ಬೆಳಗಾವಿ ಅಧಿವೇಶನ ಸಮಯದಲ್ಲೇ ಎಂಇಎಸ್ ಪುಂಡಾಟ: 6 ಸಾವಿರ ಪೊಲೀಸ್ ಭದ್ರತೆ
ಡಿಸೆಂಬರ್ 9ರಿಂದ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಭಾರೀ ಬಂದೋಬಸ್ತ್ ತೆಗೆದುಕೊಂಡಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬೆಳಗಾವಿ ಅಧಿವೇಶನ ನಡೆಯುವಾಗ ಕೆಲವು ಅಹಿತಕರ ಘಟನೆಗಳು ನಡೆದಿದ್ದವು. ಇದೀಗ ಚಳಿಗಾಲದ ಅಧಿವೇಶನಕ್ಕೆ ದಿನಗಣನೆ ಶುರುವಾಗಿದ್ದು ಯಾವೆಲ್ಲ ಸಿದ್ಧತೆ ಮಾಡಿಕೊಳ್ಳಬೇಕೋ ಅದನ್ನೆಲ್ಲ ಮಾಡಿಕೊಳ್ಳಲಾಗುತ್ತಿದೆ.
ಡಿಸೆಂಬರ್ 9 ರಿಂದ ಚಳಿಗಾಲದ ಅಧಿವೇಶನ ಹಿನ್ನೆಲೆ ಬೆಳಗಾವಿಯಲ್ಲಿ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಮಾತನಾಡಿದ್ದಾರೆ. 10 ದಿನಗಳ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಪೂರ್ವ ಸಿದ್ಧತೆ ಈಗಾಗಲೇ ಪ್ರಾರಂಭ ಮಾಡಿದ್ದೇವೆ. ನಾನು ಈಗ ಸಿದ್ಧತೆ ಪರಿಶೀಲನೆ ಮಾಡಲು ಬಂದಿದ್ದೇನೆ ಎಂದು ಹೇಳಿದರು.

ಆರು ಸಾವಿರ ಪೊಲೀಸರ ನಿಯೋಜನೆ
ಭದ್ರತೆ ಮತ್ತು ಸಾರ್ವಜನಿಕರು, ಶಾಸಕರ ಭದ್ರತೆ, ಪ್ರತಿಭಟನೆಗೆ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ
ಆರು ಸಾವಿರ ಜನ ಪೊಲೀಸರು, ಅರವತ್ತು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗುತ್ತಿದೆ. ಬೆಳಗಾವಿಯ ಟೆನ್‌ಸಿಟಿ, ಮಠಗಳು ಹಾಗೂ ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ಪೊಲೀಸರಿಗೆ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಿದ್ದೇವೆ. ಈ ಬಾರಿ ಸ್ವಲ್ಪ ಜಾಸ್ತಿ ಚಳಿ ಇರುವ ಕಾರಣಕ್ಕೆ ಮುಂಜಾಗ್ರತೆ ತೆಗೆದುಕೊಳ್ಳಲು ಹೇಳಿದ್ದೇವೆ.
ಎಂಇಎಸ್ ಪುಂಡಾಟ
ಇನ್ನು ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ (ಎಂಇಎಸ್)ಸಮಿತಿ ಈ ಬಾರಿಯೂ ಅಧಿವೇಶನದ ಸಮಯದಲ್ಲೇ ಕ್ಯಾತೆ ತೆಗೆದಿದೆ. ಮಹಾಮೇಳಾವ್ ಅನ್ನು ಇದೇ ಸಂದರ್ಭದಲ್ಲಿ ಮಾಡಲು ಮುಂದಾಗಿದೆ. ಮಹಾರಾಷ್ಟ್ರದಲ್ಲಿ ನೂತನ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಎಂಇಎಸ್ ಪುಂಡಾಟ ಹೆಚ್ಚಳವಾಗಿದೆ. ಈ ಬಗ್ಗೆ ಮತನಾಡಿರುವ ಹಿತೇಂದ್ರ ಅವರು, ಕಳೆದ ವರ್ಷದಂತೆ ನಾವು ಕ್ರಮ ವಹಿಸುತ್ತೇವೆ. ಈ ಬಾರಿಯೂ ಅದೇ ಪದ್ದತಿ ಇದೆ. ಶಾಂತ ರೀತಿ ಪ್ರತಿಭಟನೆಗೆ ಪೊಲೀಸರು ವ್ಯವಸ್ಥೆ ಹಾಗೂ ಅವಕಾಶ ನೀಡಿದ್ದೇವೆ. ಸಾರ್ವಜನಿಕರಿಗೆ ಅನಾನುಕೂಲ ಆಗುವುದಕ್ಕೆ ಅವಕಾಶ ಕೊಡಲ್ಲ. ಪ್ರತಿಭಟನೆಗಳ ಮೇಲೆ ನಿಗಾ ವಹಿಸಿದ್ದೇವೆ ಎಂದು ಹೇಳಿದರು.
ಇನ್ನು ಪಂಚಮಸಾಲಿ ಮೀಸಲಾತಿಗಾಗಿ ಸುವರ್ಣ ವಿಧಾನ ಸೌಧಕ್ಕೆ ಟ್ರ್ಯಾಕ್ ಮುತ್ತಿಗೆ ವಿಚಾರದ ಬಗ್ಗೆ ಮಾತನಾಡಿದ ಅವರು, ಶಾಂತ ರೀತಿಯ ಹೋರಾಟ ಮಾಡಲು ಎಲ್ಲರಿಗೂ ಅವಕಾಶ ಕೊಡ್ತೀವಿ. ಹೋರಾಟದ ಬೆಳವಣಿಗೆ ಮೇಲೆ ನಿಗಾವಹಿಸುತ್ತೇವೆ. ಸ್ವಾಮೀಜಿ ವಿರುದ್ಧ ನಾವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಜರುಗಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ ಅಧಿವೇಶನಕ್ಕೆ ಆರು ಸಾವಿರ ಜನ ಪೊಲೀಸ್ ಸಿಬ್ಬಂದಿಗೆ ನಗರದ ಹಲವು ಕಡೆ ವ್ಯವಸ್ಥೆ ಮಾಡಲಾಗಿದೆ. ಅಧಿವೇಶನಕ್ಕೆ ಬಂದೋಬಸ್ತ್‌ಗೆ ಬರುವ ಪೊಲೀಸ್ ಸಿಬ್ಬಂದಿಗೆ ವಸತಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಸುವರ್ಣ ವಿಧಾನಸೌಧ ಹಿಂಬದಿಯಲ್ಲಿ ಟೆಂಟ್ ಸಿಟಿ ನಿರ್ಮಾಣ ಮಾಡಲಾಗಿದೆ. ಎರಡೂವರೆ ಸಾವಿರ ಜನ ಸಿಬ್ಬಂದಿಗೆ ಒಂದೇ ಕಡೆ ವಸತಿ ವ್ಯವಸ್ಥೆಯನ್ನು ಈ ಬಾರಿ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಟೆಂಟ್ ಸಿಟಿಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಭೇಟಿ ಮಾಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಎಡಿಜಿಪಿಗೆ ಐಜಿಪಿ ವಿಕಾಸ್ ಕುಮಾರ್, ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಹಾಗೂ ಎಸ್‌ಪಿ ಭೀಮಾಶಂಕರ್ ಗುಳೇದ್ ಸಾಥ್ ಇದ್ದರು.












Click it and Unblock the Notifications