ಕಾಂಗ್ರೆಸ್ ಸೇರುವ ಬಗ್ಗೆ ಎಲ್. ಆರ್. ಶಿವರಾಮೇಗೌಡ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 26 : ಜೆಡಿಎಸ್ ನಾಯಕ, ಮಂಡ್ಯ ಕ್ಷೇತ್ರದ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಉಪ ಚುನಾವಣೆ ಸಮಯದಲ್ಲಿ ಹಬ್ಬಿರುವ ಸುದ್ದಿಗಳಿಗೆ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ.
ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸಭೆ ಸೇರಿದ್ದರು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಸಭೆಯಲ್ಲಿದ್ದರು.
ಕಾಂಗ್ರೆಸ್ ನಾಯಕರ ಸಭೆ ನಡೆಯುವಾಗಲೇ ಎಲ್. ಆರ್. ಶಿವರಾಮೇಗೌಡ ಹೋಟೆಲ್‌ಗೆ ಭೇಟಿ ನೀಡಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಶಿವರಾಮೇಗೌಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.
ಗುರುವಾರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಎಲ್. ಆರ್. ಶಿವರಾಮೇಗೌಡ ಈ ಸುದ್ದಿಗಳಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಮೊದಲು ಕಾಂಗ್ರೆಸ್‌ನಲ್ಲಿಯೇ ಇದ್ದ ಎಲ್. ಆರ್. ಶಿವರಾಮೇಗೌಡರು 2018ರ ವಿಧಾನಸಭೆ ಚುನಾವಣೆಗೂ ಮೊದಲೇ ಜೆಡಿಎಸ್‌ಗೆ ಬಂದಿದ್ದರು.

ಶಿವರಾಮೇಗೌಡರ ಸ್ಪಷ್ಟನೆ
ತಮ್ಮ ಫೇಸ್ ಬುಕ್ ಪುಟದಲ್ಲಿ ಎಲ್. ಆರ್. ಶಿವರಾಮೇಗೌಡರು, ಪ್ರತಿದಿನ ನಾನು Radisson Blu / Radisson Blu Atria Bengaluru ಹೋಟೆಲ್ ಬರುತ್ತಿರುತ್ತೇನೆ. ಹೀಗೆ ಬಂದ ಸಂದರ್ಭದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಸಭೆಗೂ ನನಗೂ ಯಾವುದೇ ಸಂಬಂಧ ಕಲ್ಪಿಸುವುದು ಬೇಡ. ಪ್ರಸ್ತುತ ನಾನು ಜೆಡಿಎಸ್‌ನ ಸಕ್ರಿಯ ಕಾರ್ಯಕರ್ತ, ನಮ್ಮ ಸ್ನೇಹಿತರನ್ನು ಭೇಟಿಯಾಗಲೂ ಮತ್ತು ಇನ್ನಿತರ ವಿಷಯಗಳಿಗೆ ನಾನು ಇಲ್ಲಿ ಬರುವುದು ಸರ್ವೇ ಸಾಮಾನ್ಯ ನನಗೂ & ಈ ಸಭೆಗೂ ಯಾವುದೇ ಸಂಬಂಧ ವಿಲ್ಲ ಎಂದು ಹೇಳಿದ್ದಾರೆ.

ಹಿಂದೆಯೂ ಸ್ಪಷ್ಟನೆ ಕೊಟ್ಟಿದ್ದರು
2019ರ ಲೋಕಸಭಾ ಚುನಾವಣೆ ಸಮಯದಲ್ಲಿಯೂ ಶಿವರಾಮೇಗೌಡ ಜೆಡಿಎಸ್ ಬಿಡುವ ಸುದ್ದಿಗಳು ಹಬ್ಬಿದ್ದವು. ಆಗ ಅವರು, "ಶಿವರಾಮೇಗೌಡರನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ನಾನಾಗಿಯೇ ಹೋಗಬೇಕೆ ಹೊರತು ಯಾರೂ ನನ್ನನ್ನು ಕರೆಯುವುದಿಲ್ಲ. ಜೆಡಿಎಸ್‌ನಲ್ಲೇ ನನ್ನ ರಾಜಕೀಯ ಅಂತ್ಯ" ಎಂದು ಸ್ಪಷ್ಟನೆ ನೀಡಿದ್ದರು.

ದೇವೇಗೌಡ, ಎಚ್‌ಡಿಕೆ ಹಿತ್ತಾಳೆ ಕಿವಿ
ಕಳೆದ ವಾರ ಎಲ್. ಆರ್. ಶಿವರಾಮೇಗೌಡರು, "ಎಚ್. ಡಿ. ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರ ದೇಹವೆಲ್ಲಾ ಬಂಗಾರ. ಆದರೆ, ಕಿವಿ ಮಾತ್ರ ಹಿತ್ತಾಳೆ. ದೇವೇಗೌಡ, ಕುಮಾರಸ್ವಾಮಿ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ಅಸಮಾಧಾನ ವಿದ್ದರೆ ಬಗೆ ಹರಿಸಿಕೊಳ್ಳುತ್ತೇವೆ" ಎಂದು ಹೇಳಿದ್ದರು.

ಎಚ್. ಡಿ. ರೇವಣ್ಣ ವಾಗ್ದಾಳಿ
"ಎಚ್. ಡಿ. ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಅವರ ದೇಹವೆಲ್ಲಾ ಬಂಗಾರ. ಆದರೆ, ಕಿವಿ ಮಾತ್ರ ಹಿತ್ತಾಳೆ" ಎಂದು ಹೇಳಿದ್ದ ಎಲ್. ಆರ್. ಶಿವರಾಮೇಗೌಡ ವಿರುದ್ಧ ಎಚ್. ಡಿ. ರೇವಣ್ಣ ವಾಗ್ದಾಳಿ ನಡೆಸಿದ್ದರು.
"ಕಸದಬುಟ್ಟಿಯಲ್ಲಿ ಇದ್ದವರನ್ನು ತೆಗೆದುಕೊಂಡು ಗೆಲ್ಲಿಸುತ್ತಾರೆ. ಶಿವರಾಮೇಗೌಡ ಅಂಥವರನ್ನು ಬೆಳೆಸುತ್ತಾರೆ. ಇದು ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ದೌರ್ಭಾಗ್ಯ" ಎಂದು ಹೇಳಿದ್ದರು.












Click it and Unblock the Notifications