
ರಾಜ್ಯಸಭೆ ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆಯೇ ಮಲ್ಲಿಕಾರ್ಜುನ ಖರ್ಗೆ?
ನವದೆಹಲಿ , ಡಿ. 02: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗಾಗಿಯೇ ಪಕ್ಷ ತನ್ನ ಒಬ್ಬ ವ್ಯಕ್ತಿ, ಒಂದು ಹುದ್ದೆ ನೀತಿಯನ್ನು ಉಲ್ಲಂಘಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರ ಸ್ಥಾನಕ್ಕೆ ಇನ್ನು ಯಾರನ್ನೂ ಬದಲಿಸಲು ಕಾಂಗ್ರೆಸ್ ನಿರ್ಧರಿಸಿಲ್ಲ. ಈ ಹಿನ್ನೆಲೆ ಅವರೇ ವಿರೋಧ ಪಕ್ಷದ ನಾಯಕರಾಗಿ ಮುಂದುವರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮಲ್ಲಿಕಾರ್ಜುನ ಖರ್ಗೆಯವರು ಎರಡು ಹುದ್ದೆಗಳನ್ನು ಅಲಂಕರಿಸಿದರೆ, ಈ ಹಿಂದೆ ರಾಹುಲ್ ಗಾಂಧಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿಚಾರದಲ್ಲಿ ಉಲ್ಲೇಖಿಸಿದ್ದ "ಒಬ್ಬ ವ್ಯಕ್ತಿ, ಒಂದು ಹುದ್ದೆ" ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆ.

ಸಭೆಗಿಲ್ಲ ದಿಗ್ವಿಜಯ ಸಿಂಗ್, ಪಿ ಚಿದಂಬರಂಗೆ ಆಹ್ವಾನ
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಭಾನುವಾರ ಕಾಂಗ್ರೆಸ್ ಸಂಸದೀಯ ಪಕ್ಷದ ತಂತ್ರಗಾರಿಕೆ ಗುಂಪಿನ ಸಭೆಯನ್ನು ಕರೆದಿದ್ದಾರೆ. ರಾಜ್ಯಸಭೆಯಿಂದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ಕೆಸಿ ವೇಣುಗೋಪಾಲ್ ಅವರನ್ನು ಮಾತ್ರ ಸಭೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬದಲಿಗೆ ಸ್ಥಾನವನ್ನು ನಿರ್ವಹಿಸಲು ಮುಂಚೂಣಿಯಲ್ಲಿರುವ ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್ ಮತ್ತು ಪಿ ಚಿದಂಬರಂ ಅವರನ್ನು ಸಭೆಗೆ ಆಹ್ವಾನಿಸಲಾಗಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಚಳಿಗಾಲದ ಅಧಿವೇಶನದವರೆಗೂ ಖರ್ಗೆ ಮುಂದುವರಿಕೆ ಸಾಧ್ಯತೆ
ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಮುಖ್ಯಸ್ಥ ಹುದ್ದೆಗೆ ನಾಮಪತ್ರ ಸಲ್ಲಿಸುವ ಮೊದಲು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಮೂಲಗಳ ಪ್ರಕಾರ ಅವರು ಕನಿಷ್ಠ ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವವರೆಗೂ ಈ ಸ್ಥಾನದಲ್ಲಿ ಮುಂದುವರಿಯಬಹುದು ಎಂದಿವೆ.
ಅಲ್ಪಾವಧಿಯ ಚಳಿಗಾಲದ ಅಧಿವೇಶನ ಮುಗಿದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಹಲವು ಬದಲಾವನೆಗಳಾಗಬಹುದು ಎಂದು ಮೂಲಗಳು ತಿಳಿಸಿವೆ.

ಜೈರಾಮ್ ರಮೇಶ್, ಅಧಿರಂಜನ್ ಚೌಧರಿಗೆ ಎರಡೆರಡು ಹುದ್ದೆ!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಲ್ಲದೆ, ಕಾಂಗ್ರೆಸ್ ಒಬ್ಬ ವ್ಯಕ್ತಿ ಒಂದು ಹುದ್ದೆ ನೀತಿಗೆ ವ್ಯತಿರಿಕ್ತವಾಗಿ ಇನ್ನೂ ಎರಡು ವಿವಾದಗಳು ಇವೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಅಧಿರಂಜನ್ ಚೌಧರಿ ಅವರು ಪಕ್ಷದ ಬಂಗಾಳದ ಅಧ್ಯಕ್ಷರೂ ಆಗಿದ್ದಾರೆ. ಇತ್ತ, ಜೈರಾಮ್ ರಮೇಶ್ ರಾಜ್ಯಸಭೆಯ ಮುಖ್ಯ ಸಚೇತಕ ಮತ್ತು ಕಾಂಗ್ರೆಸ್ ಸಂವಹನಗಳ ಮುಖ್ಯಸ್ಥರಾಗಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಮತ್ತು ಫೆಬ್ರವರಿಯಲ್ಲಿ ಉದಯಪುರ ಅಧಿವೇಶನದಲ್ಲಿ ಕಾಂಗ್ರೆಸ್ ತಾನು ಬದ್ಧವಾಗಿರುವ ಒಬ್ಬ ವ್ಯಕ್ತಿ ಒಂದು ಹುದ್ದೆ ನೀತಿಗೆ ದೃಢವಾಗಿರುತ್ತದೆ ಎಂದು ರಾಹುಲ್ ಗಾಂಧಿ ಗಟ್ಟಿಯಾಗಿ ಹೇಳಿದ್ದರು.

ಗೆಹ್ಲೋಟ್‌ಗೆ ಅಧ್ಯಕ್ಷ ಸ್ಥಾನ ಕಸಿದ ಒಬ್ಬ ವ್ಯಕ್ತಿ ಒಂದು ಹುದ್ದೆ ನೀತಿ
ರಾಹುಲ್ ಗಾಂಧಿ ಹೇಳಿದ ಒಬ್ಬ ವ್ಯಕ್ತಿ ಒಂದು ಹುದ್ದೆ ಸಂದೇಶವು ಅಶೋಕ್ ಗೆಹ್ಲೋಟ್ ಅವರಿಗೆ ಶಾಪವಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ತಾನು ಎಂದು ಹೇಳಿಕೊಂಡಿದ್ದ ಸಂದರ್ಭದಲ್ಲಿ ಅವರಿಗೆ ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಇಷ್ಟವಿರಲಿಲ್ಲ.
ಆದರೆ. ಕಾಂಗ್ರೆಸ್ ನೀತಿಯಿಂದಾಗಿ ಗೆಹ್ಲೋಟ್ ಅವರು ಅಧ್ಯಕ್ಷರಾದರೆ, ರಾಜಸ್ಥಾನದಲ್ಲಿ ಅವರ ಪ್ರತಿಸ್ಪರ್ಧಿ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುವ ಸಂಭವವಿತ್ತು. ಇದನ್ನು ವಿರೋಧಿಸಿ ಗೆಹ್ಲೋಟ್ ಅವರ ನಿಕಟ ಕಾಂಗ್ರೆಸ್ ಶಾಸಕರು ರಾಜೀನಾಮೆ ಎಂಬ ದೊಡ್ಡ ಬಂಡಾಯವನ್ನೇ ಆರಂಭಿಸಿದ್ದರು. ಇದರಿಂದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಅಶೋಕ್ ಗೆಹ್ಲೋಟ್ ಹಿಂದೆ ಸರಿಯಬೇಕಾಯಿತು.
ಬಳಿಕ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ಅಧಿಕೃತ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸಿ, ಚುನಾವನೆಯಲ್ಲಿ ಗೆದ್ದು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗ ಅವರಿಗಾಗಿ ಕಾಂಗ್ರೆಸ್ ತನ್ನ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ.
(ಮಾಹಿತಿ ಕೃಪೆ- ಎನ್‌ಡಿಟಿವಿ)