Rain Alert: ರಾಜ್ಯದಲ್ಲಿ ಭರ್ಜರಿ ಮಳೆ: ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಮಂಗಳೂರು, ಮೇ 27: ಎರಡೂವರೆ ದಶಕಗಳ ಬಳಿಕ ಕರ್ನಾಟಕದಲ್ಲಿ ಮಾನ್ಸೂನ್ ಅವಧಿಗೂ ಮುಂಚೆನೇ ಎಂಟ್ರಿ ಕೊಟ್ಟಿದೆ. ರಾಜ್ಯಕ್ಕೆ ಅವಧಿ ಪೂರ್ವಕ್ಕೂ ಮೊದಲೇ ಎಂಟ್ರಿ ಕೊಟ್ಟಿರೋ ಮುಂಗಾರು ತನ್ನ ಆರ್ಭಟವನ್ನ ಆರಂಭಿಸಿದ್ದು, ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ. ಇನ್ನೂ ಕೃಷಿ ಚಟುವಟಿಕೆಯನ್ನ ರೈತರು ಆರಂಭಿಸಿದ್ರೆ, ಇತ್ತ ಅಬ್ಬರಿಸಿ ಬೊಬ್ಬರಿಯುತ್ತಿರೋ ವರುಣ ಅವಾಂತರ ಸೃಷ್ಟಿಸ್ತಾ ಜನರನ್ನ ಹೈರಾಣಾಗಿಸಿದ್ದಾನೆ.
ಇನ್ನೂ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಕರಾವಳಿ ಭಾಗದ ಜನಜೀವನ ಅಸ್ತವ್ಯಸ್ತವಾಗಿದೆ. ಹವಾಮಾನ ಇಲಾಖೆ ಮೇ 28ರವರೆಗೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ರೆಡ್ ಅಲರ್ಟ್ ಇದ್ದು, ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.ಭಾರೀ ಮಳೆಯಾಗುವ ಮುನ್ಸೂಚನೆಯನ್ನ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮೇ 27 ಮತ್ತು ಮೇ 28 ರಂದು ಅಂಗನವಾಡಿ ಸೇರಿದಂತೆ ದ್ವಿತೀಯ ಪಿಯುಸಿವರೆಗಿನ ಎಲ್ಲಾ ಶಾಲಾ- ಕಾಲೇಜಿಗಳಿಗೆ ರಜೆ ಘೋಷಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಂದಿನಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮೇ 28ರ ಬಳಿಕ ವಾತಾವರಣ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇನ್ನೂ ರಾಜ್ಯದಲ್ಲಿ ಒಂದು ವಾರಗಳ ಕಾಲ(6 ದಿನಗಳ) ಭಾರೀ ಮಳೆಯಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಮಳೆಯ ಅಲರ್ಟ್ ನೀಡಿ ಎಚ್ಚರಿಕೆ ನೀಡಲಾಗಿದೆ. ಕರಾವಳಿ, ಮಲೆನಾಡಿನ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಿದ್ರೆ, ಇತ್ತ ಬೆಂಗಳೂರಿಗೆ ಇಂದು ಯಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಹಾಸನ, ಕೊಡಗು, ಬೆಳಗಾವಿ, ಬೀದರ್, ಕಲಬುರಗಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬಾಗಲಕೋಟೆ, ಧಾರವಾಡ, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಹಾವೇರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬಳ್ಳಾರಿಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.












Click it and Unblock the Notifications