Mahasankalpa 2037: ಕರ್ನಾಟಕವನ್ನು ₹1 ಟ್ರಿಲಿಯನ್ ಆರ್ಥಿಕತೆಯನ್ನಾಗಿಸಲು ಡಿಕೆಶಿ ಬೃಹತ್ ಗುರಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸಿನ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತನಾಡಿದ್ದಾರೆ. 2037ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವುದು, ಬಡತನ ಮತ್ತು ಶಾಲೆಯಿಂದ ಹೊರಗುಳಿಯುವ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ಹಾಗೂ ಅಪೌಷ್ಟಿಕತೆಯನ್ನು 5% ಕ್ಕಿಂತ ಕಡಿಮೆ ಮಾಡುವುದು ಸರ್ಕಾರದ ಪ್ರಮುಖ "ಮಹಾಸಂಕಲ್ಪ'ವಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ಇದಕ್ಕಾಗಿ 'ನವಸಂಕಲ್ಪ'ದಡಿ ಆರೋಗ್ಯ, ಶಿಕ್ಷಣ ಹಾಗೂ ಮೇಕೆದಾಟು-ಎತ್ತಿನಹೊಳೆಯಂತಹ ಜಲ ಭದ್ರತಾ ಯೋಜನೆಗಳಿಗೆ ವೇಗ ನೀಡಲಾಗಿದೆ. ಮುಂಬರುವ 500 ದಿನಗಳಲ್ಲಿ ಮೂಲಸೌಕರ್ಯಕ್ಕಾಗಿ ₹1.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ ₹3 ಲಕ್ಷ ಕೋಟಿ ಹೊಸ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ.

ಜೊತೆಗೆ, 5 ಹೊಸ ಮಹಾನಗರಗಳ ನಿರ್ಮಾಣ, 1 ಲಕ್ಷ ಸರ್ಕಾರಿ ಹಾಗೂ 5 ಲಕ್ಷ ಖಾಸಗಿ ಉದ್ಯೋಗ ಸೃಷ್ಟಿ, ನಿರಾಶ್ರಿತರಿಗೆ 5 ಲಕ್ಷ ನಿವೇಶನ ಹಂಚಿಕೆ ಮತ್ತು ಬೆಂಗಳೂರಿನಲ್ಲಿ 5 ಹೊಸ ಲಾಲ್‌ಬಾಗ್ ಮಾದರಿಯ ಉದ್ಯಾನವನಗಳು ಹಾಗೂ 7 ಕೆರೆಗಳ ಪುನರುಜ್ಜೀವನಕ್ಕೆ ದೃಢ ಹೆಜ್ಜೆ ಇಡಲಾಗಿದೆ. ಆರ್ಥಿಕವಾಗಿ ಸಬಲ, ಸಾಮಾಜಿಕವಾಗಿ ಸಮಾನ ಹಾಗೂ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ನಾಳಿನ ಭಾರತಕ್ಕೆ ಕರ್ನಾಟಕವನ್ನು ಮಾದರಿಯಾಗಿಸುವತ್ತ ಇದು ದಿಟ್ಟ ಹೆಜ್ಜೆಯಾಗಿದೆ ಎಂದಿದ್ದಾರೆ.
ಆರೋಗ್ಯ, ಶಿಕ್ಷಣ, ಜಲ ಭದ್ರತೆ, ಹೂಡಿಕೆ, ಬೆಂಗಳೂರು ಅಭಿವೃದ್ಧಿ, ಪ್ರಾದೇಶಿಕ ಸಮತೋಲನ, ಸಾಮಾಜಿಕ ನ್ಯಾಯ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿ.. ನಮ್ಮ ಸರ್ಕಾರದ 9 ಮಹತ್ವದ ಸಂಕಲ್ಪಗಳಿವು. ಜನರ ಬದುಕಿನಲ್ಲಿ ಬದಲಾವಣೆ ತಂದು ರಾಜ್ಯದ ಪ್ರತಿಯೊಂದು ಭಾಗಕ್ಕೂ ಸಮಾನ ಅವಕಾಶ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಮಹಾ ಸಂಕಲ್ಪ 2037ರ ಅಡಿ ಕರ್ನಾಟಕವನ್ನು 1 ಟ್ರಿಲಿಯನ್ ಆರ್ಥಿಕತೆಯತ್ತ ಕೊಂಡೊಯ್ಯುವುದು, ಅಪೌಷ್ಟಿಕತೆಯನ್ನು 5%ಕ್ಕಿಂತ ಕಡಿಮೆಗೊಳಿಸುವುದು, ಶೂನ್ಯ ಬಡತನ ಹಾಗೂ ಶೂನ್ಯ ಶಾಲಾ ತೊರೆಯುವಿಕೆಯ ಗುರಿ ಸಾಧಿಸುವುದು ನಮ್ಮ ಆಶಯವಾಗಿದೆ. ಪ್ರತಿಯೊಬ್ಬರಿಗೂ ಉತ್ತಮ ಬದುಕು, ಪ್ರತಿಯೊಂದು ಕುಟುಂಬಕ್ಕೂ ಆರ್ಥಿಕ ಭದ್ರತೆ ಹಾಗೂ ಪ್ರತಿಯೊಂದು ಮಗುವಿಗೂ ಉಜ್ವಲ ಭವಿಷ್ಯ ಕಲ್ಪಿಸುವ ಬಲಿಷ್ಠ, ಸಮೃದ್ಧ ಮತ್ತು ಸಮಾನತೆಯ ಕರ್ನಾಟಕ ನಿರ್ಮಾಣವೇ ನಮ್ಮ ಮಹಾ ಸಂಕಲ್ಪವಾಗಿದೆ ಎಂದು ಹೇಳಿದ್ದಾರೆ.
ಅನ್ನದಾತೋ ಸುಖೀಭವಃ
ನಾಡಿನ ಅನ್ನದಾತರು, ಶ್ರಮಿಕರು, ಯುವಜನರು ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳೊಂದಿಗೆ ವಿಧಾನಸೌಧದಲ್ಲಿ ಸಹಭೋಜನ ಸವಿದ ಕ್ಷಣ ಅವಿಸ್ಮರಣೀಯ. ಅಧಿಕಾರ-ಅಂತಸ್ತುಗಳ ಅಂತರ ಕರಗಿ, ಆಡಳಿತ ವರ್ಗ ಮತ್ತು ಸಾಮಾನ್ಯ ಜನರು ಒಂದೇ ಪಂಕ್ತಿಯಲ್ಲಿ ಕುಳಿತಾಗ ಜನತಂತ್ರದ ನಿಜವಾದ ಸೌಂದರ್ಯ ಅನಾವರಣಗೊಂಡಿತು. ನನ್ನ ಸಂಪುಟ ಸಹೋದ್ಯೋಗಿಗಳು ಹಾಗೂ ಜನರೊಂದಿಗೆ ಕುಳಿತು ಮಾಡಿದ ಊಟ ಹೊಟ್ಟೆ- ಮನಸ್ಸು ತಣಿಸುವುದರ ಜೊತೆಗೆ, ನಾಡಿನ ಕಟ್ಟಕಡೆಯ ವ್ಯಕ್ತಿಯ ಬದುಕನ್ನೂ ಹಸನು ಮಾಡುವ, ದೃಢ ಕರ್ನಾಟಕದ ಸಂಕಲ್ಪದ ಈ ಸಂಭ್ರಮವನ್ನು ನೂರ್ಮಡಿಗೊಳಿಸಿತು ಎಂದೂ ಡಿಕೆಶಿ ಹೇಳಿದ್ದಾರೆ.
ಬರೀ ಮಾತಲ್ಲ, ಕೃತಿಯೇ ನಮ್ಮ ಆಡಳಿತದ ಶಕ್ತಿ: ಡಿ.ಕೆ ಶಿವಕುಮಾರ್
ಬರೀ ಮಾತಲ್ಲ, ಕೃತಿಯೇ ನಮ್ಮ ಆಡಳಿತದ ಶಕ್ತಿ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸರ್ಕಾರದ 100 ದಿನಗಳ ಸಾರ್ಥಕ ಪಯಣದ ಗುರುತಾಗಿ, ವಿಧಾನಸೌಧದಲ್ಲಿ ನಡೆಯುತ್ತಿರುವ 'ದೃಢ ಕರ್ನಾಟಕದ ಸಂಕಲ್ಪ- ಶತಕದ ಪಥ, ಪ್ರಗತಿಯ ರಥ' ಸಮಾರಂಭದಲ್ಲಿ ರಾಜ್ಯದ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ 4 ಮಹತ್ವಾಕಾಂಕ್ಷೆಯ ಜನಪರ ಯೋಜನೆಗಳಿಗೆ ಮಾನ್ಯ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು, ವಿವಿಧ ಸಚಿವರುಗಳು ಹಾಗೂ ಈ ನಾಡಿನ ಮಹಾಜನತೆಯ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.
ಕಚೇರಿ ಅಲೆದಾಟವಿಲ್ಲದೆ ನಾಗರಿಕರಿಗೆ ತ್ವರಿತ ಸೇವೆ ನೀಡಲು 'ಸೇವಾ ಒನ್', ಅನ್ನದಾತನಿಗೆ ಆಸರೆಯಾಗಲು 'ರೈತ ಚೈತನ್ಯ', ಸರ್ಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ 'ಶಾಲೆಗಳ ಸಿಎಸ್‌ಆರ್ ಪೋರ್ಟಲ್' ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ 'ಉಚಿತ ಬಸ್ ಪಾಸ್' ವಿತರಣೆಗೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.
ಈ ರಾಜ್ಯದ ಪ್ರಜಾಸೇವಕನಾಗಿ ಪ್ರಮಾಣವಚನ ಸ್ವೀಕರಿಸಿದ ಕ್ಷಣದಿಂದಲೂ, ನಾಡಿನ ಪ್ರತಿಯೊಬ್ಬ ವ್ಯಕ್ತಿಯ ಉನ್ನತಿಯೇ ನನ್ನ ಆದ್ಯ ಸಂಕಲ್ಪವೆಂದು ಕನ್ನಡಿಗರಿಗೆ ಮಾತು ಕೊಟ್ಟಿದ್ದೇನೆ. ಮುಂಬರುವ ದಿನಗಳಲ್ಲೂ ದೃಢ ಕರ್ನಾಟಕ ನಿರ್ಮಾಣಕ್ಕಾಗಿ ಇಡೀ 'ಟೀಮ್ ಕರ್ನಾಟಕ' ಒಗ್ಗಟ್ಟಿನಿಂದ ಮುನ್ನಡೆಯಲಿದೆ ಎಂದೂ ಡಿಕೆಶಿ ಹೇಳಿದ್ದಾರೆ.


Click it and Unblock the Notifications
