಮಿಸಿದರೇ ಸರ್ಕಾರಕ್ಕೆ ಯಾವುದೇ ಹಣಕಾಸಿನ ಹೊರೆ ಬೀಳುವುದಿಲ್ಲವೆಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.
ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ಇವರ ಕರ್ತವ್ಯಗಳು
ಶಾಲಾ ಶಿಕ್ಷಣ ಇಲಾಖೆಯಲ್ಲಿ ಸೃಜಿಸಲಾದ ಸಹಾಯಕ ನಿರ್ದೇಶಕರ ಎಲ್ಲಾ ವೃಂದದ ಹುದ್ದೆಗಳಲ್ಲಿ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರು ಕರ್ತವ್ಯ ನಿರ್ವಹಿಸುತ್ತಿದ್ದು, ಆಡಳಿತಾತ್ಮಕ ಕ್ರಮಗಳನ್ನು ಒಳಗೊಂಡ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಮಾತ್ರ ಬೋಧಕ ವೃಂದದ ಅಧಿಕಾರಿಗಳನ್ನು ನೇಮಸಲಾಗಿರುತ್ತದೆ. ಈಗ ಆದೇಶದಲ್ಲಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಯೋಜನೆ ಇವರ ಕರ್ತವ್ಯಗಳನ್ನು ಸಹ ವಿವರಿಸಲಾಗಿದೆ.
* ತಾಲೂಕಾ ವ್ಯಾಪ್ತಿಯಲ್ಲಿ ಬರುವಂತಹ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ (ಸರ್ಕಾರಿ ಮತ್ತು ಅನುದಾನಿತ) ಮಕ್ಕಳ ವಿವರಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆಯುವುದು.
* ಮಧ್ಯಾಹ್ನ ಉಪಹಾರ ಯೋಜನೆ ಪೂರೈಕೆಗೆ ಭಾರತ ನಿಗಮ/ ಭಾರತೀಯ ಆಹಾರ ನಿಗಮದಿಂದ ತಾಲೂಕಾ ಗೋದಾಮಿಗಳಿಗೆ ಎತ್ತುವಳಿಯಾಗದಿದ್ದಲ್ಲಿ ಜಿಲ್ಲಾಧಿಕಾರಿಗಳು ಅವಗಾಹನೆಗೆ ತಂದು ಸೂಕ್ತ ಕ್ರಮ ಕೈಗೊಳ್ಳುವುದು.
* ಬೇಡಿಕೆಗೆ ಅನುಗುಣವಾಗಿ ಎಲ್ಲಾ ಅಡುಗೆ ಕೇಂದ್ರಗಳಿಗೆ ಆಹಾರ ಧಾನ್ಯ ಸರಬರಾಜು ಮಾಡುವುದು.
* ಅಡುಗೆ ಅನಿಲ್ ಸರಬರಾಜು ನಿರ್ವಹಣೆಯನ್ನು ತಾಲೂಕಾ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದು.
* ಅಡುಗೆ ಸಿಬ್ಬಂದಿಯವರ ನೇಮಕಾತಿಯನ್ನು ಮಾರ್ಗಸೂಚಿಯಲ್ಲಿ ತಿಳಿಸಿರುವಂತೆ
ಪೂರ್ಣಗೊಳಿಸುವುದು.
* ಅಡುಗೆ ಸಿಬ್ಬಂದಿ ಸಂಭಾವನೆ ಮತ್ತು ಸಾದಿಲ್ವಾರು ಮೊತ್ತವನ್ನು ಸಕಾಲದಲ್ಲಿ ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವುದು.
* ಮಧ್ಯಾಹ್ನ ಉಪಹಾರ ಯೋಜನೆಗೆ ಸರಬರಾಜಾದ ಆಹಾರ ಧಾನ್ಯ ಸರಬರಾಜು ಆಗಿದ್ದಲ್ಲಿ ಅದನ್ನು ಬದಲಾಯಿಸಲು ಸೂಕ್ತ ಕ್ರಮಕೈಗೊಳ್ಳುವುದು.
* ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಶಾಲಾವಾರು ಬೇಡಿಕೆಗಳನ್ನು 1ನೇ ತಾರೀಖಿನ ಒಳಗೆ ಪಡೆದು ಆಯಾ ತಿಂಗಳಿನ 5ನೇ ತಾರೀಖಿನ ಒಳಗಾಗಿ ಆ ತಿಂಗಳಿಗೆ ಬೇಕಾಗುವ ಆಹಾರ ಸಾಮಗ್ರಿಗಳನ್ನು ಅಡುಗೆ ಕೇಂದ್ರಗಳಿಗೆ ಸರಬರಾಜು ಮಾಡಲು ವ್ಯವಸ್ಥೆ ಮಾಡುವುದು.
ಈಗಾಗಲೇ ಸಹಾಯಕ ನಿರ್ದೇಶಕರು, ಮಧ್ಯಾಹ್ನ ಉಪಹಾರ ಯೋಜನೆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೋಧಕ ವೃಂದದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ವೃಂದದ ಗ್ರೂಪ-ಬಿ ಅಧಿಕಾರಿಗಳಿಗೆ ನಿಗದಿಪಡಿಸಿದ ಕರ್ತವ್ಯಗಳ ಜವಾಬ್ದಾರಿಗಳಲ್ಲಿ, ಯಾವುದೇ ತರಹದ ಶೈಕ್ಷಣಿಕ ಚಟುವಟಿಕೆಗಳ ಮೇಲುಸ್ತುವಾರಿ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ವಹಿಸಬೇಕಾದ ಅಂಶಗಳು/ ಜವಾಬ್ದಾರಿಗಳು ಇರುವುದಿಲ್ಲ. ಪತ್ರಾಂಕಿತ ವ್ಯವಸ್ಥಾಪಕರಿಗೆ ಕಛೇರಿ ಆಡಳಿತ ಬಗ್ಗೆ ಹೆಚ್ಚಿನ ಅನುಭವ ಇರುವುದರಿಂದ ಎಲ್ಲಾ ತರಹದ ಆಡಳಿತಾತ್ಮಕ ಕಾರ್ಯಗಳು ಹಾಗೂ ಲೆಕ್ಕ ಪತ್ರ ನಿರ್ವಹಣೆ ಮಾಡಲು ಸಮರ್ಥರಾಗಿರುತ್ತಾರೆ.
ತಾಲೂಕಾ ಪಂಚಾಯತಗಳಲ್ಲಿ ಇರುವಂತಹ ಸಹಾಯಕ ಹುದ್ದೆಗಳಲ್ಲಿ ಶಾಲಾ ಶಿಕ್ಷಣ ಇಲಾಖೆ ಮುಖ್ಯ ಶಿಕ್ಷಕರನ್ನು ನಿಯೋಜಿಸಲಾಗಿದ್ದು, ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸಬೇಕಾಗಿರುವುದರಿಂದ ಅನ್ಯ ಇಲಾಖೆಯಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತಾಗಲು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಹಿತದೃಷ್ಠಿಯಿಂದ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರು/ ಸಹಾಯಕ ನಿರ್ದೇಶಕರನ್ನು ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡುವುದು ಅತ್ಯಾವಶ್ಯಕವಾಗಿರುತ್ತದೆ ಎಂದು ಹೇಳಿದೆ.
ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಪತ್ರಾಂಕಿತ ವ್ಯವಸ್ಥಾಪಕರು/ ಸಹಾಯಕ ನಿರ್ದೇಶಕರನ್ನು ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿದ್ದಲ್ಲಿ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ. ಅಲ್ಲದೇ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಯ ಪ್ರಭಾರವನ್ನು ವಿಷಯ ಶಿಕ್ಷಕರು ಪಡೆದ ನಂತರ ಅವರಿಗೆ ನಿಯಮಾನುಸಾರ ಶೇ. 15 ರಷ್ಟು ಪ್ರಭಾರ ಭತ್ಯೆಯನ್ನು ಸುಮಾರು ವರ್ಷಗಳಿಂದ ಪ್ರತಿ ತಿಂಗಳು ಇಲಾಖೆಯು ನೀಡುತ್ತಿರುವುದರಿಂದ, ಸರ್ಕಾರಕ್ಕೆ ಆರ್ಥಿಕ ಹೊರೆ ಉಂಟಾಗುತ್ತಿದೆ. ಅಲ್ಲದೇ ಈ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸುಮಾರು ವರ್ಷಗಳಿಂದ ನೇಮಕಾತಿ ಮಾಡದೇ ಖಾಲಿ ಉಳಿಯುತ್ತಿದ್ದು ಈ ಹುದ್ದೆಗಳನ್ನು ನೇಮಕಾತಿ ಮಾಡಿದ್ದಲ್ಲಿ ಸರ್ಕಾರಕ್ಕೆ ಅತಿ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತದೆ.
ಪ್ರಸ್ತುತ ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರು ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಪ್ರೌಢ ಶಾಲಾ ಮುಖ್ಯ ಶಿಕ್ಷಕರನ್ನು ಬಿಡುಗಡೆಗೊಳಿಸಿದ್ದಲ್ಲಿ, ವಿದ್ಯಾರ್ಥಿಗಳ ಶೈಕ್ಷಣಿಕ ಚುಟವಟಿಗಳಲ್ಲಿ ಶಿಕ್ಷಕರು ಸಂಪೂರ್ಣವಾಗಿ ತೊಡಗಿಕೊಳ್ಳಲು ಹಾಗೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಅನುಕೂಲವಾಗಿ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತದೆ ಎಂದು ವಿವರಣೆ ನೀಡಲಾಗಿದೆ. ಮುಖ್ಯ ಶಿಕ್ಷಕರ ಹುದ್ದೆಯಲ್ಲಿನ ಪ್ರಭಾರ ಭತ್ಯೆ ನೀಡುವುದಾಗಲಿ ಹಾಗೂ ಮುಖ್ಯ ಶಿಕ್ಷಕರ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವ ಪ್ರಮಯವೇ ಉದ್ಭವವಾಗುವುದಿಲ್ಲ. ಇದರಿಂದ ಸರ್ಕಾರಕ್ಕೆ ಆಗುವ ಆರ್ಥಿಕ ನಷ್ಟವನ್ನು ತಪ್ಪಿಸಬಹುದಾಗಿದೆ.
ಪ್ರಸ್ತುತ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕರ ವೇತನ ಶ್ರೇಣಿಗಿಂತ ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರ ಹುದ್ದೆಯ ವೇತನ ಶ್ರೇಣಿಯು ಕಡಿಮೆಯಾಗಿದ್ದು, ಇವರನ್ನು ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ನೇಮಕ ಮಾಡಿದರೆ ಸರ್ಕಾರಕ್ಕೆ ಅತೀ ಹೆಚ್ಚಿನ ಆರ್ಥಿಕ ನಷ್ಟವನ್ನು ಉಂಟಾಗುವದನ್ನು ತಡೆಬಹುದಾಗಿದೆ.
ಹೈಕೋರ್ಟ್ ತೀರ್ಪಿನಂತೆ ಬೋಧಕ ವೃಂದದ ಅಧಿಕಾರಿಗಳನ್ನು ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ, ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕರ ಹುದ್ದೆಯಿಂದ ಬಿಡುಗಡೆಗೊಳಿಸಿ ಈ ಹುದ್ದೆಗಳಿಗೆ ಬೋಧಕೇತರ ವೃಂದದ ಪತ್ರಾಂಕಿತ ವ್ಯವಸ್ಥಾಪಕರು/ ಸಹಾಯಕ ನಿರ್ದೇಶಕರನ್ನು ನೇಮಕ ಮಾಡುವುದು ಸೂಕ್ತವಾಗಿರುತ್ತದೆ ಎಂಬ ಅಭಿಪ್ರಾಯವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.












Click it and Unblock the Notifications