ಮಂಗಳವಾರದಿಂದ ಮಹಾದಾಯಿ ವಿಚಾರಣೆ, ಎಲ್ಲರ ಕಣ್ಣು ನ್ಯಾಯಾಧಿಕರಣದತ್ತ
ನವದೆಹಲಿ, ಫೆಬ್ರವರಿ 5: ರಾಜಕೀಯ ಕೆಸರೆರೆಚಾಟದ ಮಧ್ಯೆ ಮಂಗಳವಾರ (ಫೆಬ್ರವರಿ 6)ರಿಂದ ಮಹಾದಾಯಿ ನದಿ ನೀರು ಹಂಚಿಕೆಯ ಅಂತಿಮ ವಿಚಾರಣೆ ನ್ಯಾಯಾಧಿಕರಣದಲ್ಲಿ ಆರಂಭವಾಗಲಿದೆ. ಈ ವೇಳೆ ಕರ್ನಾಟಕ ತನ್ನ ಅಂತಿಮ ವಾದ ಮಂಡಿಸಲಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಪರ ವಕೀಲ ಮೋಹನ್ ಕಾತರಕಿ, ಕರ್ನಾಟಕ ಮೊದಲಿಗೆ ಗೋವಾ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ.
ಇನ್ನು ವಿವಾದದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಣೆ ನೀಡಿದ ಕಾತರಕಿ, 'ಕೋರ್ಟ್ ಹೊರಗೆ ಸಮಸ್ಯೆ ಬಗೆಹರಿಸಲು ಇರುವ ಅವಕಾಶಗಳ ಬಗ್ಗೆ ಹಮನ ಹರಿಸುವಂತೆ ರಾಜ್ಯಗಳಿಗೆ ನ್ಯಾಯಾಲಯ ಸೂಚಿಸಿತ್ತು' ಎಂದು ತಿಳಿಸಿದ್ದಾರೆ.

ಈ ಬಗ್ಗೆ ಯಾವುದೇ ಮಾತುಕತೆಗಳು ಯಾಕೆ ನಡೆದಿಲ್ಲ ಎಂಬ ಬಗ್ಗೆ ವಿವರಣೆ ನೀಡಿದ ಕಾತರಕಿ, "ಸಾಮಾನ್ಯವಾಗಿ ಇಂಥ ವಿಷಯಗಳು ನ್ಯಾಯಾಲಯದಲ್ಲಿರುವಾಗ ಮಾತುಕತೆಯ ಯತ್ನಗಳು ನಡೆಯುವುದಿಲ್ಲ," ಎಂದಿದ್ದಾರೆ.
"ಈ ರೀತಿಯ ವಿವಾದದ ಸಂದರ್ಭದಲ್ಲಿ ಕೇಂದ್ರ ಸರಕಾರ ಕೇವಲ ಮಧ್ಯವರ್ತಿಯಾಗಿ ವರ್ತಿಸಬಹುದಷ್ಟೆ. ಕೇಂದ್ರ ಮಧ್ಯಸ್ಥಿಕೆ ವಹಿಸುವ ಜವಾಬ್ದಾರಿಯನ್ನು ಹೊಂದಿರಬೇಕು ಮತ್ತು ಎಲ್ಲಾ ರಾಜ್ಯಗಳು ಸಹಕರಿಸುವ ಜವಾಬ್ದಾರಿ ಹೊಂದುತ್ತವೆ," ಅವರು ಹೇಳಿದ್ದಾರೆ.
ಕಾವೇರಿ ನೀರು ಹಂಚಿಕೆ ತೀರ್ಪಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕಾತರಕಿ, ಈ ತಿಂಗಳಲ್ಲಿ ತೀರ್ಪನ್ನು ನಿರೀಕ್ಷಿಸುತ್ತಿರುವುದಾಗಿ ಹೇಳಿದ್ದಾರೆ. ಫೆಬ್ರವರಿ 23 ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ತೀರ್ಪು ಹೊರಬೀಳಲಿದೆ ಎಂದು ಅವರು ತಿಳಿಸಿದ್ದಾರೆ.











Click it and Unblock the Notifications