ಸಿಎಂ ಬದಲಾವಣೆ ಬಗ್ಗೆ ಶಾಕಿಂಗ್ ಸುಳಿವು ಕೊಟ್ಟ ಮಲ್ಲಿಕಾರ್ಜುನ್ ಖರ್ಗೆ, ಹೇಳಿದ್ದೇನು?
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕೂಗು ಮೊದಲಿನಿಂದಲೂ ಇದೆ. ಇದೇ ವರ್ಷ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾಗ್ತಾರೆ ಎಂದು ಹಲವರು ಭವಿಷ್ಯ ನುಡಿದಿದ್ದರೆ, ಇನ್ನೂ ಕೆಲವರು ಸೆಪ್ಟೆಂಬರ್‌ನಲ್ಲೇ ಕ್ರಾಂತಿಯಾಗುತ್ತೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆ, ಡಿಕೆ ಶಿವಕುಮಾರ್ ಹೊಸ ಸಿಎಂ ಆಗುತ್ತಾರೆ ಎಂಬ ಚರ್ಚೆಗಳು ಗರಿಗೆದರಿವೆ. ಈ ಬಗ್ಗೆ ಖುದ್ದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಪ್ರತಿಕ್ರಿಯಿಸಿದ್ದು, ಸಿಎಂ ಬದಲಾವಣೆ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಖರ್ಗೆ, ಸುರ್ಜೇವಾಲಾ ಅವರು ಸದ್ಯ ರಾಜ್ಯಕ್ಕೆ ಬಂದಿದ್ದಾರೆ. ಶಾಸಕರು ಏನು ಹೇಳುತ್ತಾರೆ? ಹಾಗೂ ಜೊತೆಗೆ ಏನೆಲ್ಲ ನಡೆದಿದೆ? ಎಂದು ಅವರೇ ಕೇಳುತ್ತಾರೆ. ಅದನ್ನು ನೋಡಿಕೊಂಡು ಮುಂದೇನು ಮಾಡಬೇಕು ಎಂದು ತೀರ್ಮಾನಿಸುತ್ತೇವೆ ಎಂದು ಖರ್ಗೆ ಸುಳಿವು ನೀಡಿದ್ದಾರೆ. ಹೈಕಮಾಂಡ್ ತೀರ್ಮಾನ ಏನೂ ಎಂದು ಯಾರಿಗೂ ಗೊತ್ತಿಲ್ಲ. ನಾನು ಎಐಸಿಸಿ ಹಂತದಲ್ಲಿ ಮಾತ್ರ ಉತ್ತರ ಕೊಡುತ್ತೇನೆ ಎಂದೂ ಹೇಳಿದ್ದಾರೆ.

ಹೈಕಮಾಂಡ್‌ನಲ್ಲಿ ಏನು ನಡೆಯುತ್ತದೆ ಎಂಬುದನ್ನು ಯಾರು ಕೂಡ ಹೇಳಲಾಗುವುದಿಲ್ಲ. ಮುಂದಿನ ಕ್ರಮ ಕೈಗೊಳ್ಳುವ ಹಕ್ಕು ಕೂಡ ಹೈಕಮಾಂಡ್‌ಗೆ ಇದೆ. ಆದರೆ ಈ ವಿಚಾರವಾಗಿ ಯಾರೂ ಕೂಡ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಬೇಡಿ. ರಾಜ್ಯದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವ ಅಧಿಕಾರ ಕೂಡ ಈಗ ಪಕ್ಷದ ಹೈಕಮಾಂಡ್ ಕೈಯಲ್ಲೇ ಇದೆ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಸಚಿವರು ಹಾಗೂ ಶಾಸಕರ ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಅವರೆಲ್ಲರ ಹೇಳಿಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ. ನಾನು ಎಐಸಿಸಿ ಮಟ್ಟದ ವಿಚಾರಗಳಿಗೆ ಮಾತ್ರವೇ ಉತ್ತರಿಸುತ್ತೇನೆ, ರಾಜ್ಯದ ಪ್ರತಿಯೊಂದಕ್ಕೂ ಉತ್ತರ ನೀಡಲು ಹೋದ್ರೆ ಸಾಕಷ್ಟು ವಿಚಾರಗಳಿವೆ ಎಂದೂ ಸ್ವಪಕ್ಷ ನಾಯಕರ ವಿರುದ್ಧ ಗರಂ ಆಗಿದ್ದಾರೆ.
ನಾಯಕತ್ವ ಬದಲಾವಣೆ ಊಹಾಪೋಹ
ಸದ್ಯಕ್ಕೆ ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶಾಸಕರಿಂದ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಪ್ರತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಹೇಗಿದೆ ಎಂದು ವರದಿ ಪಡೆಯಲಾಗುವುದು. ಇಲ್ಲಿನವರ ಕಾರ್ಯವೈಖರಿ ಹೇಗಿದೆ ಎಂದು ಪರಿಶೀಲಿಸಲಾಗುವುದು ಎಂದಿದ್ದಾರೆ. ಇದರಿಂದ ಸಿಎಂ ಹಾಗೂ ಸಚಿವರಿಗೆ ಮಾಹಿತಿ ನೀಡಲು ಅನುಕೂಲವಾಗುತ್ತೆ. ಹಾಗೆಯೇ ಸರ್ಕಾರದಿಂದ ಆಗಬೇಕಾದ ಕೆಲಸಗಳ ಬಗ್ಗೆಯೂ ಎಲ್ಲ ಶಾಸಕರಿಂದ ಮಾಹಿತಿ ಪಡೆಯಲಾಗುವುದು ಎಂದಿದ್ದಾರೆ.
ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರಗಳು ಊಹಾಪೋಹ ಅಷ್ಟೇ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವುದು ಕಾಲ್ಪನಿಕ ಮಾತ್ರ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಸೋತವರನ್ನು ಕೂಡ ಸಭೆಗೆ ಆಹ್ವಾನಿಸುತ್ತೇವೆ. ನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ಜೊತೆಗೂ ಚರ್ಚೆ ನಡೆಸಲಾಗುವುದು ಎಂದು ಸುರ್ಜೇವಾಲಾ ಹೇಳಿದ್ದಾರೆ.












Click it and Unblock the Notifications