ಗುಡ್ ನ್ಯೂಸ್: 20649 ಕೋಟಿ ವೆಚ್ಚ, ಮಾದಾವರದಿಂದ ತುಮಕೂರಿನವರೆಗೆ ಮೆಟ್ರೋ: ಮಹತ್ವದ ಮಾಹಿತಿ, ವಿವರ ತಿಳಿಯಿರಿ
ತುಮಕೂರು, ಸೆಪ್ಟೆಂಬರ್ 30: ರಾಜ್ಯ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಕಡಿಮೆಗೊಳಿಸಿ, ತ್ವರಿತ ಓಡಾಟಕ್ಕೆ ಸಹಕಾರಿಯಾಗಿರುವ ನಮ್ಮ ಮೆಟ್ರೋ, ಇನ್ನು ಮುಂದೆ ತುಮಕೂರುವರೆಗೂ ಓಡಲಿದೆ. ಇದಕ್ಕಾಗಿ ಡಿಪಿಆರ್ ಭರ್ಜರಿ ಸಿದ್ದತೆಯನ್ನ ನಡೆಸಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಬಹು ನಿರೀಕ್ಷಿತ ತುಮಕೂರು ಮೆಟ್ರೊ ಮತ್ತಷ್ಟು ಹತ್ತಿರವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2024-25ನೇ ಸಾಲಿನ ಆಯವ್ಯಯದಲ್ಲಿ ಮಾದಾವರದಿಂದ ತುಮಕೂರಿನವರೆಗೆ ಮೆಟ್ರೊ ರೈಲು ಮಾರ್ಗ ವಿಸ್ತರಿಸುವ ಸಾಧ್ಯತೆಗಳ ಅಧ್ಯಯನ ಮಾಡುವುದಾಗಿ ಮುಖ್ಯಮಂತ್ರಿ ಅವರು ಘೋಷಣೆ ಮಾಡಿದ್ದರು. ಈ ಕಾರ್ಯವನ್ನು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್) ಕ್ಕೆ ಅಧ್ಯಯನ ಮಾಡಲು ಆದೇಶಿಸಲಾಗಿತ್ತು. ಬಿಎಂಆರ್‌ಸಿಎಲ್ 3 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಹ್ವಾನಿಸಿ ಹೈದರಾಬಾದ್ ಮೂಲದ ಕಂಪನಿಗೆ ಕಾರ್ಯಸಾಧು ಅಧ್ಯಯನ ಕಾರ್ಯ ನೀಡಿತ್ತು. ಇದೀಗ ಕಂಪನಿಯು ವರದಿ ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಿಳಿಸಿದರು.

ಪ್ರಸ್ತುತ ಸರ್ಕಾರ ವರದಿಯನ್ನು ಒಪ್ಪಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ (PPP) ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್ ರವರಿಗೆ ಸೂಚಿಸಿದೆ. ಮೊದಲ ಹಂತದಲ್ಲಿ ರೂ. 20649 ಕೋಟಿ ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಚಿಂತಿಸಲಾಗಿದೆ ಹಾಗೂ ಈಗಾಗಲೇ ಖಾಸಗಿ ಕಂಪನಿಗಳು ಆಸಕ್ತಿ ತೋರಿವೆ ಎಂದು ಸಚಿವರು ವಿವರಿಸಿದರು.
ಈ ಕುರಿತು ಈಗಾಗಲೇ ಸರ್ಕಾರ ಸೆಪ್ಟೆಂಬರ್ 25 ರಂದು ಆದೇಶ ಹೊರಡಿಸಿದ್ದು, ಮಾದಾವರದಿಂದ ತುಮಕೂರಿನವರೆಗೆ 59.6 ಕಿ.ಮೀ. ಮೆಟ್ರೊ ರೈಲು ವ್ಯವಸ್ಥೆಯನ್ನು ಖಾಸಗಿ ಸಾರ್ವಜನಿಕ ಸಹಭಾಗಿತವದಲ್ಲಿ ಅನುಷ್ಠಾನಗೊಳಿಸಲು 3 ಕೋಟಿ ರೂ. ವೆಚ್ಚದಲ್ಲಿ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲು ಬಿಎಂಆರ್‌ಸಿಎಲ್‌ಗೆ ಮತ್ತೆ ಸೂಚಿಸಿದೆ. ಇದರಿಂದಾಗಿ ತುಮಕೂರು ಮೆಟ್ರೊ ರೈಲು ಯೋಜನೆ ಹಂತ ಹಂತವಾಗಿ ಪ್ರಗತಿಯಲ್ಲಿದ್ದು ತುಮಕೂರು ಜನತೆಯ ಬಹುನಿರೀಕ್ಷಿತ ಈ ಯೋಜನೆ ಈಡೇರುವ ಎಲ್ಲ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರು ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಬಹಳ ವೇಗವಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದರು. ರಾಜ್ಯ ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ರಾಜ್ಯದಾದ್ಯಂತ ಪ್ರಾರಂಭವಾಗಿದೆ. ರಾಜ್ಯದಲ್ಲಿ 12285ಬ್ಲಾಕ್ ಗಳಲ್ಲಿ ಸಮೀಕ್ಷೆ ನೆಡೆಯಲ್ಲಿದ್ದು, ಸಮೀಕ್ಷೆಗೆ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಒಟ್ಟು 6544 ಬ್ಲಾಕ್ ಗಳಲ್ಲಿ, ಒಟ್ಟು 7,55,483 ಮನೆಗಳನ್ನು ಒಳಗೊಂಡಂತೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಬೆರೆ ಜಿಲ್ಲೆಗಳಿಗೆ ಹೋಲಿಸಿದರೆ ತುಮಕೂರಿನಲ್ಲಿ ವೇಗವಾಗಿ ನಡೆಯುತ್ತಿದೆ. ಪ್ರಸ್ತುತ ಚಿಕ್ಕನಾಯಕನಹಳ್ಳಿ 13125, ಗುಬ್ಬಿ 2055, ಕೊರಟಗೆರೆ 10000, ಕುಣಿಗಲ್ 14000, ಮಧುಗಿರಿ 13000, ಶಿರಾ 15000, ತಿಪಟೂರು17000, ಪಾವಗಡ 10000, ತುರುವೇಕೆರೆ 10000, ತುಮಕೂರು 26000 ಮನೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಒಟ್ಟು 1,59, 555 ಮನೆಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದೆ. ಪ್ರಸ್ತುತ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರಲ್ಲದೆ, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 11,86,000 ಮನೆಗಳ ಪೈಕಿ 2,51,000 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 6537 ಗಣತಿದಾರರನ್ನು ನೇಮಕ ಮಾಡಲಾಗಿದ್ದು, ಒಂದೇ ದಿನದಲ್ಲಿ 73910 ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ ಎಂದು ತಿಳಿಸಿದರು. ಸಮೀಕ್ಷೆ ಪ್ರಾರಂಭದಲ್ಲಿ ತಾಂತ್ರಿಕ ತೊಂದರೆಗಳ ಹಿನ್ನೆಲೆಯಲ್ಲಿ ಸಮೀಕ್ಷಾ ಆಪ್ ನಲ್ಲಿ ಪ್ರಸ್ತುತ 3.6 ಆವೃತ್ತಿ ಅಪ್ಡೇಟ್ ಮಾಡಲಾಗಿದ್ದು, ಪ್ರಸ್ತುತ ಯಾವುದೇ ತಾಂತ್ರಿಕ ಸಮಸ್ಯೆ ಇಲ್ಲದೆ ಸಮೀಕ್ಷೆ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.
ಸಾಮಾಜಿಕ , ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ತಹಶೀಲ್ದಾರರು ಹಾಗೂ ಇಓಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದ್ದು, ಇವರನ್ನು ಬೇರೆ ಯಾವುದೇ ಇತರೆ ಕೆಲಸಗಳನ್ನು ವಹಿಸಿರುವುದಿಲ್ಲ. ಅಕ್ಟೋಬರ್ 7 ರೊಳಗೆ ತುಮಕೂರು ಜಿಲ್ಲೆಯ 755483 ಮನೆಗಳ ಸಮೀಕ್ಷೆ ನಿಶ್ಚಯವಾಗಿ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications