ಮೇಕೆದಾಟು ಯೋಜನೆಗೆ ತಮಿಳುನಾಡು ಜೊತೆ ಮಾತುಕತೆ ಅಗತ್ಯವಿಲ್ಲ: ಕುಮಾರಸ್ವಾಮಿ

ಬೆಂಗಳೂರು, ಮಾ.9: ಕುಡಿಯುವ ನೀರಿನ ಉದ್ದೇಶದ ಮೇಕೆದಾಟು ಯೋಜನೆ ವಿಷಯದಲ್ಲಿ ಕರ್ನಾಟಕ ರಾಜ್ಯವು ತಮಿಳುನಾಡು ಜತೆ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ ಮತ್ತು ಅವರ ಒಪ್ಪಿಗೆಯೂ ಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ವಿಧಾನಸಭೆಯಲ್ಲಿ ಇಂದು ಮುಂಗಡ ಪತ್ರದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೇಕೆದಾಟು ವಿಷಯದಲ್ಲಿ ಕೇಂದ್ರ ಸರಕಾರವು ಮಧ್ಯಸ್ಥಿಕೆ ವಹಿಸುವ ಅಗತ್ಯವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಕುಡಿಯುವ ನೀರಿನ ಯೋಜನೆಯಾದ ಮೇಕೆದಾಟು ಬಗ್ಗೆ ಕಾನೂನು ಬದ್ಧವಾಗಿ ತಮಿಳುನಾಡು ಯಾವ ರೀತಿಯ ಆಕ್ಷೇಪ ಎತ್ತಲು ಸಾಧ್ಯವಿಲ್ಲ. ಅದಕ್ಕೆ ಅವಕಾಶವೂ ಇಲ್ಲ. ಈ ಬಗ್ಗೆ ತಮಿಳುನಾಡು ಜತೆ ಯಾವುದೇ ಮಾತುಕತೆ ನಡೆಸುವ ಅಗತ್ಯವಿಲ್ಲ ಎಂದು ಈ ದೇಶದ ಸುಪ್ರೀಂ ಕೋರ್ಟ್ ಹೇಳಿದೆ ಎಂಬ ಅಂಶವನ್ನು ಕುಮಾರಸ್ವಾಮಿ ಸದನದ ಗಮನಕ್ಕೆ ತಂದರು.

Mekedatu Project Does Not Need to Negotiate With Tamil Nadu: HD Kumaraswamy

ಆಕ್ಷೇಪ ಇಲ್ಲ ಎಂದು ಸ್ವತಃ ತಮಿಳುನಾಡು ಹೇಳಿದೆ:

ಸುಪ್ರೀಂ ಕೋರ್ಟ್'ಗೆ ತಮಿಳುನಾಡು ರಾಜ್ಯದ ವಕೀಲರೇ ಪ್ರಮಾಣ ಪತ್ರವನ್ನು ಸಲ್ಲಿಸಿ, ಕಾವೇರಿ ನದಿಯಲ್ಲಿ ತನಗೆ ಹಂಚಿಕೆ ಆಗಿರುವ ನೀರನ್ನು ಕರ್ನಾಟಕ ಹೇಗೆ ಬೇಕಾದರೂ ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ನಮ್ಮ ತಕರಾರು ಏನು ಇಲ್ಲ. ಅವರು ಬೇಕಾದರೆ ಎರಡೂ ರಾಜ್ಯಗಳ ಗಡಿ ಪ್ರದೇಶದಲ್ಲಿ ಇನ್ನೊಂದು ಅಣೆಕಟ್ಟು ಕಟ್ಟಿಕೊಳ್ಳಲಿ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು ಎಂಬ ಮಹತ್ವದ ಅಂಶದ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಸದನದ ಗಮನ ಸೆಳೆದರು.

'ಅಗತ್ಯವಾದರೆ ಮಧ್ಯಪ್ರವೇಶಿಸಿ ಸಂಧಾನ ಮಾತುಕತೆ ನಡೆಸಲು ಸಿದ್ಧ' ಎಂದು ಕೇಂದ್ರ ಜಲ ಸಂಪನ್ಮೂಲ ಖಾತೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಬೆಂಗಳೂರಿನಲ್ಲೇ ಕೊಟ್ಟಿರುವ ಹೇಳಿಕೆ ಒಪ್ಪತಕ್ಕದ್ದಲ್ಲ. ನಮಗೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ನೆರೆ ರಾಜ್ಯದ ಅಪ್ಪಣೆ ನಮಗೆ ಬೇಕಿಲ್ಲ. ಆ ರೀತಿಯ ಯಾವ ಸಂಧಾನ ಅಥವಾ ಮಾತುಕತೆ ಬೇಕಾಗಿಲ್ಲ ಎಂದು ಸರಕಾರಕ್ಕೆ ಅವರು ನೇರವಾಗಿ ಹೇಳಿದರು.

ಕೇಂದ್ರ ಸಚಿವರು ನೀಡಿರುವ ಹೇಳಿಕೆ ನನಗೆ ಅಚ್ಚರಿ ಉಂಟು ಮಾಡಿದೆ. ಈ ಬಗ್ಗೆ ರಾಜ್ಯ ಸರಕಾರ ಆಕ್ಷೇಪ ದಾಖಲು ಮಾಡಬೇಕು. ರಾಜ್ಯದ ಹಿತಾಸಕ್ತಿಗಳ ಬಗ್ಗೆ ಸರಕಾರ ರಾಜಿ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಎಂದ ಅವರು, ವಸ್ತು ಸ್ಥಿತಿ ಹೀಗಿದ್ದರೂ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ತಮಿಳುನಾಡಿಗೆ ಪತ್ರ ಬರೆದಿದ್ದರು. ಆದರೆ ನೆರೆ ರಾಜ್ಯದ ಜತೆ ಈ ರೀತಿಯ ಪತ್ರ ವ್ಯವಹಾರ ನಡೆಸುವ ಅಗತ್ಯವಿರಲಿಲ್ಲ ಎಂದರು ಕುಮಾರಸ್ವಾಮಿ ಅವರು.

ದೇವೇಗೌಡರು ಪರಿಹಾರ ಸೂಚಿಸಿದ್ದಾರೆ:

ಈಗ ಸರಕಾರ ಮಾಡಿಕೊಂಡಿರುವ ಗೊಂದಲದಿಂದ ಮೇಕೆದಾಟು ಯೋಜನೆಯನ್ನು ಕಾರ್ಯಗತ ಮಾಡುವುದು ಸುಲಭ ಸಾಧ್ಯವಲ್ಲ. ಈ ಬಗ್ಗೆ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುದೀರ್ಘ ಪತ್ರ ಬರೆದು ಯೋಜನೆಯನ್ನು ಯಾವ ರೀತಿ ಕಾರ್ಯಗತ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಕುಡಿಯುವ ನೀರಿನ ಉದ್ದೇಶಕ್ಕೆ 30.65 ಟಿಎಂಸಿ ನೀರು ತುಂಬುವ 67.16 ಗ್ರಾಸ್ ಕೆಪಾಸಿಟಿಯಷ್ಟು ಗಾತ್ರದ ಈ ಯೋಜನೆಯನ್ನು ಒಂದೇ ಹಂತದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅವರು ಪತ್ರದಲ್ಲಿ ಬರೆದಿದ್ದರು. ಇದನ್ನು ಸರಕಾರ ಗಮನಕ್ಕೆ ತಂದುಕೊಳ್ಳಬೇಕು ಎನ್ನುವುದು ಈ ಒತ್ತಾಯ ಮಾಡಿದರು ಎಂದು ಕುಮಾರಸ್ವಾಮಿ ಅವರು ಹೇಳಿದರು.

ಇನ್ನು, ಅಣೆಕಟ್ಟು ಕಟ್ಟಲು ಯೋಜನೆ ರೂಪಿಸಿದಾಗ 9000 ಕೋಟಿ ರೂ. ಅಂದಾಜು ವೆಚ್ಚ ಆಗಿ, ಈಗ ಅದು 12000 ಕೋಟಿ ರೂ. ಗಳಿಗೆ ಹೋಗಿದೆ. ದಿನ ಕಳೆದಂತೆ ವೆಚ್ಚ ಇನ್ನೂ ಏರಿಕೆಯಾಗಿದೆ ಎಂದು ಅವರು ವಿವರಿಸಿದರು.

ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ:

ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ನೀರಾವರಿ ಯೋಜನೆಗಳ ಬಗ್ಗೆ ಕಾಂಗ್ರೆಸ್ ತಾಳಿದ ನಿರ್ಲಕ್ಷ್ಯ ಧೋರಣೆಯನ್ನು ಕಟುವಾಗಿ ಟೀಕಿಸಿದರು.

75 ವರ್ಷದಲ್ಲಿ ಅನೇಕರು ಸರ್ಕಾರ ಮಾಡಿದ್ದಾರೆ, ಸುಮಾರು ಅಣೆಕಟ್ಟುಗಳು ಬಂದಿವೆ. ಈ ಬಗ್ಗೆ ಎಲ್ಲರೂ ಕ್ರೆಡಿಟ್ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯದ ನೀರಾವರಿಗೆ ಯಾವುದೇ ಕೊಡುಗೆ ನೀಡಿದ ಕಾಂಗ್ರೆಸ್ ಈಗ ನಮ್ಮ‌ ನೀರು, ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡುತ್ತಿದ್ದಾರೆ. ಈಗ ನೋಡಿದರೆ ಜನರ ಹಕ್ಕು ಅಂತಿದ್ದಾರೆ. ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನವರು ಪೊಲೀಸರನ್ನು ಬಿಟ್ಟು ಹೊಡೆಸುವಾಗ ನಮ್ಮ ನೀರು, ನಮ್ಮ ಹಕ್ಕು ನೆನಪಿಗೆ ಬರಲಿಲ್ಲವೇ? ಜನರು ಪೆಟ್ಟು ತಿಂದು ಊರು ಬಿಟ್ಟು ಹೋಗುವಾಗ ಅವರಿಗೆ ಜವಾಬ್ದಾರಿ ಇರಲಿಲ್ಲವೇ ಎಂದು ಕಾಂಗ್ರೆಸ್ ವಿರುದ್ಧ ಹೆಚ್.ಡಿ.ಕೆ ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಹೊಳೆ ಯೋಜನೆಯಿಂದ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತದೆಯೇ?

ಮಧ್ಯಾಹ್ನದ ಭೋಜನ ವಿರಾಮದ ಬಳಿಕವೂ ಮಾತು ಮುಂದುವರಿಸಿದ ಕುಮಾರಸ್ವಾಮಿ, ಎತ್ತಿನಹೊಳೆ ಯೋಜನೆಯ ಮೂಲಕ ಬರಪೀಡಿತ ಕೋಲಾರ - ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ನೀರು ಸಿಗುತ್ತದೆಯೋ ಇಲ್ಲವೋ ಗೊತ್ತಿಲ್ಲವಾದರೂ ಗುತ್ತಿಗೆದಾರರ ಜೇಬು ತುಂಬಿಸಲಾಗುತ್ತಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.

ಪ್ರಸಕ್ತ ಬಜೆಟ್ ನಲ್ಲಿ ಈ ಯೋಜನೆಗೆ 3000 ಕೋಟಿ ರೂಪಾಯಿ ಘೋಷಣೆ ಮಾಡಲಾಗಿದೆ. ಹಾಗೆ ನೋಡಿದರೆ ಮೊದಲಿಗೆ ಇವೆರಡೂ ಜಿಲ್ಲೆಗಳಿಗೆ ನೀರು ತರುವ ನಿರ್ಧಾರ ಮಾಡಿದ್ದು 2011-12ರಲ್ಲಿ. ಆಗ ಜಲ ಸಂಪನ್ಮೂಲ ಸಚಿವರಾಗಿದ್ದವರು ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು. ಆದರೆ ಎತ್ತಿನಹೊಳೆಯ ನೀರಿನ ಮೂಲ ಯಾವುದು? ನೀರಿನ ಲಭ್ಯತೆಯ ಖಾತರಿ ಇಲ್ಲದೆ ಲೋಕಸಭೆ ಚುನಾವಣೆ ಘೋಷಣೆ ಆದಾಗ ಚಿಕ್ಕಬಳ್ಳಾಪುರದಲ್ಲಿ ತರಾತುರಿಯಲ್ಲಿ ಕಾರ್ಯಕ್ರಮ ಮಾಡಿ ಶಂಕುಸ್ಥಾಪನೆ ಮಾಡಲಾಯಿತು.ಈಗ ನೀರು ಯಾವಾಗ ಬರುತ್ತದೆ ಎಂದು ಅವರು ಕೇಳಿದರು.

ಒಂದೇ ವರ್ಷದಲ್ಲಿ ನೀರು ಕೊಡ್ತೀವಿ ಅಂತ ಹೇಳಿದ್ದರು:

ಚಿಕ್ಕಬಳ್ಳಾಪುರದಲ್ಲಿ ಅಡಿಗಲ್ಲು ಹಾಕಿದಾಗ ಒಂದೇ ವರ್ಷದಲ್ಲಿ ನೀರು ಕೊದಲಾಗುವುದು ಎಂದು ಸರಕಾರ ಹೇಳಿತ್ತು. ಅವತ್ತೇ ನಾನು ಕೋಲಾರದಲ್ಲಿ ಹೇಳಿದ್ದೆ, ಒಂದೇ ವರ್ಷದಲ್ಲಿ ನೀರು ಕೊಟ್ಟರೆ ತಲೆ ಬೋಳಿಸಿಕೊಳ್ತೀನಿ ಅಂತ. ಆಗ ನನಗೆ ಸ್ವಲ್ಪ ಕೂದಲಿತ್ತು. ಹೇ.. ಅವನಿಗೆ ಕೂದಲೇ ಇಲ್ಲ, ಅವನೆಲ್ಲಿ ತಲೆ ಬೋಳಿಸ್ಕೋತಾನೆ ಅಂದಿದ್ರು, ನನಗೆ ನೆನಪಿದೆ ಎಂದು ಎತ್ತಿನಹೊಳೆಯ ಹಣೆಬರಹವನ್ನು ಸದನದ ಗಮನಕ್ಕೆ ತಂದರು ಕುಮಾರಸ್ವಾಮಿ ಅವರು.

ಓಪನ್ ಕೆನಾಲ್ ಗ್ರಾವಿಟಿಯಲ್ಲಿ, 15 ಡೆಲಿವರಿ ಪಾಯಿಂಟ್ ಮೂಲಕ ತುಮಕೂರು, ರಾಮನಗರ, ಚಿಕ್ಕಮಗಳೂರು, ಹಾಸನ ಜಿಲ್ಲೆಗೆ ನೀರು ಕೊಡೋದಕ್ಕೆ ಪಾಯಿಂಟ್ ಗಾಳನ್ನು ಮಾಡಿದ್ದಾರೆ. ಇಷ್ಟಕ್ಕೆ 14 ಟಿಎಂಸಿ ನೀರು ಅಗತ್ಯ. ಆದರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 10 ಟಿಎಂಸಿ ನೀರು ಬೇಕು. ಅಷ್ಟು ನೀರನ್ನು ಎಲ್ಲಿಂದ ತರುತ್ತಾರೆ? ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+