Maha Shivaratri: ಮಹಾಶಿವರಾತ್ರಿ ಜಾಗರಣೆಯು ಸಮಾಧಿ ಸ್ಥಿತಿ ತಲುಪಲು ಸಹಕಾರಿ: ಶ್ರೀ ಮಧುಸೂದನ್ ಸಾಯಿ
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಮಾಘಮಾಸದ ಪವಿತ್ರ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿಭಾವ, ಆತ್ಮಾವಲೋಕನ ಹಾಗೂ ಆಧ್ಯಾತ್ಮಿಕ ಚಿಂತನೆಯ ವಾತಾವರಣದಲ್ಲಿ ಆಚರಿಸಲಾಯಿತು. ಬೆಳಗ್ಗೆಯಿಂದಲೇ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಲಿಂಗಾಭಿಷೇಕ, ರುದ್ರಪಾರಾಯಣ, ಮಂತ್ರಜಪ, ಭಜನೆ ಮತ್ತು ಧ್ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ್ ಸಾಯಿ ಅವರು ಶಿವತತ್ತ್ವದ ಮಹತ್ವವನ್ನು ವಿವರಿಸಿ ಪ್ರವಚನ ನೀಡಿದರು. ಮಹಾಶಿವರಾತ್ರಿ ಕೇವಲ ಆಚರಣೆಯ ಹಬ್ಬವಲ್ಲ, ಅದು ಆತ್ಮಶೋಧನೆಗೆ ದಾರಿ ತೋರಿಸುವ ಆಧ್ಯಾತ್ಮಿಕ ಅವಕಾಶ ಎಂದರು.
'ನೀಲಕಂಠ' ತತ್ತ್ವದ ಅರ್ಥ
ಶಿವನು ಲೋಕ ರಕ್ಷಣಾರ್ಥ ಹಾಲಾಹಲ ವಿಷವನ್ನು ಕಂಠದಲ್ಲೇ ಧರಿಸಿದ 'ನೀಲಕಂಠ' ರೂಪಕವನ್ನು ವಿವರಿಸಿದ ಅವರು, "ಮಾನವನ ಜೀವನದಲ್ಲೂ ವಿಷದಂತೆ ತೋರುವ ಅನುಭವಗಳು ಎದುರಾಗುತ್ತವೆ. ಅವುಗಳನ್ನು ಮನಸ್ಸಿನೊಳಗೆ ದ್ವೇಷವಾಗಿ ಸಂಗ್ರಹಿಸಿಕೊಳ್ಳದೆ, ಆತ್ಮಚಿಂತನೆಯ ಮೂಲಕ ಪರಿವರ್ತಿಸಿಕೊಳ್ಳಬೇಕು. ಪ್ರತಿಕೂಲತೆಯನ್ನು ಆತ್ಮೋನ್ನತಿಯ ಸಾಧನವಾಗಿಸಿಕೊಳ್ಳುವುದೇ ಶಿವತತ್ತ್ವದ ಸಾರ" ಎಂದು ಹೇಳಿದರು.

ಶಿವನು ಶ್ಮಶಾನವಾಸಿ, ವಿಭೂತಿ ಧಾರಿ ಹಾಗೂ ಸಮಾಧಿಪ್ರಿಯ ಯೋಗಿ ಎಂಬ ರೂಪಕಗಳ ಅಂತರಾರ್ಥವನ್ನು ವಿವರಿಸಿ, "ಸುಖ-ದುಃಖಗಳು ಕ್ಷಣಿಕ; ಚೈತನ್ಯವೇ ನಿತ್ಯ. ಮಹಾಶಿವರಾತ್ರಿ ಅಂಗವಾಗಿ ಆಚರಿಸುವ ಜಾಗರಣೆ ಮತ್ತು ಧ್ಯಾನ ಮನಸ್ಸನ್ನು ಏಕಾಗ್ರಗೊಳಿಸಿ, ಆತ್ಮಸಾಕ್ಷಾತ್ಕಾರದತ್ತ ಸಾಗುವಂತೆ ಮಾಡುತ್ತದೆ. ಜಾಗರಣೆಯು ಕೇವಲ ನಿದ್ರೆ ತ್ಯಾಗವಲ್ಲ, ಅದು ಚೈತನ್ಯ ಜಾಗೃತಿ" ಎಂದು ಅಭಿಪ್ರಾಯಪಟ್ಟರು.
"ಪೂಜೆ, ಅಭಿಷೇಕ, ಜಪ ಹಾಗೂ ಧ್ಯಾನಗಳು ಕೇವಲ ಆಚರಣೆಗಳಲ್ಲ; ಅವು ಅಂತರಂಗ ಶುದ್ಧಿಗೆ ದಾರಿಯಾಗಿದೆ. ಆತ್ಮಸಾಧನೆಯಲ್ಲಿ ಮಾಡಿದ ಯಾವುದೇ ಪ್ರಾಮಾಣಿಕ ಪ್ರಯತ್ನವೂ ವ್ಯರ್ಥವಾಗುವುದಿಲ್ಲ. ಅದು ವ್ಯಕ್ತಿತ್ವದ ಪರಿಪಕ್ವತೆಗೆ ದಾರಿ ಮಾಡಿಕೊಡುತ್ತದೆ. ಜನನ-ಮರಣ ಚಕ್ರದಿಂದ ಮುಕ್ತಿ ಹೊಂದಬೇಕಾದರೆ ಆತ್ಮಜ್ಞಾನವೇ ಮಾರ್ಗ" ಎಂದು ಹೇಳಿದರು. ಸತ್ಯಸಾಯಿ ಗ್ರಾಮವನ್ನು 'ಸಿದ್ಧಸಂಕಲ್ಪಭೂಮಿ' ಎಂದು ಉಲ್ಲೇಖಿಸಿದ ಅವರು, ಇಲ್ಲಿನ ಶಾಂತ ಮತ್ತು ಸಾತ್ವಿಕ ವಾತಾವರಣದಲ್ಲಿ ಶ್ರದ್ಧೆಯಿಂದ ಮಾಡಿದ ಸಂಕಲ್ಪಗಳು ಫಲಪ್ರದವಾಗುತ್ತವೆ ಎಂಬ ನಂಬಿಕೆ ವ್ಯಕ್ತಪಡಿಸಿದರು.
ಜಾಗರಣೆ, ಭಜನೆ, ಪ್ರಸಾದ ವಿತರಣೆ
ಮಹಾಶಿವರಾತ್ರಿ ಅಂಗವಾಗಿ ಲಿಂಗಾಭಿಷೇಕದ ನಂತರ ಅಭಿಷೇಕ ತೀರ್ಥವನ್ನು ಭಕ್ತರಿಗೆ ಪ್ರೋಕ್ಷಣೆ ಮಾಡಲಾಯಿತು. ರಾತ್ರಿ ಪೂರ್ತಿ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಭಕ್ತರು ಜಾಗರಣೆ, ಭಜನೆ, ಮಂತ್ರಜಪ ಮತ್ತು ಧ್ಯಾನದಲ್ಲಿ ತೊಡಗಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದ ಅಂತ್ಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಸಹ ನಡೆಯಿತು. ಭಕ್ತಿ, ಶಾಂತಿ ಮತ್ತು ಆಧ್ಯಾತ್ಮಿಕ ಚೈತನ್ಯದಿಂದ ಕೂಡಿದ ಮಹಾಶಿವರಾತ್ರಿ ಆಚರಣೆ ಭಕ್ತರಲ್ಲಿ ಹೊಸ ಆತ್ಮವಿಶ್ವಾಸ ಮತ್ತು ಶ್ರದ್ಧೆ ಮೂಡಿಸಿತು.












Click it and Unblock the Notifications