Mekedatu: ಮೇಕೆದಾಟು ಯೋಜನೆಗೆ ತಿರುವು: ತಿದ್ದುಪಡಿ DPR ಸಲ್ಲಿಸಲು ಕೇಂದ್ರ ಜಲ ಆಯೋಗ ಸೂಚನೆ
ಚೆನ್ನೈ: ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದ ಜನರಿಗೆ ಉಪಯೋಗವಾಗಲದೆ ಎನ್ನಲಾಗುವ ರಾಜ್ಯದ ಮೇಕೆದಾಟು ಯೋಜನೆಯ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಗಮನಿಸಿದ ಕೇಂದ್ರ ಜಲ ಆಯೋಗ (CWC) ಡಿಪಿಆರ್ ಅನ್ನು ವಾಪಾಸ್ ಕಳುಹಿಸಿದೆ. ಯಾವುದೇ ನಿಯಮ ಹಾಗೂ ಕೋರ್ಟ್ ತೀರ್ಪು ಉಲ್ಲಂಘಿಸದ ಹೊಸ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಲ್ಲಿಸುವಂತೆ ಸೂಚನೆ ನೀಡಿದೆ. ಈ ಮೂಲಕ ಕರ್ನಾಟಕಕ್ಕೆ ತಾತ್ಕಾಲಿಕ ಹಿನ್ನಡೆ ಆದಂತಾಗಿದೆ.
ಕರ್ನಾಟಕ-ತಮಿಳುನಾಡು ಕಾವೇರಿ ನೀರು ಬಿಡುಗಡೆ ವಿವಾದ ಮತ್ತೆ ಉಲ್ಬಣಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಈ ನಡುವೆ 2018ರಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ತಾತ್ವಿಕ ಅನುಮೋದನೆ ನೀಡಿದ್ದ ಆಯೋಗ ಇದೀಗ ಹೆಚ್ಚುವರಿ ನೀರಿನ ಬಳಕೆಯ ಅಂಶಗಳನ್ನು ಕಂಡು ಡಿಪಿಆರ್ ಅನ್ನು ವಾಪಾಸ್ ನೀಡಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಲಭ್ಯ ದಾಖಲೆ ಪ್ರಕಾರ, ಕರ್ನಾಟಕ ಮೇಕೆದಾಟು ಯೋಜನೆ ಅನುಷ್ಠಾನದ ಡಿಪಿಆರ್ ಪ್ರಸ್ತಾವನೆಯು ಕಾವೇರಿ ಜಲವಿವಾದ ನ್ಯಾಯಮಂಡಳಿ (CWDT) ತೀರ್ಪು ಮತ್ತು ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ್ದ ತೀರ್ಪುನ ವಿರುದ್ಧವಾಗಿದೆ. ಇದು ನಿಯಮಗಳು, ಆದೇಶದ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಆಯೋಗ ಉಲ್ಲೇಖಿಸಿ ಡಿಪಿಆರ್ ಸ್ವೀಕರಿಸಿಲ್ಲ.
ಮುಖ್ಯವಾಗಿ ಪ್ರಸ್ತಾವನೆಯಲ್ಲಿ ಮೊದಲು 2.2 ಟಿಎಂಸಿ ಅಡಿ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆಯಲ್ಲಿ ಸೇರಿಸಲಾಗಿತ್ತು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮೇಕೆದಾಟು ಯೋಜನೆಯಿಂದ ಅಗತ್ಯ ನೀರು ಪೂರೈಸಬಹುದು ಅದಕ್ಕಾಗಿ 4.75ಟಿಎಂಸಿ ನೀರು ಸಂಗ್ರಹಿಸಲಾಗುವುದು ಎಂದಿತ್ತು. ಇದೀಗ 2.2 ಟಿಎಂಸಿ ಹೆಚ್ಚುವರಿ ಸೇರಿ 6.90 ಟಿಎಂಸಿಗೆ ಏರಿಸಲಾಗುತ್ತದೆ ಎಂದು ಕರ್ನಾಟಕ ತಿಳಿಸಿದೆ. ಹೆಚ್ಚುವರಿ ನೀರು ಸಂಗ್ರಹಕ್ಕೆ ಆಕ್ಷೇಪ ಎತ್ತಿರುವ ಸಿಡಬ್ಲುಸಿ ಈ ಪ್ರಸ್ತಾವನೆಯನ್ನು ಒಪ್ಪದೇ ತಿರಸ್ಕರಿಸಿದೆ.
ಅಲ್ಲದೇ ಪ್ರಸ್ತಾವನೆಯಲ್ಲಿ ಶಿವನಸಮುದ್ರ ಜಲವಿದ್ಯುತ್ ಯೋಜನೆಯನ್ನು ಸಹ ಸೇರಿಸಿದೆ. ಹೀಗಾಗಿ ಹೆಚ್ಚುವರಿ ನೀರಿನ ಬಳಕೆಗೆ ಅನುಮತಿಗೆ ಕೋರಿತ್ತು. ಅದೀಗ ಸಾಧ್ಯವಾಗಿಲ್ಲ. ಕರ್ನಾಟಕ ಮತ್ತೊಮ್ಮೆ ಡಿಪಿಆರ್ ಸಲ್ಲಿಸಬೇಕಿದೆ.
2 ವರ್ಷದಲ್ಲಿ ಮೇಕೆದಾಟು ಯೋಜನೆ ಮುಗಿಸಿ: ಎಎಪಿ
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ತಕ್ಷಣವೇ ಯೋಜನೆಗೆ ಚಾಲನೆ ನೀಡಿ ತಮ್ಮ ಅಧಿಕಾರಾವಧಿಯೊಳಗೆ ಪೂರ್ಣಗೊಳಿಸುವಂತೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬಹಿರಂಗ ಪತ್ರದ ಮೂಲಕ ಆಗ್ರಹಿಸಿದ್ದಾರೆ.
2018ರಲ್ಲಿಯೇ ಸರ್ವೋಚ್ಚ ನ್ಯಾಯಾಲಯವು ಮೇಕೆದಾಟು ಯೋಜನೆಗೆ ನೆರೆ ರಾಜ್ಯಗಳ ಸಮ್ಮತಿ ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಕಾರಣಗಳಿಂದ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸಿವೆ ಎಂದು ಅವರು ಆರೋಪಿಸಿದರು. ಇನ್ನು ಮುಂದಾದರೂ ರಾಜಕೀಯ ಬಿಟ್ಟು ತ್ವರಿತಗತಿಯಲ್ಲಿ ಯೋಜನೆ ಜಾರಿಗೆ ಮುಂದಾಗಬೇಕು ಎಂದು ತಿಳಿಸಿದರು.
ನೀರು ಬಿಡಲು ಒಪ್ಪದ ಕರ್ನಾಟಕ
13500 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಮುಂದಿನ 15 ದಿನಗಳಲ್ಲಿ ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣೆ ಸಮಿತಿ (CWRC) ಆದೇಶಿಸಿತ್ತು. ಇದರ ವಿರುದ್ಧ ಕರ್ನಾಟಕ ಮೇಲ್ಮನವಿ ಸಲ್ಲಿಸಿದೆ. ಈ ಮೂಲಕ ಕರ್ನಾಟಕ ಕಾವೇರಿ ನೀರು ಬಿಡಲು ಆಗುವುದಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದಂತೆ ತಮಿಳುನಾಡು ಸಿಎಂ ವಿಜಯ್ ಅವರು ತಮ್ಮ ರಾಜ್ಯದಿಂದ ರವಾನೆ ಆಗುತ್ತಿದ್ದ ಕಲ್ಲು, ಜಲ್ಲಿ ಕಲ್ಲು, ಎಂ-ಸ್ಯಾಂಡ್ ಪೂರೈಕೆಯನ್ನು ಮುಂದಿನ ಮೂರು ತಿಂಗಳವರೆಗೆ ನಿಷೇಧಿಸಿ ಆದೇಶಿಸಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವಷ್ಟು ನೀರು ರಾಜ್ಯದ ಕಾವೇರಿ ಒಡಲಿಲ್ಲ. ಬೇಡಿಗೆ ತಾಂಡವವವಾಡುತ್ತಿದ್ದು, ಈ ವೇಳೆ ರಾಜ್ಯದ ರೈತರೇ ಪರದಾಡುವ ಸ್ಥಿತಿ ಇದೆ. ಹೀಗಿದ್ದಾಗ ನೀರು ಬಿಡುವ ನಿರ್ಧಾರ ಸರಿಯಲ್ಲ ಎಂದು ಸಚಿವ ಎಂಬಿ ಪಾಟೀಲ್ ಪ್ರತಿಕ್ರಿಯಿಸಿದ್ದರು. ಜೊತೆಗೆ ಈ ವಿಚಾರದಲ್ಲಿ ತಮಿಳನಾಡು ಸೂಕ್ಷ್ಮವಾಗಿ ಅರಿಯಬೇಕು. ಕಾವೇರಿ ನೀರು ವಿವಾದಕ್ಕೆ ಮೇಕೆದಾಟು ಯೋಜನೆ ಜಾರಿಗೆ ತರುವುದೇ ಶಾಶ್ವತ ಪರಿಹಾರ ಎಂದು ಪ್ರತಿಪಾದಿಸಿದರು.


Click it and Unblock the Notifications
