ಸಾವಿನ ಸೆಳೆಯಾಗಿರುವ ಮಂಚನಬೆಲೆ
ಮಾಗಡಿ, ಅ.15:''ಅಂದು ಮುಳುಗಿದರು ಟೈಟಾನಿಕ್ ಹಡಗಿನಲ್ಲಿ, ಇಂದು ಮುಳುಗುತ್ತಿರುವರು ಹುಚ್ಚು ಪ್ರೀತಿಯಲ್ಲಿ'' ಎಂಬ ಕ್ಯಾಪ್ಶನ್ ಇರುವ ಆಟೋ ದಡದಲ್ಲೇ ನಿಂತಿತ್ತು. ಆದರೆ ಅದೇ ಆಟೋದಲ್ಲಿ ಬಂದಿದ್ದ ಐವರಲ್ಲಿ ನಾಲ್ಕು ಮಂದಿ ನೀರಿನಲ್ಲಿ ಮುಳಗಿ ಪ್ರಾಣವನ್ನ ಕಳೆದುಕೊಂಡು ಆಟೋ ಮೇಲಿದ್ದ ಕ್ಯಾಪ್ಶನ್ ನಂತೆ ಮೋಜು ಮಸ್ತಿ ಮಾಡಲು ಹೋಗಿ ಇವರೇ ಮುಳುಗಿಹೋಗಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಮಂಚನಬೆಲೆ ಜಲಾಶಯದಲ್ಲಿ ವಿಜಯದಶಮಿ ರಜೆಕಳೆಯಲು ಬಂದಿದ್ದ ಐವರಲ್ಲಿ ನಾಲ್ಕು ಮಂದಿ ನೀರು ಪಾಲಾಗಿದ್ದಾರೆ. ಮೂಲತಃ ನಾಗಮಂಗಲ ತಾಲ್ಲೂಕಿನ ನರಗನಹಳ್ಳಿ ಗ್ರಾಮದವರಾದ ಅಶೋಕ್, ಮೋಹನ್, ರಘು, ಚರಣ್ ಎಂಬ ನಾಲ್ವರು ಜಲಾಶಯದ ದಡದಲ್ಲಿ ಮೀನುಹಿಡಿಯುವವರು ಇಟ್ಟಿದ್ದ ತೆಪ್ಪದಲ್ಲಿ ಮೋಜಿಗಾಗಿ ಜಲಾಶಯದೊಳಗೆ ಇಳಿದು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದಾರೆ.
ಇವರೆಲ್ಲರೂ ತಮ್ಮ ಬದುಕಿನ ಬಂಡಿ ತಳ್ಳಲು ಬೆಂಗಳೂರಿನ ಶ್ರೀನಗರ ಮತ್ತು ಮೂಡಲಪಾಳ್ಯದಲ್ಲೇ ವಾಸವಾಗಿದ್ದರು. ಈ ಸಂಧರ್ಭದಲ್ಲಿ ಜಲಾಶಯದ ಮಧ್ಯಭಾಗಕ್ಕೆ ಹೋಗಿ ತೆಪ್ಪ ಮಗುಚಿದ್ದರಿಂದ ಈಜಲು ಬಾರದ ನಾಲ್ವರು ಪ್ರಾಣಕಳೆದುಕೊಂಡಿದ್ದಾರೆ. ಇವರೊಂದಿಗೆ ಹೋಗಿದ್ದ ಮತ್ತೊಬ್ಬ ದಿನೇಶ್ ದಡದಲ್ಲಿ ಶ್ಯಾಂಪು ಹಾಕಿಕೊಳ್ಳಲು ಬಂದಿದ್ದರಿಂದ ಅದೃಷ್ಠವಶಾತ್ ಬಚಾವಾಗಿದ್ದಾನೆ. ದುರಂತ ಸಾವು ಹಾಗೂ ಈ ಜಲಾಗಾರದಲ್ಲಿ ಆಗುತ್ತ್ತಿರುವ ಬಲಿಗೆ ಕಾರಣವೇನು ಎಂಬುದರ ಬಗ್ಗೆ ವಿಶ್ಲೇಷಣೆ ಇಲ್ಲಿದೆ ಓದಿ

ಮೋಜು ತಂದ ಸಾವು
ಮೃತರಲ್ಲಿ ಅಶೋಕ್, ಚರಣ್, ರಘು, ಮೋಹನ್, ದಿನೇಶ್ ಎಲ್ಲರೂ ಒಂದೇ ಊರಿನವರಾಗಿದ್ದರಿಂದ ರಜಾದಿನಗಳಲ್ಲಿ ಆಟೋದಲ್ಲಿ ಪಿಕ್ ನಿಕ್ ಹೋಗುವುದನ್ನ ರೂಢಿ ಮಾಡಿಕೊಂಡಿದ್ದರು. ನಿನ್ನೆಯೂ ಕೂಡ ಎಲ್ಲರೂ ಮಂಚನಬೆಲೆಗೆ ಬಂದಿದ್ದಾರೆ. ಗೇಟ್ ಬಳಿ ಸಾಮಾನ್ಯವಾಗಿ ಒಳಪ್ರವೇಶಿಸದಂತೆ ರಕ್ಷಣಾ ಸಿಬ್ಬಂದಿ ಇರುತ್ತಾರೆ. ಆದರೆ ನಿನ್ನೆ ವಿಜಯದಶಮಿ ಹಬ್ಬದ ಅಂಗವಾಗಿ ರಕ್ಷಣಾ ಸಿಬ್ಬಂದಿಗಳು ಮನೆಗೆ ಹೋಗಿದ್ದಾರೆ.
ಆ ಸಂಧರ್ಭದಲ್ಲಿ ಜಲಾಶಯದ ಬಳಿ ತೆರಳಿದ ಐವರು ದಡದಲ್ಲೇ ಆಟೋ ನಿಲ್ಲಿಸಿ ಸುಮಾರು ಹೊತ್ತು ದಡದಲ್ಲೇ ಆಟವಾಡಿದ್ದಾರೆ. ನಂತರ ಮೀನುಗಾರರು ಬಳಸುವ ತೆಪ್ಪವನ್ನ ತೆಗೆದುಕೊಂಡು ಜಲಾಶಯಕ್ಕೆ ಇಳಿದು ಹಾಯಿಗೋಲಿನ ಮೂಲಕ ತೆರಳುತ್ತಿದ್ದಾಗ ತೆಪ್ಪ ಮಗುಚಿದ್ದರಿಂದ ಎಲ್ಲರೂ ನೀರುಪಾಲಾದರು.

ಈಜು ಬರುತ್ತಿರಲಿಲ್ಲ
ಸಾವನ್ನಪ್ಪಿರುವ ಚರಣ್,ಅಶೋಕ್, ರಘು ಎಲ್ಲರೂ ಅವರ ತಂದೆ ತಾಯಂದಿರಿಗೆ ಒಬ್ಬೊಬ್ಬರೇ ಮಕ್ಕಳಾಗಿದ್ದವರು. ಮೋಹನ್‍ಗೆ ಸಹೋದರನಿದ್ದಾನೆ. ಎಲ್ಲರೂ ಒಬ್ಬೊಬ್ಬರೇ ಮಕ್ಕಳಾಗಿದ್ದರಿಂದ ಅವರ ಪೋಷಕರು ತುಂಬಾ ಪ್ರೀತಿಯಿಂದ ಸಲುಹಿದ್ದರು. ನೀರಿನ ಬಳಿ ಹೋದರೆ ಅಪಾಯ ಎಂದು ಅವರ ಪೋಷಕರುಗಳು ಈಜನ್ನ ಕೂಡ ಕಲಿಯಲು ಬಿಟ್ಟಿರಲಿಲ್ಲ. ಆದ್ರೆ ವಿಧಿಯಾಟದಲ್ಲಿ ಕೊನೆಗೂ ಅವರೂ ನೀರಿನಲ್ಲೇ ಮುಳುಗಿ ಪ್ರಾಣಕಳೆದುಕೊಂಡಿದ್ದಾರೆ

ಗರ್ಭಿಣಿ ಶಪಥ/ಶಾಪಕ್ಕೆ ಆಹುತಿ!
ಮಂಚನಬೆಲೆ ಅಣೆಕಟ್ಟು ಕಟ್ಟಬೇಕಾದ್ರೆ ಗರ್ಭಿಣಿ ಹೆಣ್ಣೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳಂತೆ, ತನ್ನ ಪ್ರಾಣಪಕ್ಷಿ ಹಾರಿಹೋಗುವ ಮುನ್ನ ''ಒಂದೂವರೆ ಸೇರು ಹುರುಳಿಕಾಳಷ್ಟು ಮಂದಿನ್ನ ಬಲಿತೆಗೆದುಕೊಳ್ತೇನೆ'' ಅಂತ ಶಪಥ/ ಶಾಪ ಮಾಡಿದ್ದಳೆಂಬ ಕಥೆಯನ್ನ ಊರಿನ ಹಿರಿಯರು ಹೇಳುತ್ತಾರೆ. ಅವಳು ಮಾಡಿದ ಶಪಥದಂತೆ ಅಣೆಕಟ್ಟು ಕಟ್ಟಿದಾಗಿನಿಂದಲೂ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪುವವರು, ಆತ್ಮಹತ್ಯೆ ಮಾಡಿಕೊಳ್ಳುವವರು, ಮೋಜುಮಸ್ತಿಗಾಗಿ ಬಂದು ನೀರುಪಾಲಾಗುವವರ ಸಂಖ್ಯೆ ಹೆಚ್ಚಾಗಿತ್ತು. ಅಂದಿನಿಂದ ಇಂದಿನವರೆಗೂ ಸಾವಿನ ಸರಪಳಿ ಮುಂದುವರೆದಿದೆ.

ಗಂಗೆಗೆ ಶಾಂತಿ
ಜಲಾಶಯದಲ್ಲಿ ಮೀನು ಹಿಡಿಯುವವರು ಪ್ರತಿವರ್ಷ ಗಂಗೆ ಪೂಜೆ ನಡೆಸುವುದು ವಾಡಿಕೆಯಾಗಿದೆ. ಗಂಗೆಗೆ ಶಾಂತಿ ಮಾಡುವ ಉದ್ದೇಶದಿಂದ ಪ್ರತಿವರ್ಷ ಜಲಾಶಯದ ದಡದಲ್ಲಿ ಗುಡ್ಲು ಹಾಕಿ ಗಂಗೆತಾಯಿಗೆ ಪೂಜೆ ಸಲ್ಲಿಸಿದರೆ ಮೀನುಗಳು ಹೆಚ್ಚಾಗಿ ಸಿಗುತ್ತವೆ.
ತೆಪ್ಪದಲ್ಲಿ ಹೋದಾಗ ಯಾವುದೊಂದು ಸಮಸ್ಯೆ ಆಗುವುದಿಲ್ಲವೆಂಬ ನಂಬಿಕೆ ಇದೆ. ಆದ್ದರಿಂದ ಗಂಗೆತಾಯಿಗೆ ಪೂಜೆ ಸಲ್ಲಿಸಿಯೇ ಈ ಜಲಾಶಯದ ನೀರಿಗಿಳಿಯುತ್ತಾರೆ. ಗಂಗೆಪೂಜೆ ಮಾಡದೇ ಮೋಜು ಮಸ್ತಿ ಮಾಡಲು ಬರುವ ಬಹುತೇಕ ಮಂದಿಯನ್ನ ಗರ್ಭಿಣಿ ಶಪಥದಂತೆ ಆಹುತಿ ತೆಗೆದುಕೊಳ್ಳುತ್ತಾಳೆಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
5 ವರ್ಷದಲ್ಲಿ 75 ಸಾವು
ಕಳೆದ ಐದು ವರ್ಷಗಳಿಂದ ಜಲಾಶಯದಲ್ಲಿ ನೂರಾರು ಮಂದಿ ನೀರುಪಾಲಾಗಿದ್ದಾರೆ. ಗರ್ಭಿಣಿಯ ಶಪಥದಂತೆ ಕಾಕತಾಳೀಯ ಎನ್ನುವ ರೀತಿಯಲ್ಲಿ ಕೆರೆಯಲ್ಲಿ ಈಜಲು ಹೋದವರು ಯಮರಾಯನ ಮೃತ್ಯುಪಾಶಕ್ಕೆ ಸಿಲುಕುತ್ತಿದ್ದಾರೆ. ಅದರಲ್ಲಿ ಬಹುತೇಕ ಮಂದಿ 20ರಿಂದ 30ರ ವಯಸ್ಸಿನೊಳಗಿರುವವರೇ ಹೆಚ್ಚಾಗಿದ್ದಾರೆ.
ರಜಾ ದಿನಗಳಲ್ಲಿ ಕುಡಿತ ಮೋಜು ಮಸ್ತಿ ಎಂದು ಕಾಲ ಕಳೆಯಲು ಬರುವ ಮಂದಿಯೇ ಹೆಚ್ಚಾಗಿದ್ದಾರೆ. ಮಂಚನಬೆಲೆ ಜಲಾಶಯ ನೀರಿಗಿಳಿದವರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಜಲಾಶಯಕ್ಕೆ ಬಾರದಂತೆ ಪೊಲೀಸ್ ರಕ್ಷಣೆಯನ್ನ ಒದಗಿಸಿದ್ದರೂ ಕೂಡ ಕಣ್ಣು ತಪ್ಪಿಸಿ ಬರುವ ಮಂದಿ ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.

ನಿರ್ಬಂಧಿತ ಪ್ರದೇಶ
ಕಳೆದ 3 ವರ್ಷಗಳ ಹಿಂದೆ ಜಲಾಶಯ ಪ್ರವೇಶ ಮಾಡದಂತೆ ಅಂದಿನ ಎಸ್.ಪಿ ಯಾಗಿದ್ದಂತಹ ಬಿಸ್ನಳ್ಳಿಯವರು ಗೇಟ್ ಅಳವಡಿಸಿ ನಿರ್ಬಂಧಿತ ಪ್ರದೇಶವೆಂದು ಘೋಷಣೆ ಮಾಡಿದ್ದರು. ಇದೇ ಮಂಚನಬೆಲೆ ಜಲಾಶಯದ ಬಳಿ ರೇವ್ ಪಾರ್ಟಿಯೊಂದು ನಡೆದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ವಿದೇಶೀಯರು ಸೇರಿದಂತೆ ನೂರಾರು ಮಂದಿಯನ್ನ ಪೊಲೀಸರು ವಶಕ್ಕೆ ಒಪ್ಪಿಸಿದ್ದರು.
ಪ್ರೇಮಿಗಳಿಬ್ಬರು ಬಂದಿದ್ದ ಸಂಧರ್ಭದಲ್ಲಿ ಪ್ರಿಯತಮನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಹುಡುಗಿಯ ಮೇಲೆ ಅತ್ಯಾಚಾರ ಯತ್ನ ಮಾಡಿದ್ದಂತಹ ಘಟನೆಯೂ ಇಲ್ಲಿ ನಡೆದಿತ್ತು. ಇದರಿಂದ ಮಂಚನಬೆಲೆ ಜಲಾಶಯ ಪ್ರದೇಶವನ್ನ ಸೂಕ್ಷ್ಮಪ್ರದೇಶವೆಂದು ಪರಿಗಣಿಸಲಾಗಿತ್ತು.

ಅನಾಹುತಗಳು ನಡೆಯುತ್ತಲೇ ಇವೆ
ವಾರಾಂತ್ಯದ ದಿನಗಳು ಮತ್ತು ರಜಾದಿನಗಳಲ್ಲಿ ಬರುವಂತಹ ಮಂದಿ ಇಲ್ಲಿ ಈಗಲೂ ಕಣ್ತಪ್ಪಿಸಿ ಅನೈತಿಕ ಚಟುವಟಿಕೆಗಳನ್ನ ನಡೆಸುತ್ತಿರುವುದರಿಂದ ಈ ರೀತಿಯ ಅನಾಹುತಗಳು ನಡೆಯುತ್ತಲೇ ಇವೆ.
ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿ ಅಶೋಕ್, ಮೋಹನ್, ಚರಣ್, ರಘು ಶವವನ್ನ ಹೊರತೆಗೆದಿದ್ದಾರೆ, ಸಿಪಿಐ ಎಲಗಯ್ಯ, ಪಿಎಸೈ ಜಗದೀಶ್ ಸ್ಥಳ ಪರಿಶೀಲನೆ ನಡೆಸಿದರು.ಫೋಟೋ : ನಾಲ್ವರ ಸಾವಿಗೆ ಸಾಕ್ಷಿಯಾಗಿರುವ ದಿನೇಶ್ ಪಿಎಸೈ ಜಗದೀಶ್ ರಿಗೆ ಘಟನೆಯ ಬಗ್ಗೆ ವಿವರಿಸುತ್ತಿರುವುದು.










Click it and Unblock the Notifications