ಉದ್ಯೋಗ ಖಾತ್ರಿ ಯೋಜನೆ: ಆನ್ ಲೈನ್ ಅರ್ಜಿಗೆ ಉತ್ತಮ ಸ್ಪಂದನೆ
ಬೆಂಗಳೂರು, ಜನವರಿ 03: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರೆ ಮೊದಲು ಗ್ರಾಮ ಸಭೆಗಳಲ್ಲಿ ಕಾಮಗಾರಿಗೆ ಬೇಡಿಕೆ ಸಲ್ಲಿಸಬೇಕಿತ್ತು. ಆದರೆ ಸರ್ಕಾರ ಇದೀಗ ಹೊಸ ವ್ಯವಸ್ಥೆಯನ್ನು ಕಲ್ಪಿಸಿದ್ದು, ತಾವಿದ್ದಲ್ಲಿಯೇ ಆನ್ ಲೈನ್ ಮೂಲಕ ಕಾಮಗಾರಿಗೆ ಬೇಡಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದ ಹತ್ತರಾ ರೈತರಿಗೆ ಉಪಯೋಗವಾಗಿದ್ದು, ಅನೇಕರಿಗೆ ನಿರಂತರ ಉದ್ಯೋಗ ಕೂಡ ಸಿಗುತ್ತಿದೆ.
ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ರೈತರ ಬದುಕಿಗೆ ಬೆಳಕಾಗಿದೆ. ಗ್ರಾಮೀಣ ಭಾಗದ ಜನರು ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರೆ ಗ್ರಾಮ ಸಭೆಗಳಲ್ಲಿ ಕಾಮಗಾರಿಗೆ ಬೇಡಿಕೆ ಸಲ್ಲಿಸಬೇಕಿತ್ತು. ಇದನ್ನು ತಪ್ಪಿಸಲು ತಾವಿದ್ದಲ್ಲಿಯೇ ಆನ್ ಲೈನ್ ಮೂಲಕ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಈ ವಿನೂತನ ವ್ಯವಸ್ಥೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಬೆಳಗಾವಿ ಜಿಲ್ಲೆಯೊಂದರಲ್ಲಿಯೇ 23,380 ಅರ್ಜಿ ಸಲ್ಲಿಕೆಯಾಗಿವೆ. ನರೇಗಾ ಯೋಜನೆಯಡಿ ರೈತರು ಕೃಷಿ ಹೊಂಡ, ಬದು ನಿರ್ಮಾಣ, ಭೂಮಿ ಸುಧಾರಣೆ ಮಾಡಿಕೊಳ್ಳಬಹುದು. ಜೊತೆಗೆ ದನದ ಕೊಟ್ಟಿಗೆ ಮತ್ತು ಶೆಡ್ ನಿರ್ಮಾಣವನ್ನು ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ತೋಟಗಾರಿಕೆ ಇಲಾಖೆ ವತಿಯಿಂದ ಬಾಳೆಹಣ್ಣಿನ ತೋಟ, ಚಿಕ್ಕು, ಪೇರಲ, ಪಪ್ಪಾಯಿ, ದ್ರಾಕ್ಷಿ, ಮುಂತಾದ ಹಣ್ಣಿನ ತೋಟ ನಿರ್ಮಾಣ ಮಾಡಬಹುದು. ಅರಣ್ಯ ಇಲಾಖೆ ವತಿಯಿಂದ ಹೊಲದ ಬದುಗಳಲ್ಲಿ ಸಸಿ ನೆಡಲು ಅವಕಾಶವಿದೆ. ಇಂತಹ ಹತ್ತಾರು ಯೋಜನೆಗಳನ್ನು ರೈತರು ನರೇಗಾದ ಮೂಲಕ ಸದುಪಯೋಗ ಪಡೆದುಕೊಳ್ಳುತ್ತಿರುವ ನಿಜಕ್ಕೂ ಸಂತಸ ತಂದಿದೆ.

ಯೋಜನೆಗಳ ಅನುಷ್ಠಾನಕ್ಕೆ, ಸುಗಮ ಸೇವೆಗೆ ಹಾಗೂ ಪಾರದರ್ಶಕತೆಗಾಗಿ ತಂತ್ರಜ್ಞಾನದ ಬಳಕೆ ಸಹಕಾರಿಯಾಗಿದೆ. ಈ ಆನ್ ಲೈನ್ ವ್ಯವಸ್ಥೆಗೆ ಗ್ರಾಮೀಣ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ನಮ್ಮ ವಿಶಿಷ್ಠ ಪ್ರಯತ್ನಕ್ಕೆ ಯಶಸ್ಸು ದೊರಕಿದಂತಾಗಿದೆ. ಗ್ರಾಮೀಣ ಜನರು ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ನಿರೀಕ್ಷೆಗಿಂತ ಹೆಚ್ಚು ಆಸಕ್ತಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಖುಷಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications