ಕನ್ನಡ ರಾಜ್ಯೋತ್ಸವದ ಬೆನ್ನಲ್ಲೇ ಬಾಲ ಬಿಚ್ಚಿದ ಎಂಇಎಸ್!
ಕನ್ನಡ ರಾಜ್ಯೋತ್ಸವ ಇಂದು ಎಲ್ಲೆಡೆ ಮನೆ ಮಾಡಿದೆ. ಕನ್ನಡಿಗರು ಅತ್ಯಂತ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಬೆಳಗಾವಿಯಲ್ಲಿ ಗುರುವಾರ ತಡರಾತ್ರಿಯಿಂದಲೇ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಂಭ್ರಮದ ನಡುವೆಯೇ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್ - mes) ನಾಡದ್ರೋಹಿ ಘೋಷಣೆ ಕೂಗಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನವೇ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡಿದೆ.
kannada rajyotsava: ಈ ಬಾರಿಯ ಕನ್ನಡ ರಾಜ್ಯೋತ್ಸವದಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಯಾವುದೇ ಕಾರಣಕ್ಕೂ ಕರಾಳ ದಿನ ಆಚರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದೇ ಬೆಳಗಾವಿ ಜಿಲ್ಲಾಡಳಿತ ಹೇಳಿತ್ತು. ಆದರೆ, ಇದೀಗ ಜಿಲ್ಲಾಡಳಿತ ಯೂರ್ಟನ್ ತೆಗೆದುಕೊಂಡಿದೆ ಎಂದು ಬೆಳಗಾವಿ ಜನ ಆರೋಪಿಸಿದ್ದಾರೆ. ಇದಕ್ಕೆ ಕಾರಣವೂ ಇದೆ. ಬೆಳಗಾವಿಯಲ್ಲಿ ಈ ಎಂಇಎಸ್ ಪುಂಡಾಟಿಕೆ ಹಲವು ವರ್ಷಗಳಿಂದ ಇದೆ ಇನ್ನು ಇದೇ ತಿಂಗಳು 20ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕಾರಣಕ್ಕಾಗಿ ಈ ಬಾರಿ ಕನ್ನಡ ರಾಜ್ಯೋತ್ಸವದಲ್ಲಿ ಖಂಡಿತವಾಗಿಯೂ ಎಂಇಎಸ್ ಪುಂಡರು ಏನಾದರೂ ಕಿತಾಪತಿ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಅದು ಇದೀಗ ನಿಜವಾಗಿದೆ.

ಕನ್ನಡ ರಾಜ್ಯೋತ್ಸವದ ದಿನ ಕರಾಳ ದಿನಕ್ಕೆ ಅನುಮತಿ ಕೊಡಲ್ಲ ಎನ್ನುತ್ತಲೇ ಎಂಇಎಸ್ ಮೆರವಣಿಗೆಗೆ ಪೊಲೀಸರ ಭದ್ರತೆ ನಿಯೋಜನೆ ಮಾಡಿದ್ದರು. ಇದು ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ರಾಜ್ಯೋತ್ಸವ ದಿನ ಕರಾಳ ದಿನಕ್ಕೆ ಅನುಮತಿ ಇಲ್ಲ ಎಂದು ಬೆಳಗಾವಿ ಡಿಸಿ ಮಹ್ಮದ್ ರೋಷನ್ ಹೇಳಿದ್ದರು. ಡಿಸಿ ಅವರು ಬದ್ಧತೆ ತೋರಿದ್ದಾರೆ ಎಂದೇ ಹೇಳಲಾಗಿತ್ತು. ಇದಕ್ಕೆ ಕನ್ನಡಿಗರಿಂದ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿತ್ತು.
ಆದರೆ, ಶುಕ್ರವಾರ ಪೊಲೀಸರ ಭದ್ರತೆಯಲ್ಲೇ ನಾಡದ್ರೋಹಿ ಎಂಇಎಸ್ ಮೆರವಣಿಗೆ ಶುರುವಾಗಿದೆ. ಮೂವರು ಎಸಿಪಿಗಳು, 100 ಕ್ಕೂ ಅಧಿಕ ಪೊಲೀಸರಿಂದ ಎಂಇಎಸ್ ಮೆರವಣಿಗೆಗೆ ಭದ್ರತೆ ಕಲ್ಪಿಸಲಾಗಿದೆ. ಪೊಲೀಸರ ಎದುರೇ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಕಾರ್ಯಕರ್ತರ ಪುಂಡಾಟ ನಡೆಸಿದ್ದಾರೆ. ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಒಂದೆಡೆ ವೈಭವದ ರಾಜ್ಯೋತ್ಸವ ನಡೆಯುತ್ತಿದ್ದರೆ, ಮತ್ತೊಂದೆಡೆ ಎಂಇಎಸ್ ಕಿರಿಕ್ ಶುರುವಾಗಿದೆ.
ಮತ್ತೇ ಗಡಿಯಲ್ಲಿ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರು ಬಾಲಬಿಚ್ಚಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಆದೇಶ ಧಿಕ್ಕರಿಸಿ ಕರಾಳ ದಿನ ಆಚರಣೆ ಮಾಡುತ್ತಿದ್ದಾರೆ. ಬೆಳಗಾವಿಯ ಸಂಭಾಜೀ ಪಾರ್ಕ್‌ನಿಂದ ಕರಾಳ ದಿನಾಚರಣೆ ರ್‍ಯಾಲಿ ಪ್ರಾರಂಭಿಸಲಾಗಿದೆ.
ಬೆಳಗಾವಿ ಸೇರಿ ಗಡಿ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ನಾಡದ್ರೋಹಿ ಘೋಷಣೆ ಕೂಗಲಾಗಿದೆ. ಅಲ್ಲದೇ ಕಪ್ಪು ಪಟ್ಟಿ ಧರಿಸಿ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಸಂಭಾಜೀ ಉದ್ಯಾನದಿಂದ ಮಂಡಳ ವರೆಗೆ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಎಂಇಎಸ್ ಕಾರ್ಯಕರ್ತರು ಮಹಾರಾಷ್ಟ್ರ ಪರ ಘೋಷಣೆ ಹಾಕಿದ್ದಾರೆ.
maharashtra assembly election 2024: ಮಹಾರಾಷ್ಟ್ರದಲ್ಲಿ ಇದೇ 20ರಂದು ಒಂದೇ ಹಂತದಲ್ಲಿ 288 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿ ವಿವಾದವನ್ನು ಬಳಸಿಕೊಳ್ಳಲು ಅಲ್ಲಿನ ಕೆಲವು ನಾಯಕರು ಸಿದ್ಧರಾಗಿದ್ದಾರೆ ಎಂದೇ ಹೇಳಲಾಗಿತ್ತು. ಇದರ ಭಾಗವಾಗಿ ಈ ಬಾರಿ ಹೆಚ್ಚು ಭದ್ರತೆಯನ್ನೂ ಪೊಲೀಸರು ವಹಿಸಿದ್ದಾರೆ.












Click it and Unblock the Notifications