"ಹುಡುಗಿಯರು ಬೇಕಾದ್ರೆ ಕಾಲ್ ಮಾಡಿ..." ಕರ್ನಾಟಕದ ಕಾಶ್ಮೀರದಲ್ಲಿ ನಡೀತಿದ್ಯಾ ಆ ದಂಧೆ?
ಕರ್ನಾಟಕವು ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಈ ಕಾರಣಕ್ಕೆ ದೇಶ ವಿದೇಶಗಳಿಂದ ಜನ ಕರ್ನಾಟಕದತ್ತ ಲಗೇಜ್ ಹೊತ್ತಿಕೊಂಡು ಬಂದಿಳಿಯುತ್ತಾರೆ. ಇನ್ನು 'ಕೂರ್ಗ್' ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗು ಪ್ರವಾಸಿಗರ ಸ್ವರ್ಗ, 'ಕರ್ನಾಟಕದ ಕಾಶ್ಮೀರ' ಎಂದೇ ಕರೆಸಿಕೊಂಡಿದೆ. ಇಲ್ಲಿನ ಪ್ರಕೃತಿಯ ಸೊಬಗು ಸವಿಯಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಪ್ರವಾಸೋದ್ಯಮದಲ್ಲೂ ಕೂರ್ಗ್ ಮಹತ್ವ ಪಡೆದುಕೊಂಡಿದ್ದು, ಮಡಿಕೇರಿ ಅಂದ್ರೆ ಪ್ರವಾಸಿಗರು ವಾವ್! ಎನ್ನುತ್ತಾರೆ. ಇದೇ ಕಾರಣಕ್ಕೆ ಇಲ್ಲಿ ರೆಸಾರ್ಟ್, ಹೋಂ ಸ್ಟೇಗಳ ತಾಣವೂ ಆಗಿದೆ. ಇದೀಗ ಮಡಿಕೇರಿಯಲ್ಲಿ ಹುಡುಗಿಯರು ಬೇಕಾದ್ರೆ ಸಂಪರ್ಕಿಸಿ ಎಂದು ರಾಜಾರೋಷವಾಗಿ ಆಫರ್ ಕೊಡಲಾಗುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳಗಳಲ್ಲಿ ಮಡಿಕೇರಿಯೂ ಒಂದು. ಇಲ್ಲಿ ಪ್ರವಾಸಿಗರ ವಾಸ್ತವ್ಯಕ್ಕಾಗಿ ರೆಸಾರ್ಟ್ ಹಾಗೂ ಹೋಂಸ್ಟೇಗಳು ಎಲ್ಲೆಡೆ ತೆರೆಯಲಾಗಿದೆ. ಆದರೆ ಇತ್ತೀಚೆಗೆ ಮಡಿಕೇರಿಯಲ್ಲಿ ಆಘಾತಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಸ್ಥಳೀಯರು ಆತಂಕದಲ್ಲಿದ್ದಾರೆ. ಇಲ್ಲಿ ವೇ*ಶ್ಯಾವಾಟಿಕೆ ದಂಧೆ ರಾಜಾರೋಷವಾಗಿ ನಡೆಯುತ್ತಿದೆಯಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣವಾಗಿರುವುದು ಸೋಷಿಯಲ್ ಮೀಡಿಯಾ ಪೋಸ್ಟ್.

ಹೌದು, "ಮಡಿಕೇರಿಯಲ್ಲಿ ಹುಡುಗಿಯರು ಬೇಕಾದ್ರೆ ಸಂಪರ್ಕಿಸಿ" ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲಾಗುತ್ತಿದೆ ಎಂದು ಸ್ಥಳೀಯರು ಬಹಿರಂಗಪಡಿಸಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ. 'ನಮ್ಮ ಕೊಡಗು ಇಲ್ಲಿವರೆಗೆ ಕಾಫಿ ಟೂರಿಸಂ ಸೇರಿದಂತೆ ಪ್ರವಾಸೋದ್ಯಮದಲ್ಲಿ ಹೆಸರುವಾಸಿಯಾಗಿದೆ. ಇಲ್ಲಿವರೆಗೆ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಮಡಿಕೇರಿ ಬಗ್ಗೆ ಇದೀಗ ತಲೆತಗ್ಗಿಸುವ ಬೆಳವಣಿಗೆ ನಡೆಯುತ್ತಿದೆ' ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
'ಈ ಬೆಳವಣಿಗೆ ಇದೇ ರೀತಿ ಮುಂದುವರಿದರೆ ಮುಂದೆ ಕೊಡಗು ಸೆ*ಕ್ಸ್ ಟೂರಿಸಂ ಪಟ್ಟ ಪಡೆಯಬಹುದು. ಹೊರಗಿನಿಂದ ನಮಗೆ ಫೋನ್ ಮಾಡಿ, ಏನು ನಿಮ್ಮ ಕೊಡಗಿನಲ್ಲಿ ಹುಡುಗಿಯರು ಸಿಗ್ತಾರಂತೆ ಅಂತೆಲ್ಲ ನನ್ನ ಸ್ನೇಹಿತರೂ ಕೇಳುತ್ತಿದ್ದಾರೆ. ಮೊದಲಿಗೆ ನಾವು ಇದನ್ನ ನಂಬಲಿಲ್ಲ. ಆದರೆ ಹುಡುಗಿಯರು ಬೇಕಾದ್ರೆ ಸಂಪರ್ಕಿಸಿ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕುತ್ತಿರುವುದು ನೋಡಿ ನಾವೆಲ್ಲ ಶಾಕ್‌ನಲ್ಲಿದ್ದೇವೆ' ಎಂದಿದ್ದಾರೆ.
'ಮುಂದೆ ಗೋವಾ, ಥಾಯ್ಲೆಂಡ್ ಮಾಡ್ತಾರೆ'
'ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಭಯ ಇಲ್ಲದೆ, ನಿಮಗೆ ಹುಡುಗಿಯರು ಬೇಕಾದ್ರೆ ಈ ಕೆಳಕಂಡ ನಂಬರ್ ಅನ್ನು ಸಂಪರ್ಕಿಸಿ ಎಂದು ಪೋಸ್ಟ್ ಹಾಕಿಕೊಳ್ಳುತ್ತಿದ್ದಾರೆ. ಇಷ್ಟು ಓಪನ್ ಹೇಳುತ್ತಿರುವುದು ಸ್ಥಳೀಯರಿಗೆ ಮುಜುಗರ ಉಂಟು ಮಾಡುತ್ತಿದೆ. ಅಲ್ಲದೆ ಇದು ಕೊಡಗಿನ ಹೆಣ್ಣುಮಕ್ಕಳ ಘನತೆಗೂ ಧಕ್ಕೆ ತರುವಂತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು, ಪೊಲೀಸರು ಕೂಡಲೇ ಇಂತಹ ಅಕ್ರಮ ಪ್ರವಾಸೋದ್ಯಮವನ್ನು ಹತ್ತಿಕ್ಕಬೇಕು. ಇಲ್ಲದಿದ್ದರೆ ಮುಂದೊಂದು ದಿನ ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗು, ಗೋವಾ, ಥಾಯ್ಲೆಂಡ್ ಮಾದರಿ ಆ ಕೆಟ್ಟ ಟೂರಿಸಂಗೆ ಹೆಸರುವಾಸಿಯಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications