ಲಾಟರಿ ಹಗರಣದ ಸಿಬಿಐ ತನಿಖೆ ಇಲ್ಲ : ಸಿದ್ದರಾಮಯ್ಯ
ಬೆಂಗಳೂರು, ಮೇ 25 : ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಸ್ಪಷ್ಟಪಡಿಸಿದ್ದಾರೆ. ಅತ್ತ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಇಂದು ಸಹ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಸೋಮವಾರ ಗೃಹ ಕಚೇರಿಯ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, 'ಎಲ್ಲಾ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ವಹಿಸಲು ಸಾಧ್ಯವಿಲ್ಲ, ಲಾಟರಿ ಹಗರಣದ ಕುರಿತು ಸಿಐಡಿ ತನಿಖೆ ನಡೆಯುತ್ತಿದೆ' ಎಂದು ಹೇಳಿದರು. [ಲಾಟರಿ ಹಗರಣ, ವಿವರ ಕೇಳಿದ ರಾಜ್ಯಪಾಲರು]

ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂಬ ಪ್ರತಿಪಕ್ಷಗಳ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, 'ಸಿಐಡಿ ತನಿಖೆಯ ಮಧ್ಯಂತರ ವರದಿ ಸರ್ಕಾರಕ್ಕೆ ಬಂದಿದೆ. ಅಂತಿಮ ವರದಿ ಬಂದ ಬಳಿಕ ಅಗತ್ಯವಿದ್ದರೆ ಸಿಬಿಐ ತನಿಖೆ ನಡೆಸುವ ಕುರಿತು ತೀರ್ಮಾನಿಸಲಾಗುತ್ತದೆ' ಎಂದರು. [ಸಿಬಿಐ ತನಿಖೆಗೆ ಪ್ರತಿಪಕ್ಷಗಳ ಪಟ್ಟು]
ಸಿಬಿಐ ತನಿಖೆಗೆ ದೇವೇಗೌಡರ ಆಗ್ರಹ : ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ' ಹಗರಣದ ಕುರಿತು ಸರ್ಕಾರ ಇಷ್ಟು ದಿನ ಏಕೆ ಕ್ರಮ ಕೈಗೊಂಡಿಲ್ಲ? ಎಂದು ಪ್ರಶ್ನಿಸಿದರು.
ಅಲೋಕ್ ಕುಮಾರ್ ಹಾಜರು : ಲಾಟರಿ ಹಗರಣದ ಸಂಬಂಧ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಸೋಮವಾರ ಸಹ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಭಾನುವಾರ 6 ತಾಸುಗಳ ಕಾಲ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು.
ರಾಜ್ಯಪಾಲರ ಭೇಟಿ : ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಲಾಟರಿ ಹಗರಣವನ್ನು ರಾಜಭವನಕ್ಕೆ ತೆಗೆದುಕೊಂಡು ಹೋಗಲಿವೆ. ಹಗರಣದವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ನೇತೃತ್ವದ ನಿಯೋಗ ಒಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿವೆ.












Click it and Unblock the Notifications