ಮಹದಾಯಿ ವಿವಾದ; ಗೋವಾದಿಂದಾಗಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆ
ಬೆಂಗಳೂರು, ಫೆಬ್ರವರಿ 23: ಮಹದಾಯಿ ನದಿ ನೀರು ಹಂಚಿಕೆ ವಿವಾದದಲ್ಲಿ ಗೋವಾದ ಬಿಜೆಪಿ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯಿಂದಾಗಿ ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ.
ಗೋವಾ ಸರ್ಕಾರ ಮಹದಾಯಿ ನದಿ ನೀರನ್ನು ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಕರ್ನಾಟಕ ತಿರುಗಿಸಿಕೊಂಡಿದೆ ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಕೆ ಮಾಡಿತ್ತು. ಈ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಜಂಟಿ ಪರಿಶೀಲನಾ ಸಮಿತಿಯನ್ನು ರಚನೆ ಮಾಡಿ ಕರ್ನಾಟಕ ಸರ್ಕಾರ ನೀರು ತಿರುಗಿಸಿಕೊಂಡ ಬಗ್ಗೆ ತನಿಖೆ ನಡೆಸಬೇಕು ಎಂದು ಆದೇಶ ನೀಡಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಮಹದಾಯಿ ನ್ಯಾಯಾಧೀಕರಣ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಕರ್ನಾಟಕ ಸರ್ಕಾರ ನದಿ ನೀರನ್ನು ತಿರುಗಿಸಿಕೊಂಡ ಬಗ್ಗೆ ಗೋವಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು" ಎಂದು ಹೇಳಿದ್ದಾರೆ.
"ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳು ಇರುವ ಜಂಟಿ ಪರಿಶೀಲನಾ ಸಮಿತಿಯನ್ನು ರಚನೆ ಮಾಡಿ 4 ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ" ಎಂದು ಗೋವಾ ಮುಖ್ಯಮಂತ್ರಿಗಳು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಹೇಳುವುದೇನು?
ಕರ್ನಾಟಕದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, "ಗೋವಾ ಸರ್ಕಾರ ಸುಳ್ಳು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ನ್ಯಾಯಾಲಯದಲ್ಲಿ ಅವರಿಗೆ ಸೋಲಾಗಲಿದೆ. ಮಹದಾಯಿ ನ್ಯಾಯಾಧೀಕರಣದ ಆದೇಶ ಉಲ್ಲಂಘಿಸಿ ಕರ್ನಾಟಕ ನದಿ ನೀರನ್ನು ತಿರುಗಿಸಿಲ್ಲ" ಎಂದು ಹೇಳಿದ್ದರು.

ಚೆಕ್ ವಾಲ್ ಧ್ವಂಸ ಮಾಡಲಾಗಿದೆ
ಗೋವಾ ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಕರ್ನಾಟಕ ನ್ಯಾಯಾಧೀಕರಣದ ಆದೇಶ ಉಲ್ಲಂಘಿಸಿ ನದಿ ನೀರನ್ನು ತಿರುಗಿಸಿಕೊಂಡಿದೆ. ಇದಕ್ಕಾಗಿ ಕಳಸಾದಲ್ಲಿ ನಿರ್ಮಿಸಿದ್ದ ಚೆಕ್ ವಾಲ್ ಧ್ವಂಸ ಮಾಡಿದೆ ಎಂದು ಉಲ್ಲೇಖಿಸಿದೆ. ಕರ್ನಾಟಕದ ಇದು ಸುಳ್ಳು ಎಂದು ಹೇಳುತ್ತಿದೆ.

ನ್ಯಾಯಾಧೀಕರಣದ ತೀರ್ಪು
ಮಹದಾಯಿ ನದಿ ನೀರಿನ ಹಂಚಿಕೆ ಕುರಿತು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ವಿವಾದವಿದೆ. ನದಿ ನೀರಿನ ವಿವಾದದ ಬಗ್ಗೆ ವಿಚಾರಣೆ ನಡೆಸಿದ್ದ ಮಹದಾಯಿ ನ್ಯಾಯಾಧೀಕರಣ 2018ರಲ್ಲಿ ಅಂತಿಮ ತೀರ್ಪು ಪ್ರಕಟಿಸಿತ್ತು. ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು.
Recommended Video

ಗೋವಾ ಸರ್ಕಾರದಿಂದ ಕ್ಯಾತೆ
ಗೋವಾದಲ್ಲಿಯೂ ಬಿಜೆಪಿ ಸರ್ಕಾರವೇ ಇದೆ. ಆದರೆ, ಮಹದಾಯಿ ನದಿ ನೀರಿನ ಹಂಚಿಕೆ ವಿವಾದದಲ್ಲಿ ಸರ್ಕಾರ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಕರ್ನಾಟಕದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ನೀರಿನ ಹಂಚಿಕೆಯೂ ಸರಿಯಾಗಿ ನಡೆದಿಲ್ಲ ಎಂದು ನ್ಯಾಯಾಧೀಕರಣದ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದೆ.












Click it and Unblock the Notifications