'ಮೋದಿ ಮೌನ ಕನ್ನಡಿಗರು, ರೈತರಿಗೆ ಮಾಡುವ ಅವಮಾನ'
ಬೆಂಗಳೂರು, ಫೆಬ್ರವರಿ 04 : 'ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೌನ ರಾಜ್ಯ ಮತ್ತು ರೈತರಿಗೆ ಮಾಡುವ ಅವಮಾನವಾಗಿದೆ' ಎಂದು ಸಾಹಿತಿ ಚಂದ್ರಶೇಖರ ಪಾಟೀಲ್ ದೂರಿದರು.
ಭಾನುವಾರ ಫ್ರೀಡಂಪಾರ್ಕ್‌ನಲ್ಲಿ ಮಾತನಾಡಿದ ಚಂದ್ರಶೇಖರ ಪಾಟೀಲ್ ಅವರು, 'ರಾಜ್ಯಕ್ಕೆ ಆಗಮಿಸುತ್ತಿರುವ ನರೇಂದ್ರ ಮೋದಿ ಅವರು ಮಹದಾಯಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲಿದ್ದಾರೆಯೇ?, ಇಲ್ಲವೇ?' ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದು ಒತ್ತಾಯಿಸಿದರು.
ಕನ್ನಡ ಒಕ್ಕೂಟದ ನೂರಾರು ಕಾರ್ಯಕರ್ತರು ಫ್ರೀಡಂಪಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹದಾಯಿ ವಿಚಾರದಲ್ಲಿ ಅವರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

'ಬೆಂಗಳೂರಿಗೆ ಬರುವ ಮೋದಿ ಕನ್ನಡ ಹೋರಾಟಗಾರರು ಮತ್ತು ರೈತ ಸಂಘದ ಮುಖಂಡರ ನಿಯೋಗವನ್ನು ಭೇಟಿ ಮಾಡಬೇಕು' ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ, ಹೋರಾಟಗಾರ ಸಾ.ರಾ.ಗೋವಿಂದು ಒತ್ತಾಯ ಮಾಡಿದರು.
ಬೃಹತ್ ಹೋರಾಟದ ಎಚ್ಚರಿಕೆ : 'ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಹದಾಯಿ ವಿಚಾರ ಮಾತನಾಡದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ' ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.
'ಕರ್ನಾಟಕವನ್ನು ನಿಶ್ಯಬ್ಧವಾಗಿಸುತ್ತೇವೆ. ಬಸ್ ಇಲ್ಲ, ಅಂಗಡಿ ತೆರೆಯೋಲ್ಲ, ಆಟೋಗಳು ಸಂಚಾರ ನಡೆಸದಂತೆ ಮಾಡುತ್ತೇವೆ. ಆದರೆ, ಬಂದ್ ನಡೆಸುವುದಿಲ್ಲ' ಎಂದು ವಾಟಾಳ್ ನಾಗರಾಜ್ ಹೇಳಿದರು.












Click it and Unblock the Notifications