ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕೇಸ್‌ಗಳು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ- ಕೇಂದ್ರ ಸಚಿವ ಕುಮಾರಸ್ವಾಮಿ
ಮೈಸೂರು, ಜನವರಿ 30: ಮೈಕ್ರೋ ಫೈನಾನ್ಸ್ ಪ್ರಕರಣಗಳು ಹಾಗೂ ಸಂಭವಿಸುತ್ತಿರುವ ಸಾವುಗಳು ಸರ್ಕಾರಿ ಕಾರ್ಯಕ್ರಮಗಳ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಪ್ರಕರಣಗಳು ಸೃಷ್ಟಿಸುತ್ತಿರುವ ತಲ್ಲಣಗಳು ಒಂದೆರಡಲ್ಲ. ಅನೇಕ ಸಾವು ನೋವುಗಳು ಆಗುತ್ತಿವೆ. ಸರ್ಕಾರಗಳಿಂದ ಅನುಷ್ಠಾನ ಆಗುತ್ತಿರುವ ಕಾರ್ಯಕ್ರಮಗಳ ವೈಫಲ್ಯಕ್ಕೆ ಇವೆಲ್ಲಾ ಸಾಕ್ಷಿಯಾಗಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುತ್ತಿಲ್ಲ. ಕಾರ್ಯಕ್ರಮಗಳು ಜನರಿಗೆ ಯಾಕೆ ತಲುಪುತ್ತಿಲ್ಲ ಎನ್ನುವ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಭಿವೃದ್ಧಿಶೀಲ ರಾಜ್ಯ ಕರ್ನಾಟಕದಲ್ಲಿ ಘಟಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಬಂಧಿಸಿದ ಪ್ರಕರಣಗಳು ಯಾರಿಗೂ ಶೋಭೆ ತರುವಂತವು ಅಲ್ಲ. ಇದಕ್ಕೆ ಪರಿಹಾರ ಏನು? ಎಂಬ ಬಗ್ಗೆ ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.

ದೇಶದಲ್ಲಿ ಹಣವಿದೆ. ಅದನ್ನು ಹೇಗೆ ಬಳಕೆ ಮಾಡುತ್ತಿದ್ದೇವೆ ಎನ್ನುವುದು ಮುಖ್ಯ. ನಮ್ಮ ಕಾರ್ಯಕ್ರಮಗಳು ಎಲ್ಲಿ ವಿಫಲವಾಗುತ್ತಿವೆ. ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಬಗ್ಗೆ ಓರೆಗೆ ಹಚ್ಚಬೇಕಿದೆ. ಆನ್ಲೈನ್ ಲಾಟರಿ, ಗೇಮ್‌ಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಕುಟುಂಬಗಳು ನಾಶವಾಗುತ್ತಿವೆ. ಇಂತಹ ಪಿಡುಗುಗಳಿಗೆ ಕಡಿವಾಣ ಹಾಕದೇ ಇದ್ದರೆ ಇದೇ ಅತಿದೊಡ್ಡ ಸಮಸ್ಯೆಯಾಗಿ ಮುಂದೆ ಸಮಾಜವನ್ನು ಕಾಡಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನು ದೇಶದಲ್ಲಿ ಕೃಷಿ ಮತ್ತು ರೈತರ ಬಗ್ಗೆ ಮಾತನಾಡಿದ ಅವರು, ಕೃಷಿ ವೃತ್ತಿಯನ್ನು ಮೂರನೇ ದರ್ಜೆ ವೃತ್ತಿ ಎನ್ನುವ ಮನಸ್ಸು ಕೆಲವರಲ್ಲಿದೆ. ಅಂತಹ ಮನೋಭಾವ ಹೋಗಬೇಕು. ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ತಾತ್ಸಾರ ಇದೆ. ನಿರ್ಲಕ್ಷ್ಯ ಮಾಡುತ್ತಿದ್ದೇವೆ. ನನ್ನ ಪ್ರಕಾರ ರೈತನ ಪ್ರಗತಿಯೇ ದೇಶದ ಪ್ರಗತಿ. ಯಾವುದೇ ಕ್ಷೇತ್ರದಲ್ಲಿ ಎಷ್ಟೋ ಪ್ರಗತಿ ಹೊಂದಿದ್ದೇವೆ, ಎನ್ನುವುದಕ್ಕಿಂತ ರೈತನ ಬದುಕು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎನ್ನುವುದು ಮುಖ್ಯ ಎಂದರು.

ರೈತನ ಬದುಕು ಸರಿ ಮಾಡದೆ ಇದ್ದರೆ ನಾವು ಯಾವುದೇ ಕ್ಷೇತ್ರದಲ್ಲಿ ಎಷ್ಟೇ ಬೆಳೆದು ಎಷ್ಟೇ ಪೈಪೋಟಿ ಕೊಟ್ಟರೂ ಉಪಯೋಗವಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಆಧುನಿಕ ಕೃಷಿಯಲ್ಲಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಇಲ್ಲಿ ನಡೆಯುತ್ತಿರುವ ಕೃಷಿ ವಿಚಾರ ಸಂಕಿರಣ ಅರ್ಥಪೂರ್ಣ. ಸುತ್ತೂರು ಜಾತ್ರಾ ಮಹೋತ್ಸವ ಕಂಡು ನನಗೆ ಬಹಳ ಸಂತೋಷವಾಗಿದೆ. ಗ್ರಾಮೀಣ ಬದುಕು ಎಷ್ಟು ಅರ್ಥ ಗರ್ಭಿತ ಎನ್ನುವುದನ್ನು ಈ ಜಾತ್ರಾ ಮಹೋತ್ಸವ ನೋಡಿದರೆ ತಿಳಿಯುತ್ತದೆ. ಇಂಥ ದೃಶ್ಯಗಳನ್ನು ಇನ್ನೂ ನೋಡುತ್ತಿದ್ದೇವೆ, ಅದೇ ನಮ್ಮ ಭಾಗ್ಯ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದರು.
ಅಭಿವೃದ್ಧಿ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಮೂರನೇ ಜಾಗತಿಕ ಆರ್ಥಿಕ ಶಕ್ತಿಯಾಗುವ ಹೊಸ್ತಿಲಲ್ಲಿ ಇದೆ ಭಾರತ. ಆದರೆ ಮನುಷ್ಯ ಸಂಬಂಧಗಳು, ಬಾಂಧವ್ಯ ಸಂಬಂಧಗಳು ನಶಿಸಿ ಹೋಗುತ್ತಿವೆ. ಪ್ರತಿ ದಿನ ಬೆಳಗ್ಗೆ ಬರುತ್ತಿರುವ ಸುದ್ದಿಗಳನ್ನು ನೋಡಿದರೆ ದುಃಖವಾಗುತ್ತದೆ ಎಂದು ಕುಮಾರಸ್ವಾಮಿ ಕಳವಳ ವ್ಯಕ್ತಪಡಿಸಿದರು.












Click it and Unblock the Notifications