MBBS ಸೀಟ್ ಪಡೆದು ಮಾತು ಉಳಿಸಿಕೊಂಡ ವಿದ್ಯಾರ್ಥಿನಿ; ಸೃಷ್ಟಿ ಸಾಧನೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಮೆಚ್ಚುಗೆ, ಡಿಕೆಶಿ ಮಹತ್ವದ ಮಾತು!
MBBS: ಅಂದು ಕೊಟ್ಟ ಮಾತು, ಇಂದು MBBS ಸೀಟ್ ಪಡೆದು ನನಸಾದ ಕನಸು ಎನ್ನುವ ಸಾಲುಗಳೊಂದಿಗೆ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿದ್ಯಾರ್ಥಿನಿಯೊಬ್ಬರ ಸ್ಫೂರ್ತಿದಾಯಕ ಪಯಣದ ಬಗ್ಗೆ ಹಂಚಿಕೊಂಡಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮದಲ್ಲಿ ಸುಮಾರು 600 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗಿತ್ತು.
ಇದೇ ವೇದಿಕೆಯಲ್ಲಿ ಮುತಗಾ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಸೃಷ್ಟಿ ನಾರಾಯಣ ಅಪ್ಟೇಕರ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 99% ಅಂಕಗಳನ್ನು ಗಳಿಸಿದ್ದಕ್ಕಾಗಿ ಸನ್ಮಾನ ಸ್ವೀಕರಿಸಿದ್ದಳು.ಅಂದು ವೇದಿಕೆ ಮೇಲೆ ಸೃಷ್ಟಿ ನನ್ನ ಬಳಿ ಬಂದು, "ನಿಮ್ಮ ಆಶಯದಂತೆ ನಾನು ಡಾಕ್ಟರ್ ಆಗುತ್ತೇನೆ, MBBS ಸೀಟ್ ಪಡೆದೇ ತೀರುತ್ತೇನೆ" ಎಂದು ಆತ್ಮವಿಶ್ವಾಸದಿಂದ ಮಾತನ್ನಾಡಿದ್ದಳು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಇಂದು ಆ ಮಾತನ್ನು ಉಳಿಸಿಕೊಂಡು, ಬಾಗಲಕೋಟೆಯ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ MBBS ಸೀಟ್ ಪಡೆದು, ಡಾಕ್ಟರ್ ಆಗುವ ಕನಸಿನತ್ತ ಹೆಮ್ಮೆಯ ಹೆಜ್ಜೆ ಇಟ್ಟಿದ್ದಾಳೆ. ಈ ಸಂತಸದ ಸುದ್ದಿಯನ್ನು ಹಂಚಿಕೊಂಡು, ಕೃತಜ್ಞತೆ ಸಲ್ಲಿಸಲು ಇಂದು ನನ್ನನ್ನು ಭೇಟಿಯಾಗಲು ಬಂದ ಸೃಷ್ಟಿಯನ್ನು ಕಂಡು ಒಬ್ಬ ತಾಯಿಯಾಗಿ ಮನಸ್ಸಿಗೆ ಅಪಾರ ಸಂತೋಷ ಮತ್ತು ಹೆಮ್ಮೆ ಉಂಟಾಯಿತು. ಕಳೆದ 20 ವರ್ಷಗಳಿಂದ ಶಿಕ್ಷಕರಾಗಿ ಜ್ಞಾನ ದಾಸೋಹ ಮಾಡುತ್ತಿರುವ ತಂದೆ ನಾರಾಯಣ ಅಪ್ಟೇಕರ್ ಅವರ ಪರಿಶ್ರಮ ಮತ್ತು ಮಗಳ ಈ ಸಾಧನೆ ನಿಜಕ್ಕೂ ಅಭಿನಂದನಾರ್ಹ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪ್ರತಿಯೊಬ್ಬ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ, ಗೌರವಿಸಿ, ಅವರ ಉನ್ನತ ಶಿಕ್ಷಣ ಹಾಗೂ ಉಜ್ವಲ ಭವಿಷ್ಯದ ಕನಸುಗಳಿಗೆ 'ಲಕ್ಷ್ಮೀತಾಯಿ ಫೌಂಡೇಷನ್' ಸದಾ ಆಸರೆಯಾಗಿ ನಿಲ್ಲಲಿದೆ. ಸೃಷ್ಟಿ ಉತ್ತಮ ವೈದ್ಯೆಯಾಗಿ ಬೆಳೆದು ಸಮಾಜದ, ವಿಶೇಷವಾಗಿ ಬಡವರ ಸೇವೆ ಮಾಡುವಂತಾಗಲಿ. ಮಗಳ ಮುಂದಿನ ವೈದ್ಯಕೀಯ ಶಿಕ್ಷಣದ ಪಯಣ ಯಶಸ್ವಿಯಾಗಲಿ ಎಂಬುದು ನನ್ನ ಹೃದಯಪೂರ್ವಕ ಹಾರೈಕೆ ಹಾಗೂ ಆಶೀರ್ವಾದ ಎಂದೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.
ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ: ಡಿ.ಕೆ ಶಿವಕುಮಾರ್
ನಮ್ಮ ನಾಡಿನ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಬದ್ಧ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಕನಕಪುರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಕಾಲೇಜಿನ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಸ್ವತಃ ಊಟ ಮಾಡುವ ಮೂಲಕ ಆಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ. ಊಟದ ಗುಣಮಟ್ಟದಿಂದ ಹಿಡಿದು ವಸತಿ ವ್ಯವಸ್ಥೆ, ಮೂಲಭೂತ ಸೌಕರ್ಯಗಳು, ಉಚಿತ ಬಸ್ ಪಾಸ್ ಹಾಗೂ ಸ್ಕಾಲರ್‌ಶಿಪ್ ಸೇರಿದಂತೆ ವಿದ್ಯಾರ್ಥಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಅವರಿಂದಲೇ ಮಾಹಿತಿ ಪಡೆದುಕೊಳ್ಳಲಾಯಿತು.
ಕಲಬುರಗಿ, ರಾಯಚೂರು, ಹಾವೇರಿ, ಬೀದರ್, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸಿ ವಿದ್ಯಾಭ್ಯಾಸ ಮಾಡುತ್ತಿರುವ ನಮ್ಮ ಮಕ್ಕಳು, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಅವರ ಬದುಕಿನಲ್ಲಿ ಯಾವುದೇ ಕೊರತೆ ಅಡ್ಡಿಯಾಗಬಾರದು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.


Click it and Unblock the Notifications
