Manipur violence; ಕರ್ನಾಟಕ್ಕೆ ಬರುವ ಶಾಲಾ ವಿದ್ಯಾರ್ಥಿಗಳ ದಾಖಲಾತಿ
ಬೆಂಗಳೂರು, ಜುಲೈ 28; ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಗಲಭೆಯಿಂದ ಹಲವರು ಕರ್ನಾಟಕಕ್ಕೆ ಮರಳಿ ಬರುತ್ತಿದ್ದಾರೆ. ಹೀಗೆ ವಾಪಸ್ ಬರುವವರ ಜೊತೆ ಮಕ್ಕಳು ಸಹ ಬಂದು ಇಲ್ಲಿ ಶಿಕ್ಷಣ ಮುಂದುವರೆಬೇಕಿದೆ. ಮಣಿಪುರದಿಂದ ಮರಳುವ ಮಕ್ಕಳಿಗೆ 1 ರಿಂದ 10ನೇ ತರಗತಿಯವರೆಗೆ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡಲು ಅನುಮತಿ ನೀಡುವ ಕುರಿತು ಸುತ್ತೋಲೆಯೊಂದನ್ನು ಹೊರಡಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಶುಕ್ರವಾರ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಪರಿಸ್ಥಿತಿಯಂದಾಗಿ ವಲಸೆ ಬಂದು 2023-24ನೇ ಸಾಲಿಗೆ ದಾಖಲಾತಿ ಬಯಸುವ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಪಠ್ಯ ಕ್ರಮ ಶಾಲೆಗಳಿಗೆ ದಾಖಲಾತಿ ಅನುಮತಿ ನೀಡುವ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

ಸುತ್ತೋಲೆಯ ವಿವರಗಳು; ಮಣಿಪುರ ರಾಜ್ಯದಲ್ಲಿನ ಪ್ರಸ್ತುತ ಪಕ್ಷುಬ್ಧ ಪರಿಸ್ಥಿತಿಯಿಂದಾಗಿ ಅಲ್ಲಿನ ರಾಜ್ಯದಲ್ಲಿ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯಕ್ಕೆ ರಾಜ್ಯ ಪಠ್ಯ ಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ ದಾಖಲಾತಿ ಬಯಸಿ ಬರುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳ ಶಾಲಾ ದಾಖಲಾತಿಗಾಗಿ ಅವಶ್ಯ ದಾಖಲೆಗಳು/ ಪ್ರಮಾಣ ಪತ್ರಗಳು/ ವರ್ಗಾವಣೆ ಪತ್ರಗಳು ಹಾಗೂ ಇನ್ನಿತರೆ ಶಾಲೆಗೆ ಸಂಬಂಧಿಸಿದ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ, ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು ಎಂದು ಸುತ್ತೋಲೆ ಹೇಳಿದೆ.
2023-24ನೇ ಸಾಲಿಗೆ ಮಾತ್ರ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ದಿನಾಂಕ 13/08/2019ರ ಸುತ್ತೋಲೆಯಂತೆ ದಾಖಲಾತಿ ಮಾಡಿಕೊಳ್ಳುವಾಗ ಜನನ ಪ್ರಮಾಣ ಪತ್ರ/ ವರ್ಗಾವಣೆ ಪಮಾಣ ಪತ್ರ ಅಥವಾ ಯಾವುದೇ ದಾಖಲೆಗಳು ನೀಡುವಂತೆ ಒತ್ತಾಯಿಸದೆ ವಿದ್ಯಾರ್ಥಿ/ ಪಾಲಕರಿಂದ ಸ್ವಯಂ ದೃಢೀಕೃತ ಪತ್ರವನ್ನು ಪಡೆಯಬೇಕು ಎಂದು ತಿಳಿಸಿದೆ.
ಅಲ್ಲದೇ ಸುತ್ತೋಲೆಯಲ್ಲಿ ವಿದ್ಯಾರ್ಥಿಯು ಹಿಂದಿನ ಶಾಲೆಯಲ್ಲಿ ಯಾವ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುತ್ತಾರೆಯೋ ಅದೇ ತರಗತಿಗಳಿಗೆ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಇವರಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಅಗತ್ಯ ಕ್ರಮಕ್ಕಾಗಿ ಪ್ರತಿಯನ್ನು ಕಳಿಸಲಾಗಿದೆ.
ಮಣಿಪುರ ಗಲಭೆ; ಮಣಿಪುರ ರಾಜ್ಯದಲ್ಲಿ ಉಂಟಾಗಿರುವ ಗಲಭೆ ಬಗ್ಗೆ ಸದ್ಯ ವಿಶ್ವದ ಬೇರೆ-ಬೇರೆ ರಾಷ್ಟ್ರಗಳಲ್ಲಿ ಸಹ ಚರ್ಚೆ ನಡೆಯುತ್ತಿದೆ. ಅದರಲ್ಲೂ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿ, ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಭಾರೀ ಆಕ್ರೋಶ ಹುಟ್ಟುಹಾಕಿದೆ.
ಮಣಿಪುರದಲ್ಲಿ ಕಳೆದ ಮೂರು ತಿಂಗಳಿನಿಂದ ಗಲಭೆಗಳು ನಡೆಯತ್ತಿವೆ. ಇದುವರೆಗೂ 150ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಮಣಿಪುರ ಗಲಭೆಗೆ ಸಂಬಂಧಿಸಿದಂತೆ ಈಗಾಗಲೇ 5 ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಲಾಗಿದೆ.
ಜನಾಂಗೀಯ ಹಿಂಸಾಚಾರದಿಂದ ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿವೆ. ಇದರಿಂದಾಗಿ ಹಲವಾರು ಜನರು ರಾಜ್ಯವನ್ನು ತೊರೆದು ತಮ್ಮ ತವರು ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ. ಹೀಗೆ ಬಂದವರು ಮಕ್ಕಳನ್ನು ಶಾಲೆಗೆ ಸೇರಿಸಬೇಕು.
ಕೆಲವರು ಹೀಗೆ ವಾಪಸ್ ಆಗುವಾಗ ಗಲಭೆ ಪೀಡಿತ ಪ್ರದೇಶದಿಂದ ಶಾಲಾ ದಾಖಲಾತಿಗಾಗಿ ಅವಶ್ಯ ದಾಖಲೆಗಳು/ ಪ್ರಮಾಣ ಪತ್ರಗಳು/ ವರ್ಗಾವಣೆ ಪತ್ರಗಳು ಹಾಗೂ ಇನ್ನಿತರೆ ಶಾಲೆಗೆ ಸಂಬಂಧಿಸಿದ ದಾಖಲೆಗಳನ್ನು ತರುವುದು ಕಷ್ಟ. ಆದ್ದರಿಂದ ಶಿಕ್ಷಣ ಇಲಾಖೆ ಈ ಕುರಿತು ಸುತ್ತೋಲೆಯೊಂದನ್ನು ಹೊರಡಿಸಿದೆ.












Click it and Unblock the Notifications