ಮಂಗಳೂರು ವಂದೇ ಭಾರತ್‌ಗೆ ಗೋವಾ ಲಾಬಿ ಅಡ್ಡಿ: ಸುರತ್ಕಲ್ ಬದಲು ಸೆಂಟ್ರಲ್, ಬಂಟ್ವಾಳ ನಿಲುಗಡೆಗೆ ಕರಾವಳಿಗರ ಪಟ್ಟು
ಮಂಗಳೂರು: ಕರಾವಳಿ ಭಾಗದ ರೈಲ್ವೆ ಯೋಜನೆಗಳ ವಿಚಾರದಲ್ಲಿ ತಾರತಮ್ಯ ನಡೆಯುತ್ತಿದೆ ಎಂಬ ಆರೋಪ ಹೊಸದೇನಲ್ಲ. ಇದೀಗ 'ಮಂಗಳೂರು ವಂದೇ ಭಾರತ್' ರೈಲಿನ ನಿಲುಗಡೆ ವಿಚಾರ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಯನ್ನು ಮಂಗಳೂರು ಸೆಂಟ್ರಲ್ ಬದಲು ಕೇವಲ 'ಸುರತ್ಕಲ್'ಗೆ ಸೀಮಿತಗೊಳಿಸಲು ತೆರೆಮರೆಯಲ್ಲಿ ನಡೆಯುತ್ತಿರುವ 'ಗೋವಾ ಲಾಬಿ'ಯ ವಿರುದ್ಧ ಕರಾವಳಿಯ ಜನತೆ ಸಿಡಿದೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಲವಾದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ಗೋವಾ ಲಾಬಿ? ಸೆಂಟ್ರಲ್ ನಿಲ್ದಾಣಕ್ಕೆ ಯಾಕೆ ಹಿಂದೇಟು?
ಮಂಗಳೂರು ಸೆಂಟ್ರಲ್ (Mangaluru Central) ರೈಲು ನಿಲ್ದಾಣವು ಭೌಗೋಳಿಕವಾಗಿ ಒಂದು 'ಡೆಡ್ ಎಂಡ್' (Terminal) ಅಥವಾ ಕೊನೆಯ ನಿಲ್ದಾಣವಾಗಿದೆ. ಕೇರಳ ಕಡೆಯಿಂದ ಬಂದು ಗೋವಾ ಅಥವಾ ಮುಂಬೈಗೆ ಹೋಗುವ ರೈಲುಗಳು ಮಂಗಳೂರು ಸೆಂಟ್ರಲ್‌ಗೆ ಬಂದರೆ, ರೈಲಿನ ಎಂಜಿನ್ ಅನ್ನು ಕಳಚಿ, ಹಿಂದಕ್ಕೆ ಅಳವಡಿಸಿ (Engine reversal) ಮತ್ತೆ ಪ್ರಯಾಣ ಬೆಳೆಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಕನಿಷ್ಠ 30 ರಿಂದ 45 ನಿಮಿಷಗಳ ಕಾಲ ಸಮಯ ವ್ಯರ್ಥವಾಗುತ್ತದೆ. ಗೋವಾಕ್ಕೆ ಹೋಗುವ ಪ್ರವಾಸಿಗರು ಮತ್ತು ಪ್ರಯಾಣಿಕರ ಸಮಯವನ್ನು ಉಳಿಸಲು, ರೈಲುಗಳನ್ನು ಮಂಗಳೂರು ಸೆಂಟ್ರಲ್ ಒಳಗೆ ತರುವ ಬದಲು, ಹೊರವಲಯದಲ್ಲಿರುವ ಮಂಗಳೂರು ಜಂಕ್ಷನ್ ಅಥವಾ 'ಸುರತ್ಕಲ್' ನಿಲ್ದಾಣದ ಮೂಲಕ ನೇರವಾಗಿ ಕಳುಹಿಸಬೇಕು ಎಂಬುದು ಗೋವಾ ರಾಜಕಾರಣಿಗಳು ಮತ್ತು ಪ್ರವಾಸೋದ್ಯಮದ ಪಾಲುದಾರರ (Goa Lobby) ಪ್ರಮುಖ ಒತ್ತಡವಾಗಿದೆ. ರೈಲ್ವೆ ಇಲಾಖೆ ಕೂಡ ಗೋವಾ ಲಾಬಿಗೆ ಮಣಿದು, ಕರಾವಳಿಯ ಪ್ರಯಾಣಿಕರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂಬುದು ಸಾರ್ವಜನಿಕರ ಆರೋಪ.

ದೂರದ ಊರಿನವರ ಪಾಡೇನು?
ಗೋವಾ ಲಾಬಿಯ ಈ ವಾದ ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳಲ್ಲಿ ಕಟುವಾಗಿ ಟೀಕಿಸಲಾಗಿದೆ. ಬಿ.ಸಿ. ರೋಡ್, ಮುಡಿಪು, ಅಥವಾ ಬೆಳ್ತಂಗಡಿಯಂತಹ ಭಾಗದ ಜನರು ವಂದೇ ಭಾರತ್ ರೈಲು ಹಿಡಿಯಲು ಸಲುವಾಗಿ 30, 37 ಅಥವಾ 70 ಕಿಲೋಮೀಟರ್ ದೂರದವರೆಗೆ ಪ್ರಯಾಣಿಸಿ, ಸುರತ್ಕಲ್ ರೈಲು ನಿಲ್ದಾಣಕ್ಕೆ ಹೋಗಬೇಕೆಂಬುದು ಎಷ್ಟರಮಟ್ಟಿಗೆ ಸರಿ? ಇದಕ್ಕಿಂತ ಸುಲಭವಾಗಿ, ರೈಲನ್ನು ಮಂಗಳೂರು ಸೆಂಟ್ರಲ್‌ಗೆ ತಂದರೆ, ಅಲ್ಲಿ ಇಳಿಯುವ ಪ್ರಯಾಣಿಕರು ಕೊಲ್ಲೂರು, ಕುಂದಾಪುರ ಕಡೆಗೆ ಸುಲಭವಾಗಿ ಬಸ್ ಹಿಡಿದು ಹೋಗಬಹುದು ಎಂಬುದು ಸ್ಥಳೀಯರ ಸ್ಪಷ್ಟ ವಾದ.
ಮಂಗಳೂರನ್ನು ಬೆಂಗಳೂರಿಗೆ ಹೋಲಿಸದಿರಿ
ಮಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಬೆಂಗಳೂರಿಗೆ ಹೋಲಿಸಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಯಶವಂತಪುರ, ಕಂಟೋನ್ಮೆಂಟ್ ಅಥವಾ ಬೈಯಪ್ಪನಹಳ್ಳಿಯಂತಹ ಯಾವುದೇ ರೈಲು ನಿಲ್ದಾಣಕ್ಕೆ ಇಳಿದರೂ, ಅಲ್ಲಿಂದ ಮೆಟ್ರೋ, ಸಿಟಿ ಬಸ್ ಅಥವಾ ಆಟೋ ಮೂಲಕ ನಿಮಿಷಗಳಲ್ಲಿ ನಗರದ ಯಾವುದೇ ಮೂಲೆಗೆ ತಲುಪಬಹುದು. ಆದರೆ ಮಂಗಳೂರಿನಲ್ಲಿ ಹಾಗಿಲ್ಲ. ಇಲ್ಲಿ ಕೆಲವು ಊರುಗಳಿಗೆ ಬಸ್ ಸಿಗಲು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಕಾಯಲೇಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ ರೈಲು ಸೇವೆಯು ಎಲ್ಲರಿಗೂ ಅನುಕೂಲವಾಗುವ ಕೇಂದ್ರ ಸ್ಥಾನದಲ್ಲಿ (ಸಿಟಿ ಪಾಯಿಂಟ್) ಇರಬೇಕು. ಇದೇ ಕಾರಣಕ್ಕಾಗಿ ಸುರತ್ಕಲ್ ಅನ್ನು 'ಮಂಗಳೂರು ಉತ್ತರ' ಎಂದು ಮರುನಾಮಕರಣ ಮಾಡಿ, ಇದು ಮಂಗಳೂರೇ ಎಂದು ಬಿಂಬಿಸುವ ಹುನ್ನಾರ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬಂಟ್ವಾಳದಲ್ಲೂ ನಿಲುಗಡೆಗೆ ಆಗ್ರಹ
ಕೇವಲ ಮಂಗಳೂರು ಮಾತ್ರವಲ್ಲ, ಬಂಟ್ವಾಳ ರೈಲು ನಿಲ್ದಾಣದಲ್ಲೂ ವಂದೇ ಭಾರತ್‌ಗೆ ಸ್ಟಾಪ್ ನೀಡಬೇಕು ಎಂಬ ಬಲವಾದ ಬೇಡಿಕೆ ಕೇಳಿಬಂದಿದೆ. ಬಂಟ್ವಾಳವು ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುವ ನಿಲ್ದಾಣವಾಗಿದ್ದು, ಅದೇ ಕಾರಣಕ್ಕಾಗಿಯೇ ಕೇಂದ್ರ ಸರ್ಕಾರದ 'ಅಮೃತ್ ಭಾರತ್' ಯೋಜನೆಯಡಿ ಇದನ್ನು ಆಧುನೀಕರಣಗೊಳಿಸಲಾಗುತ್ತಿದೆ. ಆದ್ದರಿಂದ ಅಲ್ಲಿ ನಿಲುಗಡೆ ನೀಡುವುದು ಆ ಭಾಗದ ಪ್ರಯಾಣಿಕರಿಗೆ ಅತ್ಯಂತ ಸೂಕ್ತ.
ವಂದೇ ಭಾರತ್ ರೈಲಿನ ಟಿಕೆಟ್ ದರ ಕೊಂಚ ದುಬಾರಿಯಾಗಿರುವುದರಿಂದ, ಪ್ರಸ್ತುತ ಕೆಎಸ್‌ಆರ್‌ಟಿಸಿಯ 'ಐರಾವತ' ವೋಲ್ವೋ ಬಸ್‌ಗಳನ್ನು ಅವಲಂಬಿಸಿರುವ ವರ್ಗವೇ ಈ ರೈಲಿನ ಪ್ರಮುಖ ಗ್ರಾಹಕರು. ಈ ಪ್ರಯಾಣಿಕರೆಲ್ಲರೂ ನಗರ ಪ್ರದೇಶದಲ್ಲಿದ್ದರೆ ಮಾತ್ರ ರೈಲು ಸೇವೆಯನ್ನು ಬಳಸುತ್ತಾರೆ. ರೈಲು ಹತ್ತಲು ಎಲ್ಲೆಲ್ಲೋ ಅಲೆದಾಡಬೇಕು ಎಂದರೆ, ಆರಾಮಾಗಿ ಬಸ್ಸಿನಲ್ಲೇ ಹೋಗುವ, ಅಥವಾ ಸ್ವಂತ ಕಾರಿನಲ್ಲಿ ಹೋಗುವ ನಿರ್ಧಾರಕ್ಕೆ ಬರುತ್ತಾರೆ.
"ಗೋವಾ ಪ್ರಯಾಣಿಕರ ಕೇವಲ ಅರ್ಧ ಗಂಟೆ ಸಮಯ ಉಳಿಸಲು ಮಂಗಳೂರಿನವರು ತಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಕೇ? ಸ್ವಲ್ಪ ನಂಜು ಕಡಿಮೆ ಮಾಡಿ, ಜೀವಕ್ಕೆ ಒಳ್ಳೆಯದು" ಎಂದು ದೀಕ್ಷಿತ್ ಕೊನ್ನಂಜೆ ಎನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. ಕರಾವಳಿಯ ರೈಲ್ವೆ ಹೋರಾಟಗಾರರು ಮತ್ತು ಪ್ರಯಾಣಿಕರ ಈ ನ್ಯಾಯಬದ್ಧ ಬೇಡಿಕೆಗೆ ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications