ಮಲ್ಲಿಕಾರ್ಜುನ್ ಖರ್ಗೆ ಭೇಟಿ ನೀಡಿದ ಪ್ರದೇಶ ಶುದ್ಧೀಕರಣ, ಜೀವಂತವಿರುವ ಜಾತಿ ಪದ್ಧತಿಯ ಕರಾಳತೆಗೆ ಸಾಕ್ಷಿ: ಡಾ.ಜಿ.ಪರಮೇಶ್ವರ್
ಉತ್ತರಾಖಂಡದ ಹಲ್ದ್‌ವಾನಿಯ ರಾಮ ಲೀಲಾ ಮೈದಾನಕ್ಕೆ ಆಗಸ್ಟ್ 8 ರಂದು ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಖರ್ಗೆಯವರು ದಲಿತ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ ಅವರ ಕಾರ್ಯಕ್ರಮ ನಡೆದಿದ್ದ ಜಾಗವನ್ನು ಶುದ್ಧೀಕರಣ ಯಾಗದ ಮೂಲಕ ಸ್ವಚ್ಛ ಮಾಡಲಾಗಿದೆ ಎನ್ನುವ ವಿಚಾರ ತಿಳಿದು ಮನಸ್ಸಿಗೆ ಘಾಸಿಯಾಯಿತು. ಭಾರತೀಯರು ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿ ವಿಶ್ವದಾಖಲೆ ಬರೆದರೂ, ಸಮಾಜ ಇನ್ನೂ ತನ್ನ ಭಾಗವಾಗಿರುವ ದಲಿತನನ್ನು ಮುಟ್ಟಲು ತಯಾರಿಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ. ಇವು ಭಾರತೀಯ ಸಮಾಜದ ಎರಡು ಮುಖಗಳು ಎಂದು ಹೇಳಲು ದುಃಖವಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ನಮ್ಮ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಜಾತಿಯ ಹೆಸರಿನಲ್ಲಿ ನಡೆದಿರುವ ಈ ಅವಮಾನಕರ, ಅಮಾನವೀಯ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ದೇಶದಲ್ಲಿ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಗಳ ಕರಾಳ ಆಚರಣೆ ಇಂದಿಗೂ ಜೀವಂತವಾಗಿವೆ ಎನ್ನುವುದಕ್ಕೆ ಇದು ಸಾಕ್ಷಿ.
ಬಿಜೆಪಿ ಆಡಳಿತದಲ್ಲಿ ರಾಜ್ಯ ಸಭೆಯ ವಿಪಕ್ಷ ನಾಯಕನಿಗೇ ಈ ಪರಿಸ್ಥಿತಿಯಾದರೆ, ಇನ್ನು ಸಾಮಾನ್ಯ ದಲಿತರ ಪಾಡೇನು? ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಮತ್ತೆ ಮನುಸ್ಮೃತಿಯ ಕಾಲಕ್ಕೆ ಮರಳುತ್ತಿದೆಯೇ? ಎನ್ನುವ ಆತಂಕ ಒಬ್ಬ ದಲಿತನಾಗಿ ನನ್ನಲ್ಲಿ ಕಾಡುತ್ತಿದೆ.

Mallikarjun Kharge: ಕಾನೂನಿನ ಮೂಲಕ ಅಂತ್ಯ ಹಾಡಬೇಕು
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಾವು ಕಂಡುಂಡ ಅವಮಾನ, ಅಸಮಾನತೆಗಳಿಗೆ ಸಂವಿಧಾನದ ರೂಪದಲ್ಲಿ ಪರಿಹಾರವನ್ನು ನೀಡಿದ್ದಾರೆ. ಶೋಷಿತ ಸಮುದಾಯಗಳಿಗೆ ಘನತೆಯ ಬದುಕಿನ ಹಾದಿ ತೋರಿದ್ದಾರೆ. ಸಂವಿಧಾನದ ಮೂಲಕ ಇಂತಹ ಅನಿಷ್ಟಗಳ ನಿರ್ಮೂಲನೆಗೆ ನಾವು ನಿರಂತರ ಶ್ರಮಿಸುತ್ತಿದ್ದರೂ, ಈ ನೆಲದ ಕಾನೂನನ್ನು ಗೌರವಿಸದ ಪಟ್ಟಭದ್ರ ಹಿತಾಸಕ್ತಿಗಳು ಜಾತಿ ಪದ್ಧತಿ, ಅಸ್ಪೃಶ್ಯತೆ, ಮೌಢ್ಯ ಕಂದಾಚಾರಗಳನ್ನು ಈಗಲೂ ಜೀವಂತವಾಗಿಡಲು ಕೆಲಸ ಮಾಡುತ್ತಿವೆ. ಇಂತವರು ಸಂವಿಧಾನ ವಿರೋಧಿಗಳು ಮಾತ್ರವಲ್ಲ, ರಾಷ್ಟ್ರವಿರೋಧಿಗಳು ಕೂಡ ಹೌದು. ಅವಕಾಶ ಸಿಕ್ಕಾಗಲೆಲ್ಲ ತಮ್ಮೊಳಗಿನ ಜಾತಿ ಕ್ರೌರ್ಯವನ್ನು ಹೊರಗೆಡವುತ್ತಿದ್ದಾರೆ. ಇದಕ್ಕೆ ಕಾನೂನಿನ ಮೂಲಕ ಅಂತ್ಯ ಹಾಡದೆ ಹೋದರೆ ಮುಂದಿನ ಪೀಳಿಗೆ ಖಂಡಿತಾ ನಮ್ಮನ್ನು ಕ್ಷಮಿಸುವುದಿಲ್ಲ.
ಶುದ್ಧೀಕರಣದ ನೆಪದಲ್ಲಿ ಸಂವಿಧಾನಬಾಹಿರವಾದ ಅಸ್ಪೃಶ್ಯತೆಯನ್ನು ಆಚರಣೆ ಮಾಡಿರುವ, ಆ ಮೂಲಕ ಮಲ್ಲಿಕಾರ್ಜುನ ಖರ್ಗೆಯವರ ಘನತೆಗೆ ಚ್ಯುತಿಯುಂಟು ಮಾಡಿರುವ ದುಷ್ಟರ ಮೇಲೆ ಮೊಕದ್ದಮೆಯನ್ನು ದಾಖಲಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ.
ಇಂದು ಬಿಜೆಪಿ ಪಕ್ಷದಲ್ಲಿರುವ ಶೋಷಿತ, ದಲಿತ, ತಳ ಸಮುದಾಯಗಳ ಜನರು ತಾವು ಎಂಥವರ ಕೈ ಬಲಪಡಿಸುತ್ತಿದ್ದೇವೆ ಎನ್ನುವುದನ್ನು ಒಮ್ಮೆ ಆತ್ಮವಿಮರ್ಷೆಗೆ ಒಡ್ಡಿಕೊಳ್ಳಲು ಇದು ಸಕಾಲ ಎಂದೂ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.


Click it and Unblock the Notifications
