ಮತದಾರರ ಸಂಖ್ಯೆ ಹೆಚ್ಚಳ; ಮತದಾನ ಅವಧಿಯೂ ಹೆಚ್ಚಳ?
ಬೆಂಗಳೂರು, ಮಾರ್ಚ್11: ಮೊನ್ನೆ ಭಾನುವಾರದಿಂದ ಹೊಸ ಮತದಾರರು ಸಮರೋಪಾದಿಯಲ್ಲಿ ಬಂದು ಮತದಾರರ ಪಟ್ಟಿಗೆ ನೋಂದಣಿಯಾಗುತ್ತಿರುವುದರಿಂದ ಈ ಬಾರಿ ಹದಿನಾರನೆಯ ಲೋಕಸಭಾ ಚುನಾವಣೆಗೆ ಮತದಾರರ ಸಂಖ್ಯೆ ಭಾರಿ ಪ್ರಮಾಣದ ಹೆಚ್ಚಳವಾಗಿದೆ. ಸುಮಾರು 6 ಲಕ್ಷ ಮಂದಿ ಹೊಸದಾಗಿ ಹೆಸರು ಸೇರ್ಪಡೆಗೆಂದು ಭಾನುವಾರ ಅರ್ಜಿ ಸಲ್ಲಿಸಿದ್ದಾರೆ.
ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವುದನ್ನು ಮನಗಂಡು ಚುನಾವಣಾ ಆಯೋಗವು ಮತದಾನದ ಸಮಯವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ, ಮತದಾನ ಸಮಯವನ್ನು ಸಮಯ/ಸಂದರ್ಭ ನೋಡಿಕೊಂಡು ಹೆಚ್ಚಿಸುವ ವಿವೇಚನೆಯನ್ನು ಆಯಾ ಚುನಾವಣಾಧಿಕಾರಿಗಳಿಗೆ ನೀಡಲಾಗಿರುತ್ತದೆ. ಆದರೆ ಈ ಬಾರಿ ಇಡೀ ದೇಶದಾದ್ಯಂತ ಮತದಾರರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಇಡೀ ದೇಶಕ್ಕೆ ಅನ್ವಯಗಾಗುವಂತೆ ಮತದಾನದ ಸಮಯವನ್ನು ವಿಸ್ತರಿಸುವ ಸಾಧ್ಯತೆಯಿದೆ.

ಅಂದರೆ ಸಾಮಾನ್ಯವಾಗಿ ಸಂಜೆ 5 ಗಂಟೆಗೆ ಮತದಾನ ಅವಧಿ ಮುಗಿಯುತ್ತದೆ. ಅದು ಕೆಲವೊಮ್ಮ 6 ಗಂಟೆಗೂ ವಿಸ್ತರಸಲ್ಪಡುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಲೆಯಿಂದಾಗಿ ಮತದಾನ ಪ್ರಮಾಣ ಹೆಚ್ಚಳವಾಗಿದ್ದರಿಂದ ರಾತ್ರಿ 8 ಗಂಟೆಯವರೆಗೂ ಮತದಾನ ನಡೆದಿತ್ತು. ಹಾಗಾಗಿ, ಈ ಬಾರಿ ಲೋಕಸಭಾ ಚುನಾವಣೆಗೆ ಸಮಯವನ್ನು ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿದೆ.
ಉಳಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳುವಂತೆ:
* ಜನವರಿ 31, 2014ರ ಅನ್ವಯ ರಾಜ್ಯದಲ್ಲಿ ಈಗಾಗಲೇ 4.46 ಕೋಟಿ ಮತದಾರರಿದ್ದಾರೆ.
* ರಾಜ್ಯಾದ್ಯಂತ ಶನಿವಾರದವರೆಗೆ ಹೊಸದಾಗಿ 3.14 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ.
* online ಮುಖಾಂತರವೂ 40,000 ಅರ್ಜಿಗಳು ಬಂದಿವೆ.
* ಭಾನುವಾರ ನಡೆದ ವಿಶೇಷ ಅಭಿಯಾನದಲ್ಲಿ ಒಂದೇ ದಿನ 2.44 ಲಕ್ಷ ಹೊಸ ಅರ್ಜಿ ಬಂದಿದೆ.
* ಇನ್ನೂ ನಾಲ್ಕು ಜಿಲ್ಲೆಗಳ ಮಾಹಿತಿ ಬರಬೇಕಾಗಿದೆ.
* ಮತಯಂತ್ರಗಳ ಕೊರತೆ ಇಲ್ಲ.
* ಮಾರ್ಚ್ 16 ರವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ.
* ಅರ್ಜಿ ಸಲ್ಲಿಸಿದ 10 ದಿನಗಳಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲಾಗುವುದು.
* ಆ ಬಳಿಕ ಒಂದು ವಾರದಲ್ಲಿ ಹೊಸ ಮತದಾರರಿಗೆ ಗುರುತಿನ ಚೀಟಿ (EPIC) ವಿತರಣೆ ಮಾಡಲಾಗುವುದು.
* ಬೆಂಗಳೂರುಒನ್ ಮತ್ತು ಕರ್ನಾಟಕಒನ್ ಕೇಂದ್ರಗಳಲ್ಲೂ EPIC ಕಾರ್ಡ್ ಪಡೆಯಬಹುದು.
* ಇಂದು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ.
* ಅತಿ ಕಡಿಮೆ ಹಾಗೂ ಹೆಚ್ಚು ಮತದಾರರ ಕ್ಷೇತ್ರ:
1) ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 13,51,245 ಮತದಾರರಿದ್ದಾರೆ.
2) ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 22,24,847 ಮತದಾರರು ಇದ್ದಾರೆ.
ಚುನಾವಣಾ ದಿನಾಂಕ ಬದಲಾವಣೆ?: ಚುನಾವಣಾ ದಿನಾಂಕ ಬದಲಾಯಿಸುವ ಬಗ್ಗೆ ಆರ್ಚ್ ಬಿಷಪ್ ಹಾಗೂ ಬಿಜೆಪಿ ಪಕ್ಷದಿಂದ ಮನವಿಗಳು ಬಂದಿವೆ. ಈ ಮನವಿಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಾಗುವುದು ಎಂದು ಅನಿಲ್ ಕುಮಾರ್ ಝಾ ತಿಳಿಸಿದ್ದಾರೆ. (ಕರ್ನಾಟಕ ವಾರ್ತೆ)












Click it and Unblock the Notifications